Advertisement

ಕರಗ ಕಣ್ತುಂಬಿಕೊಳ್ಳಲು ರಾಜಧಾನಿ ಕಾತರ

11:44 AM Apr 10, 2017 | Team Udayavani |

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಾನುವಾರ ರಾತ್ರಿ ಹಸಿ ಕರಗ ನೆರವೇರಿಸಲಾಯಿತು. ಹೂವಿನ ಕರಗಕ್ಕೆ ಮಂಗಳವಾರ (ಏ.11) ಮಧ್ಯರಾತ್ರಿ 12 ಗಂಟೆಗೆ ಚಾಲನೆ ದೊರೆಯಲಿದೆ.

Advertisement

ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡಿರುವ ಅರ್ಚಕ ಜ್ಞಾನೇಂದ್ರ ಅವರು ಕಬ್ಬನ್‌ ಉದ್ಯಾನದಲ್ಲಿರುವ ಕರಗದ ಕುಂಟೆಯಲ್ಲಿ ಪೂಜೆ ಸಲ್ಲಿಸಿದ ನಂತರ ರಾತ್ರಿ ಹಸಿಕರಗ ಉತ್ಸವ ನೆರವೇರಿಸಿದರು. 

ಮಂಗಳವಾರ ಮಧ್ಯರಾತ್ರಿ ಪ್ರತಿಷ್ಠಿತ ಹೂವಿನ ಕರಗ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಜನರು ಕರಗ ಮಹೋತ್ಸವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಕರಗದ ಹಿನ್ನೆಲೆಯಲ್ಲಿ ತಿಗಳರಪೇಟೆ, ಅಕ್ಕಿಪೇಟೆ, ಬಳೆಪೇಟೆ, ಚಿಕ್ಕಪೇಟೆ, ಸುಲ್ತಾನ್‌ಪೇಟೆ ಮತ್ತಿತರ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಎಲ್ಲ ಭಾಗದಲ್ಲಿರುವ ದೇವಾಲಯಗಳು ಮತ್ತು ದರ್ಗಾಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ಪ್ರತಿ ವರ್ಷ ನಗರದ ಹೃದಯ ಭಾಗದಲ್ಲಿ ಆಚರಿಸುತ್ತಾ ಬಂದಿರುವ ಕರಗ ಉತ್ಸವ, ಕರ್ನಾಟಕದ ದಕ್ಷಿಣ ಭಾಗದ ತಿಗಳ (ವಹಿ° ಕುಲ) ಸಮುದಾಯದ ಪಾರಂಪರಿಕ ಆಚರಣೆ. ಕುರುಕ್ಷೇತ್ರ ಯುದ್ಧದ ನಂತರ ತಿಮಿರ ಎಂಬ ರಾಕ್ಷಸನ ಉಪಟಳ ಅಂತ್ಯಗೊಳಿಸಲು ದ್ರೌಪದಿಯು ಆದಿಶಕ್ತಿ ಸ್ವರೂಪ ತಳೆದು ತಲೆಯ ಮೇಲೆ ಕಳಸ ಧರಿಸಿ, ತಿಮಿರನನ್ನು ಸಂಹರಿಸಿದ ಸಂಕೇತವೇ ಕರಗ ಎನ್ನುತ್ತದೆ ಪುರಾಣ. 

ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಧರ್ಮರಾಯ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಮಂಗಳವಾರ (ಏ.11) ಮಧ್ಯರಾತ್ರಿ 12ಕ್ಕೆ ಚಾಲನೆ ದೊರೆಯಲಿದೆ. ಅಂದು  ಮುಂಜಾನೆಯಿಂದಲೇ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಲಿವೆ.  

Advertisement

ಅಂದು ಬೆಳಗ್ಗೆ 10.30ಕ್ಕೆ ಕರಗ ಹೊರುವ ಪೂಜಾರಿ ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು ಕಬ್ಬನ್‌ ಪಾರ್ಕ್‌ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗಾ ಪೂಜೆ ಸಲ್ಲಿಸಲಿದ್ದಾರೆ. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ತಂದು, ವಿಶೇಷ ಪೂಜೆ ನೆರವೇರಿಸಿ ದೇವಾಲಯಕ್ಕೆ ಕರೆತರಲಾಗುವುದು. ರಾತ್ರಿ ಹೂವಿನ ಕರಗೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next