Advertisement

ಕಾಪು:ಅಶ್ವತ್ಥ ನಾರಾಯಣ, ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್ ಮುಖಂಡರಿಂದ ಮುತ್ತಿಗೆ!

09:14 PM Sep 25, 2021 | Team Udayavani |

ಕಾಪು: ಬೆಳಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡದಿರುವ ಬಗ್ಗೆ ಮತ್ತು ವಿವಿಧ ಮೂಲಸೌಕರ್ಯಗಳ ಜೋಡಣೆಗೆ ಒತ್ತಾಯಿಸಿ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಮತ್ತು ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.

Advertisement

ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್ ಸಹಿತ ಗಣ್ಯರನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯೊಂದಿಗೆ ಸ್ವಾಗತ ಕೋರಿದರು‌.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜನ್ನು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರುಗೊಳಿಸಲಾಗಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ನಮ್ಮನ್ನು  ಮರೆತಿರುವುದು ನೋವನ್ನುಂಟು ಮಾಡಿದೆ. ಈ ಬಗ್ಗೆ ಸಚಿವರಲ್ಲಿ ತಮ್ಮ ಅಹವಾಲು ಮಂಡಿಸಿದರು.

ಇದನ್ನೂ ಓದಿ:ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಬೆಳಪು ಗ್ರಾ.ಪಂ. ಮಾಜಿ‌ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬಹುನಿರೀಕ್ಷೆಯ ಕಾಪು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ರಸ್ತೆಯನ್ನೂ ಸರಿಪಡಿಸಿಲ್ಲ. ಈ ಪರಿಸರದಲ್ಲಿರುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವಲ್ಲಿ ಆಡಳಿತವು ವಿಫಲವಾಗಿದೆ. ಕಾಲೇಜಿಗೆ ಅಗತ್ಯವಾಗಿ ನಡೆಯಬೇಕಿರುವ ಮೂಲ ಸೌಕರ್ಯಗಳ ಜೋಡಣೆಯೂ ಆಗಿಲ್ಲ. ಇದನ್ನು ವಿರೋಧಿಸಿ ನಾವು ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿದ್ದೇವೆ ಎಂದರು.

Advertisement

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ಶಿವಾಜಿ ಸುವರ್ಣ,, ವೈ. ಸುಕುಮಾರ್, ಪ್ರಶಾಂತ್ ಜತ್ತನ್ನ, ನವೀನ್ ಎನ್. ಶೆಟ್ಟಿ, ರಮೀಝ್ ಪಡುಬಿದ್ರಿ, ಸರಸು ಬಂಗೇರ, ಅಖಿಲೇಶ್ ಕೊಟ್ಯಾನ್, ಆಶಾ ಕಟಪಾಡಿ, ಜಿತೇಂದ್ರ ಪುಟಾರ್ಡೊ, ಯಶವಂತ ಶೆಟ್ಟಿ,  ಇಮ್ರಾನ್ ಮಜೂರು, ಯು.ಸಿ ಶೇಖಬ್ಬ, ವಾಮನ ಕೋಟ್ಯಾನ್, ಸುನೀಲ್ ಬಂಗೇರ, ಸುಧೀರ್ ಕರ್ಕೇರ, ಡೇವಿಡ್ ಡಿ ಸೋಜ, ಕೇಶವ ಹೆಜಮಾಡಿ, ಜಹೀರ್ ಅಹಮದ್  ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಧಿಕ್ಕಾರ, ಸೊರಕೆಯವರಿಗೆ ಜೈಕಾರ ಹಾಕಿ ಘೋಷಣೆ ಕೂಗಿದ್ದು, ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕೀ ಜೈ ಘೋಷಣೆ ಕೂಗಿದರು. ಈ ವೇಳೆ ಸಂಘರ್ಷಮಯ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next