ಬೆಂಗಳೂರು/ಕುಂದಾಪುರ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್ ಅಂದರೆ ಎರಡನೇ ಭಾಗದ ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸೋಮವಾರ( ನ.27 ರಂದು) ನೆರವೇರಿದೆ.
ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಕನ್ನಡದಲ್ಲಿ ಹಿಟ್ ಆಗಿ, ಪ್ರಾದೇಶಿಕ ಭಾಷೆಯಲ್ಲಿ ರಿಮೇಕ್ ಆಗಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಿತು.
ಸಿನಿಮಾದ ಚಾಪ್ಟರ್ -1(ಪ್ರೀಕ್ವೆಲ್) ರಿಲೀಸ್ ಬರಲಿದೆ ಎಂದು ರಿಷಬ್ ಶೆಟ್ಟಿ ʼಕಾಂತಾರʼ 100 ಡೇಸ್ ಸಂಭ್ರಮದಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ. ಲೋಕೇಷನ್ ಹುಡುಕಾಟ, ಸ್ಕ್ರಿಪ್ಟ್ ಕೆಲಸ ಮುಗಿಸಿದ ಬಳಿಕ ಸಿನಿಮಾ ತಂಡ ಮುಹೂರ್ತವನ್ನು ನೆರವೇರಿಸಿದೆ.
ಮುಹೂರ್ತದ ಜೊತೆಗೆ ಫಸ್ಟ್ ಲುಕ್ ರಿಲೀಸ್ ಮಾಡಿ, ಸಿನಿಮಾದ ಬಗ್ಗೆ ಹೈಪ್ ಹೆಚ್ಚಿಸಿದೆ. ರಿಷಬ್ ಶೆಟ್ಟಿ ಕೈಯಲ್ಲಿ ತ್ರಿಶೂಲ ಇಟ್ಟುಕೊಂಡು, ಉದ್ದ ಗಡ್ಡವನ್ನು ಬಿಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟುಕೊಂಡು ರೌದ್ರ ಅವತಾರವನ್ನು ತಾಳಿದ್ದಾರೆ. ಯುದ್ದದಲ್ಲಿ ಹೋರಾಡುವ ರೀತಿ ತೋರಿಸಲಾಗಿದೆ.
7 ಭಾಷೆಯಲ್ಲೂ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಜನೀಶ್ ಅವರ ಮ್ಯೂಸಿಕ್ ಟೀಸರ್ ನಲ್ಲಿ ವೀಕ್ಷಕರನ್ನು ರೋಮಾಂಚನಗೊಳಿಸಿದೆ.
ಕೆಲ ಮೂಲಗಳ ಪ್ರಕಾರ ʼಕಾಂತಾರʼ ಪ್ರೀಕ್ವೆಲ್ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ. ಕ್ರಿ.ಶ. 301-400 ಕಾಲದ ಕಥೆ ಇರಲಿದೆ ಎನ್ನಲಾಗಿದೆ.
ಅಂದಹಾಗೆ ಹೊಂಬಾಳೆ ನಿರ್ಮಾಣದ ʼಕಾಂತಾರʼ ಪ್ರೀಕ್ವೆಲ್ ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.