Advertisement

ಕನ್ನಡಿಗರ ಜಲವಾಸ್ತುಶಿಲ್ಪ ಪ್ರೇರಣೀಯ

01:03 PM Apr 21, 2017 | |

ದಾವಣಗೆರೆ: ಹಲವಾರು ಶತಮಾನಗಳ ಹಿಂದೆಯೇ ಭಾರತೀಯರು ಅನುಸರಿಸುತ್ತಿದ್ದ ನೈಪುಣ್ಯತೆಯ ಜಲವಾಸ್ತುಶಿಲ್ಪ ತಾಂತ್ರಿಕತೆ ಇಂದಿನ ಹಲವಾರು ಜಲಾಶಯ, ಕ್ರೆಸ್ಟ್‌ಗೇಟ್‌ ವಿನ್ಯಾಸಕ್ಕೆ ಮೂಲ ಪ್ರೇರಣೆ ಎಂದು ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ| ರಾಜಾರಾಮ ಹೆಗ್ಡೆ ತಿಳಿಸಿದ್ದಾರೆ.

Advertisement

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ, ದಾವಣಗೆರೆ ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಗುರುವಾರ ಕುವೆಂಪು ಕನ್ನಡ ಭವನದಲ್ಲಿಹಮ್ಮಿಕೊಂಡಿರುವ ಮಧ್ಯಕಾಲೀನ ಕರ್ನಾಟಕದ  ಜಲವಾಸ್ತುಶಿಲ್ಪ… ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಆಶಯ ನುಡಿಗಳಾಡಿದರು.

ಭಾರತೀಯರು ಕೆರೆಗೆ ಕಟ್ಟುತ್ತಿದ್ದ ಕೋಡಿಗಳನ್ನ ನೋಡಿಯೇ ಬ್ರಿಟಿಷರು ಜಲಾಶಯಗಳ ಕ್ರೆಸ್ಟ್‌ಗೇಟ್‌ ವಿನ್ಯಾಸ, ಅಳವಡಿಕೆ ಪ್ರಾರಂಭಿಸಿದ್ದು. ಭಾರತದ ಅದರಲ್ಲೂ ಕರ್ನಾಟಕದ ಜಲವಾಸ್ತುಶಿಲ್ಪ ಎಂತಹವರನ್ನು ನಿಬ್ಬೆರಗಾಗಿಸುವಂತದ್ದು ಎನ್ನುವುದಕ್ಕೆ ಸಾವಿರಾರು ಉದಾಹರಣೆ ಇವೆ ಎಂದರು. 

ಗುಜರಾತ್‌ನ ಗಿರ್‌ ಪ್ರದೇಶದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಿದ ಸುದರ್ಶನ ಕೆರೆ ಭಾರತೀಯ ಜಲವಾಸ್ತುಶಿಲ್ಪಕ್ಕೆ ಮೊದಲ ಉದಾಹರಣೆ. ರಟ್ಟಿಹಳ್ಳಿ ಸಮೀಪದ ಮದಗದ ಕೆರೆ, ಚನ್ನಗಿರಿ ಸಮೀಪದ ಸೂಳೆಕೆರೆ, ಸಂತೇಬೆನ್ನೂರು ಐತಿಹಾಸಿಕ ಪುಷ್ಕರಣಿ, ಹಂಪಿ, ವಿಜಯಪುರ, ಚಿತ್ರದುರ್ಗದಲ್ಲಿನ ಕೆರೆ, ಬಾವಿ, ಮಾಳಿಗೆ ಬಾವಿ,  ಬಾವಡಿ.. ಜಲವಾಸ್ತುಶಿಲ್ಪದ ವಿವಿಧ ಪ್ರಾಕಾರಗಳು. 

ಭಾರತೀಯರು ನೀರನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ. ಹಾಗಾಗಿಯೇ ನೀರನ್ನು ಗಂಗೆ, ಜಲದೇವತೆ ಎಂದೆಲ್ಲಾ ಪೂಜಿಸುತ್ತಾರೆ. ನೀರಿನ ಸಂರಕ್ಷಣೆಗಾಗಿ ರೂಪಿತವಾದ ಜಲವಾಸ್ತುಶಿಲ್ಪ ಇಂದಿನ ಅನೇಕ ಜಲಾಶಯ, ಕೃತಕ ಸರೋವರ ನಿರ್ಮಾಣಕ್ಕೆ ಕಾರಣವಾಗಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. 

Advertisement

ಕಲ್ಲು ತುಂಬಿರುವ ಬೆಟ್ಟದಲ್ಲೂ ಕೆರೆ, ಹೊಂಡ, ಪುಷ್ಕರಣಿ ನಿರ್ಮಿಸಿರುವ ಭಾರತೀಯರಿಗೆ ಶತಮಾನಗಳ ಹಿಂದೆಯೇ ಮಳೆ ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು, ವೈಜ್ಞಾನಿಕ ವಿತರಣೆ ಬಗ್ಗೆ ಗೊತ್ತಿತ್ತು. ಈಗಿನವರೇ ಎಲ್ಲವನ್ನೂ ಮರೆಯುತ್ತಿರುವ ಕಾರಣಕ್ಕಾಗಿಯೇ ನಗರ, ಗ್ರಾಮೀಣ ಪ್ರದೇಶದಲ್ಲಿ  ನೀರಿನ ಹಾಹಾಕಾರ ಕಂಡು ಬರುತ್ತಿದೆ. 

ಜೀವನಾಧಾರವಾಗಿರುವ ನೀರಿನ ಸಂರಕ್ಷಣೆ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನಮ್ಮ ಪೂರ್ವಜರು ಅನುಸರಿಸುತ್ತಿದ್ದ ಜಲ ಸಂರಕ್ಷಣಾ ವಾಸ್ತುಶಿಲ್ಪ ತಾಂತ್ರಿಕತೆಯನ್ನು ಮುಂದುವರೆಸುವ ದಿಕ್ಕಿನಲ್ಲಿ ಈ ವಿಚಾರ ಸಂಕಿರಣ ಮಾರ್ಗದರ್ಶನದ ವೇದಿಕೆಯಾಗಲಿ ಎಂದು ಆಶಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next