Advertisement

Joint Family: ಅಪರೂಪ ಈ ಕೂಡುಕುಟುಂಬ

04:30 PM Sep 10, 2024 | Team Udayavani |

ಮನುಷ್ಯನನ್ನು ಒಂದು ಕಡೆ ಕಟ್ಟಿಹಾಕಬಹುದು, ಆದರೆ ಆತನ ಮನಸ್ಸನ್ನು ಬಂಧಿಸಲು ಸಾಧ್ಯವಿಲ್ಲ. ಹೌದು ನಾನು ನನ್ನದೆಂಬ ಬ್ಯುಸಿ ಲೈಫ್ ನಲ್ಲಿ ನನ್ನವರೆಂಬುದು ಬಲು ಅಪರೂಪವೇ ಆಗಿದೆ. ಹುಟ್ಟಿದ್ದು ಅವಿಭಕ್ತ ಕುಟುಂಬದಲ್ಲೇ ಆದರೂ ಅದರ ಮಹತ್ವ ತಿಳಿದದ್ದು ಮಾತ್ರ ಮದುವೆ ಆದ ಅನಂತರವೇ. ಪ್ರೀತಿ, ಕಾಳಜಿ, ನಂಬಿಕೆ ಇದರ ಪ್ರತಿರೂಪವೇ ಈ ಕೂಡು ಕುಟುಂಬ.

Advertisement

ಕೂಡು ಕುಟುಂಬವನ್ನು ಬೃಂದಾವನ ಎನ್ನಬಹುದು. ದಿನ ಬೆಳಗಾದರೆ ಸಾಕು ಮನೆ ತುಂಬಾ ಬಾಲ ಗೋಪಿಕೆಯರ ಕಾಲ್ಗೆಜ್ಜೆಯ ನಾದ ಕೇಳಿಸುತ್ತೆ. ಇನ್ನು ಸಹೋದರಿಯರ ಪ್ರೀತಿಯೇ ತಿಳಿಯದವರಿಗೆ ಗೆಳತಿಯರಂತಿರುವ ಅಕ್ಕಂದಿರು, ಅಣ್ಣನ ಪ್ರೀತಿಯ ಧಾರೆಯೆರೆಯುವ ಭಾವಂದಿರು, ಅಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುವ ಅಮ್ಮನೇ ಆಗಿರುವ ಅತ್ತೆ, ಇನ್ನೂ ಅಪರೂಪಕ್ಕೆ ತವರು ಮನೆಗೆ ಬಂದು ನಮ್ಮೆಲ್ಲರ ಕಾಲೆಳೆಯುವ ನಾದಿನಿಯರು, ಮಾವ ಕಣ್ಮುಂದೆ ಇರದಿದ್ದರೂ ನಮ್ಮೆಲ್ಲರ ಮನೆ ಮನದಲ್ಲಿ ಜೀವಂತವಾಗಿರುವ ಅವರ ಉಸಿರು! ಕೆಲವೊಮ್ಮೆ ಮನಸ್ಸಿಗೆ ಅನಿಸುವುದುಂಟು ಇವರೆಲ್ಲರನ್ನೂ ಪಡೆದ ನಾವೇ ಧನ್ಯನೆಂದು.

ಒಬ್ಬರನ್ನೊಬ್ಬರು ಬಿಟ್ಟುಕೊಡದ, ನಮ್ಮ ಒಗ್ಗಟ್ಟನ್ನು ಕಂಡು ಇದ್ದರೆ ಇವರಂತಿರಬೇಕು ಅನ್ನುವ ರೀತಿಯಲ್ಲಿ ಬದುಕುವ ಕುಟುಂಬವೇ ಈ ಕೂಡು ಕುಟುಂಬ. ಅನ್ನುವವರ ಮಾತಿಗೆ ಕಿವಿಗೊಡದೆ. ಹಿರಿಯರಿಗೆ ಗೌರವಿಸಿ ಅವರ ಮಾರ್ಗದರ್ಶನಲ್ಲಿ, ಅವರು ಹೇಳಿಕೊಟ್ಟ ಜೀವನಪಾಠವನ್ನು ಮೈಗೂಡಿಸಿಕೊಂಡು ಜೀವನ ಸಾಗಿಸುವುದೇ ಖುಷಿ. ಅದರಲ್ಲೂ ಪದೇ ಪದೇ ಬರುವ  ಹಬ್ಬ, ಸಂಭ್ರಮಗಳು ನಮ್ಮ ಸಂಬಂಧಗಳನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ. ಅಷ್ಟೇ ಅಲ್ಲ ಅಜ್ಜಿ ಎಂದರೆ ಸಾಕು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅವರ ಮೊಮ್ಮಕ್ಕಳು, ಮಕ್ಕಳನ್ನು ಯಾರೂ ಗದರದಂತೆ ಮುದ್ದು ಮಾಡುವ ಅಜ್ಜಿ ಇಂತಹ ಪ್ರೀತಿ ಈ ಆಧುನಿಕ ಕಾಲಘಟ್ಟದಲ್ಲಿ ಸಿಗುವುದು ತುಂಬಾ ವಿರಳ.

ಅವಿಭಕ್ತ ಕುಟುಂಬದಿಂದ ಏನು ಪ್ರಯೋಜನ?

ಕುಟುಂಬದ ಎಲ್ಲ ಸದಸ್ಯರು ಕೆಲಸ ಮಾಡುವುದರಿಂದ ಆರ್ಥಿಕ ಹೊರೆ ಹಂಚಿಕೆಯಾಗುತ್ತದೆ. ಮಕ್ಕಳು ಅಜ್ಜ- ಅಜ್ಜಿ ಹತ್ತಿರ ಇರುವುದರಿಂದ ಉತ್ತಮ ನಂಟು ಮತ್ತು ಸಂಸ್ಕಾರ ಪಡೆಯುತ್ತಾರೆ. ಕುಟುಂಬದ ಹಿರಿಯರ ಮಾರ್ಗದರ್ಶನ ಮತ್ತು ಅನುಭವಗಳಿಂದ ಉತ್ತಮ ಮೌಲ್ಯಗಳು ಮತ್ತು ಸಂಸ್ಕೃತಿ ಸಮರ್ಥವಾಗಿ ಮುಂದುವರಿಯುತ್ತವೆ. ಕುಟುಂಬದ ಒಳಗೇ ಸಮ್ಮತಿಯ ಮತ್ತು ಸಹಕಾರದಿಂದ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಮಕ್ಕಳು ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮರಿಂದ ಸಹಾಯ, ಶ್ರದ್ಧೆ, ಮತ್ತು ಪ್ರೀತಿಯನ್ನು ಪಡೆಯುತ್ತಾರೆ. ಕುಟುಂಬದ ಸದಸ್ಯರ ನಡುವೆ ಬಾಂಧವ್ಯ ಮತ್ತು ಸಹಕಾರ ಹೆಚ್ಚುತ್ತದೆ.

Advertisement

ತುಂಬು ಕುಟುಂಬದಲ್ಲಿ ನಾವು ಹೇಗಿರಬೇಕು?

ಮನಸ್ಸಲ್ಲಿ ಕಲ್ಮಶಗಳನ್ನಿಡದೆ, ಸ್ವಾರ್ಥಿಗಳಾಗದೆ ಅಕ್ಕ ತಂಗಿಗೆ ತಾಯಿಯಂತೆ, ಅಣ್ಣ ತಮ್ಮನ ಕಷ್ಟಕ್ಕೆ ಹೆಗಲುಕೊಟ್ಟು, ತಮ್ಮನ ನೋವಿಗೆ ಧೈರ್ಯ ಹೇಳುವ ಅಣ್ಣ ಹೀಗೆ ಹೊಂದಾಣಿಕೆಯಿಂದ ಇದ್ದರೆ ಮತ್ತೀನ್ನೇನು ಬೇಕು ಈ ನಮ್ಮ ಸುಂದರ ಬದುಕಿಗೆ. ಬದುಕು ಮೂರೇ ದಿನ, ಆ ಬದುಕನ್ನು ಖುಷಿಯಿಂದ ಬದುಕೋಣ ಏನಂತೀರಾ… ಇತರರ ಬದುಕಿಗೆ ಇಣುಕಿ ನೋಡದೆ ನಮ್ಮಷ್ಟಕ್ಕೆ ನಾವಿದ್ದರೆ ಸಾಕು.

ನಾವಿಬ್ಬರು ನಮಗಿಬ್ಬರು ಎನ್ನುವ ಈ ಕಾಲದಲ್ಲಿ ಕೂಡು ಕುಟುಂಬವೆಂದರೆ ಮುಖ ತಿರಿಗಿಸಿಕೊಂಡು ಅಯ್ಯೋ ಎಂದು ಸಿಡುಕುವವರೂ ಇದ್ದಾರೆ. ನಾವಿಂದು ಮಾಡುವ ಆ ತಪ್ಪು ಮುಂದೆ ನಮ್ಮ ವಂಶಾವಳಿಯನ್ನೇ ಸುಡಬಹುದು. ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಇವರೆಲ್ಲರ ಪ್ರೀತಿ ನಮ್ಮ ಮಕ್ಕಳಿಗೆ ಅತ್ಯಗತ್ಯ. ಎಲ್ಲಿ ಪ್ರೀತಿ ಇದೆಯೋ ಅಲ್ಲಿ ನೆಮ್ಮದಿ ನೆಲೆಸಿರುತ್ತೆ. ಇಷ್ಟಲ್ಲದೆ ದೊಡ್ಡವರು ಹೇಳ್ತಾರಾ.. ತುಂಬಿದ ಕೊಡ ತುಳುಕುವುದಿಲ್ಲ ಎಂದು ತುಂಬಿದ ಸಂಸಾರದ ಸಾರಾಂಶವು ಅಷ್ಟೇ.

ಕಾವ್ಯಾ ಜಯರಾಜ್‌

ಬಾಳೆಪುಣಿ

Advertisement

Udayavani is now on Telegram. Click here to join our channel and stay updated with the latest news.

Next