Advertisement

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

11:54 PM Sep 21, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಹುಲಿಗಳ ಕಾದಾಟದಲ್ಲಿ ತೀವ್ರ ಗಾಯಗೊಂಡಿದ್ದ ಸುಮಾರು 11 ವರ್ಷದ ಗಂಡು ಹುಲಿಯನ್ನು ರಕ್ಷಿಸಿ, ಸೂಕ್ತ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ.

Advertisement

ನಾಗರಹೊಳೆ ವಲಯದ ಕುಂತೂರು ಅರಣ್ಯ ಸಫಾರಿ ಪ್ರದೇಶದಲ್ಲಿ ಪ್ರವಾಸಿಗರ ಆಕರ್ಷಕವಾಗಿದ್ದ ಮೂಗ ಹುಲಿಯೆಂದೇ ಕರೆಯಲ್ಪಡುತ್ತಿದ್ದ ಹುಲಿಯು ಮತ್ತೂಂದು ಗಂಡು ಹುಲಿಯ ಜೊತೆ ಕಾದಾಟ ನಡೆಸಿ ತೀವ್ರ ಗಾಯಗೊಂಡಿತ್ತು, ಈ ಹುಲಿಯು ಮೂರ್‍ನಾಲ್ಕು ದಿನಗಳ ಹಿಂದೆ ಕುಟ್ಟ-ಪೊನ್ನಂಪೇಟೆ ಮುಖ್ಯ ರಸ್ತೆ ಮಧ್ಯದಲ್ಲೇ ಕುಳಿತು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿತ್ತು.

ನಾಗರಹೊಳೆ ಡಿಸಿಎಫ್‌ ಸೀಮಾಪಿ.ಎ.ರವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ ಶಾರ್ಪ್‌ ಶೂಟರ್‌ ಕೆ.ಪಿ.ರಂಜನ್‌ರವರು ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿದ್ದು ಖಚಿತಪಡಿಸಿಕೊಂಡ ನಂತರ ತಪ್ಪಿಸಿದರು. ಅರಣ್ಯಇಲಾಖೆಯ ಪಶು ವೈದ್ಯಾಧಿಕಾರಿಗಳಾದ ಡಾ.ಎಚ್‌.ರಮೇಶ್‌, ಡಾ.ವಾಸಿಂ ಮಿರ್ಜಾರವರು ನಿತ್ರಾಣಗೊಂಡಿದ್ದ ಹುಲಿಯ ಮೈ ಮೇಲೆ ಆಗಿದ್ದ ಗಾಯಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ವಾಹನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾ ಉದಯವಾಣಿಗೆ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ನಾಗರಹೊಳೆ ಉಪವಿಭಾಗದ ಎಸಿಎಫ್‌ ಅನನ್ಯಕುಮಾರ್‌, ಆರ್‌ಎಫ್‌ಒ ಎಚ್‌.ಎಂ.ಮಂಜುನಾಥ್‌, ಡಿಆರ್‌ಎಫ್‌ಒ ಗಳಾದ ಗುರುಮೂರ್ತಿ, ನಾಗರಾಜು, ಚೇತನ್‌ಕುಮಾರ್‌ಕೋಳೂರ, ಖಂಡೆ ಇದ್ದರು.

Advertisement

ಹಾಡಹಗಲೇ ಹುಲಿ ದಾಳಿಗೆ ಎರಡು ಹಸುಗಳಿಗೆ ಗಾಯ
ಹುಣಸೂರು: ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳಲ್ಲಿ ಮತ್ತೆ ಹುಲಿ ದಾಳಿ ಮುಂದುವರಿದಿದ್ದು, ಹಾಡಹಗಲೇ ಹುಲಿಯೊಂದು ಜಾನುವಾರುಗಳ ಮೇಲೆ ದಾಳಿ ನಡೆಸಿರುವ ಘಟನೆ ಸಮೀಪದ ಕೊಳುವಿಗೆ ಗ್ರಾಮದಲ್ಲಿ ಶನಿವಾರ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕೊಳುವಿಗೆ ಗ್ರಾಮದ ರಾಜೇಂದ್ರ ಹಾಗೂ ಗಿರೀಶ್‌ ರವರ ಜಾನುವಾರುಗಳು ಹುಲಿ ದಾಳಿಗೆ ಸಿಲುಕಿಗಾಯಗೊಂಡಿವೆ.

ಕೊಳುವಿಗೆ ಬಸವೇಶ್ವರ ದೇವಾಲಯದ ಬಳಿ ಜಾನುವಾರುಗಳನ್ನು ಮೇವು ಮೇಯಲು ಬಿಟ್ಟಿದ್ದ ವೇಳೆ ರಾಜೇಂದ್ರ ಅವರ ಹಸುವಿನ ಮೇಲೆ ದಾಳಿ ನಡೆಸಿದೆ. ಅಷ್ಟರಲ್ಲಿ ಪಕ್ಕದಲ್ಲೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಹುಲಿಯನ್ನು ಹಿಮ್ಮೆಟ್ಟಿಸಿ ಹಸುವನ್ನು ಹುಲಿ ದಾಳಿಯಿಂದ ರಕ್ಷಿಸಿದ್ದಾರೆ. ಕೆಲ ಹೊತ್ತಿನಲ್ಲೇ ಮತ್ತೇ ಅದೇ ಸ್ಥಳಕ್ಕೆ ಹುಲಿ ದಾಳಿಯಿಟ್ಟಿದೆ ಗ್ರಾಮದ ಗಿರೀಶ್‌ ಅವರ ಜಾನುವಾರು ಮೇಲೆ ದಾಳಿ ನಡೆಸಿದೆ. ಅರಣ್ಯ ಸಿಬ್ಬಂದಿ ಕೂಗಾಟ ಕೇಳಿದ ಅಕ್ಕ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಹಾಗೂ ಗ್ರಾಮಸ್ಥರು ಸೇರಿ ಕೂಗಾಟ ನಡೆಸಿದ್ದರಿಂದ ಹೆದರಿದ ಹುಲಿ ಕಾಡಿನೊಳಗೆ ಪೇರಿಕಿತ್ತಿದೆ.

ಕೆಲವು ದಿನಗಳಿಂದ ವಿರಾಮ ನೀಡಿದ್ದ ಹುಲಿರಾಯ ಮತ್ತೆ ತನ್ನ ಉಪಟಳ ಮುಂದುವರಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಮಹಜರ್‌ ನಡೆಸಿದ್ದಾರೆ. ಹುಲಿ ದಾಳಿಯಿಂದ ಗ್ರಾಮಸ್ಥರು ಭಯ ಭೀತರಾಗಿದ್ದು ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next