ದೀಪಾ ಮಲಿಕ್… ಇವರದ್ದು ಕ್ರೀಡಾ ಜಗತ್ತಿನ ನೂರಾರು ಸ್ಪೂರ್ತಿ ಕಥೆಗಳ ನಡುವೆ ಮತ್ತೊಂದು ಕಥೆಯಲ್ಲ. ಇದು ಅತ್ಯಂತ ದಿಟ್ಟತನ, ಧೈರ್ಯ, ಅಡೆತಡೆಗಳನ್ನು ಎದುರಿಸಿ ನಿಂತ ಗಟ್ಟಿಗಿತ್ತಿ ಮಹಿಳೆಯ ಕಥೆ.
ಪ್ಯಾರಿಸ್ ನಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿರುವ ಪ್ಯಾರಾ ಒಲಿಂಪಿಕ್ಸ್ ಸಂದರ್ಭದಲ್ಲಿ ಭಾರತದ ಪದಕ ವಿಜೇತೆ ಪಟು ದೀಪಾ ಮಲಿಕ್ ಅವರ ಕಥೆಯನ್ನೊಮ್ಮೆ ಓದಿ.
1970ರಲ್ಲಿ ಜನಿಸಿದ ದೀಪಾ ಮಲಿಕ್ ಗೆ 1999 ರಲ್ಲಿ ಬೆನ್ನುಮೂಳೆಯಲ್ಲಿ ಗೆಡ್ಡೆ ಬೆಳೆದಿರುವುದು ಪತ್ತೆಯಾಗಿತ್ತು. ಪರಿಣಾಮ ಅವರು ಮೂರು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗ ಬೇಕಾಯಿತು. 14 ವರ್ಷಗಳ ಅವಧಿಯಲ್ಲಿ ಆಕೆಯ ಭುಜದ ಬ್ಲೇಡ್ ಗಳ ನಡುವೆ 183 ಹೊಲಿಗೆಗಳನ್ನು ಹಾಕಲಾಗಿತ್ತು. ಇಷ್ಟೆಲ್ಲಾ ನೋವು ತಿಂದ ಜೀವ ಸುಮ್ಮನೆ ಮನೆಯಲ್ಲಿ ಬಿದ್ದು ತಾನಾಯಿತು, ತನ್ನ ಪಾಡಾಯಿತು ಎಂದು ಜೀವನ ಕಳೆಯಿತು ಎಂದು ನೀವು ಭಾವಿಸಿದರೆ ತಪ್ಪು ನಿಮ್ಮದು. ಕಲ್ಲಿಗೆ ಬಿದ್ದ ಉಳಿ ಏಟಿನಂತೆ, ಒಂದೊಂದು ನೋವು – ಆಘಾತ ಅವಳನ್ನು ಮತ್ತಷ್ಟು ಗಟ್ಟಿಯಾಗಿಸಿತು.
ದೀಪಾ ಮಲಿಕ್ ಹುಟ್ಟಿದ್ದು 1970ರ ಸಪ್ಟೆಂಬರ್ 30ರಂದು ಹರ್ಯಾಣದ ಭೈಸ್ವಾಲ್ ನಲ್ಲಿ. ಇವರದು ಸೈನಿಕರ ಕುಟುಂಬ. ಹಾಗಾಗಿಯೇ ಏನೋ ಧೈರ್ಯ, ಛಲ ಇವರ ಆಸ್ತಿ. ಇವರು ಮದುವೆಯಾಗಿದ್ದು ಕೂಡಾ ಭಾರತೀಯ ಯೋಧನನ್ನೇ. ಇಬ್ಬರು ಮಕ್ಕಳ ತಾಯಿ, ಯೋಧನ ಹೆಂಡತಿಯಾಗಿದ್ದ ಸಾಮಾನ್ಯ ದೀಪಾ ಮಲಿಕ್ ಮುಂದೆ ದೇಶ ಮೆಚ್ಚುವ ಸಾಧಕಿಯಾಗಿದ್ದು ಮಾತ್ರ ರೋಚಕ. ನೋವೆಂಬ ಕತ್ತಲ ಹಿಂದಿನ ಬೆಳಕಿನ ಆಶಾಕಿರಣ ಹಿಡಿದು ಹೊರಟವರು ಏರಿದ್ದು ಸಾಧನೆಯ ಶಿಖರವನ್ನು. ಸಾಧಿಸಿದ್ದು ಅಸಾಧಾರಾಣವಾದುದನ್ನೇ.
ಅದೊಂದು ಕರಾಳ ದಿನ ದೀಪಾ ಅವರ ಪಾಲಿಗೆ ಆ ಶನಿ ಬಡಿದಿತ್ತು. ಮಗಳು ಜ್ವರದಿಂದ ಮಲಗಿದ್ದಳು, ಗಂಡ ಕಾರ್ಗಿಲ್ ಕದನದಲ್ಲಿ ಶತ್ರುಗಳೆದುರು ಹೋರಾಡುತ್ತಿದ್ದರು. ಇಲ್ಲಿ ದೀಪಾ ಸ್ಪೈನಲ್ ಟ್ಯೂಮರ್ ಗೆ ಒಳಗಾಗಿದ್ದರು. ದೀಪಾ ಅವರ ಸೊಂಟದಿಂದ ಕೆಳಗೆ ಸ್ವಾಧೀನವೇ ಇರಲಿಲ್ಲ. ಜೀವಮಾನವೆಲ್ಲಾ ಆಯಸ್ಸೆಲ್ಲಾ ವ್ಹೀಲ್ ಚೇರ್ ಮೇಲೆಯೇ! ದೀಪಾ ಮುಂದೆ ಜೀವನದಲ್ಲಿ ಎಂದೂ ನಡೆಯುವುದಿಲ್ಲ ಎಂದು ವೈದ್ಯರು ಘೋಷಿಸಿದ್ದರು. ಆದರೆ ಸುಮ್ಮನೆ ಬಿಟ್ಟು ಬಿಡುವ ಜಾಯಮಾನವೇ ದೀಪಾರದಲ್ಲ. ನಡೆಯಲಾರದ ಅವರು ಕಲಿತಿದ್ದು ಬೈಕಿಂಗ್, ಸ್ವಿಮ್ಮಿಂಗ್! ಇಷ್ಟೆಲ್ಲಾ ಕಷ್ಟವನ್ನು ಅನುಭವಿಸಿ, ಕ್ರೀಡಾ ಪಟುವಾಗಬೇಕೆಂದು ನಿರ್ಧರಿಸುವಾಗ ದೀಪಾರ ಪ್ರಾಯ 36 ವರ್ಷ! ಅಂದರೆ ಸಾಮಾನ್ಯ ಕ್ರೀಡಾಪಟುಗಳು ನಿವೃತ್ತಿ ಹೊಂದುವ ಪ್ರಾಯ. ಈ ಪ್ರಾಯದಲ್ಲಿ ಕ್ರೀಡಾ ತರಬೇತಿ ಆರಂಭಿಸಿದ ದೀಪಾ ತಮ್ಮ 45ರ ಹರೆಯದಲ್ಲಿ ಪ್ಯಾರಾ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದರು. ಅಂತಹ ಛಲಗಾತಿ ದೀಪಾ ಮಲಿಕ್.
ವ್ಹೀಲ್ ಚೇರ್ ನಲ್ಲೇ ಕಾಲ ಕಳೆಯಬೇಕಿದ್ದ ದೀಪಾ ಮಲಿಕ್ ಅವರಿಗೆ ಬೈಕ್ ರೈಡ್ ಮಾಡಬೇಕೆಂಬ ಆಸೆ ಉಂಟಾಗಿತ್ತು. ಹಿಮಾಲಯನ್ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಸೇರಿದ ದೀಪಾ ಕೇವಲ ಎಂಟು ದಿನದಲ್ಲಿ 1700 ಕಿ.ಮೀ ಬೈಕ್ ರೈಡ್ ಮಾಡಿ ದಾಖಲೆ ಬರೆದರು. ಜಗತ್ತಿನ ಅತೀ ಎತ್ತರದ ಮೋಟಾರ್ ವಾಹನ ರಸ್ತೆ ಲಡಾಖ್ ನ ಖಾರ್ದುಂಗಾ ಲಾ ನಲ್ಲಿ ಬೈಕ್ ಚಲಾಯಿಸಿ, ಈ ಸಾಧನೆ ಮಾಡಿದ ಮೊತ್ತ ಮೊದಲ ಕಾಲುಗಳ ಸ್ವಾಧೀನ ಕಳೆದುಕೊಂಡ ಮಹಿಳೆ ಎಂಬ ವಿಶಿಷ್ಟ ವಿಶ್ವದಾಖಲೆ ಬರೆದರು.
ಬೈಕ್ ಕ್ರೇಜ್ ಜಾಸ್ತಿಯೇ ಇದ್ದ ಕಾರಣ ತನ್ನ ತೋಳು ಮತ್ತು ಭುಜವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ದೀಪಾ ಈಜಲು ಆರಂಭಿಸುತ್ತಾರೆ. ಆದರೆ ಈಜುಕೊಳದಲ್ಲಿ ದೀಪಾರ ಸಾಧನೆಗೆ ಯಾವುದೇ ಅಡ್ಡಿಯಾಗಲಿಲ್ಲ. ಈಕೆ ಹವ್ಯಾಸಕ್ಕಾಗಿ ಆರಂಭಿಸಿದ ಈಜು ಮುಂದೆ ಹಲವು ದಾಖಲೆಗಳಿಗೆ ವೇದಿಕೆಯಾಯಿತು. ನುರಿತ ಈಜುಗಾರರು ಸಹ ನದಿ ಪ್ರವಾಹದ ವಿರುದ್ಧ ಈಜುವುದು ಕಷ್ಟ. ಅದರಲ್ಲೂ ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ 38ರ ಹರೆಯದ ದೀಪಾ 2008ರಲ್ಲಿ ಯಮುನಾ ನದಿಯಲ್ಲಿ ಪ್ರವಾಹದ ವಿರುದ್ಧವಾಗಿ ಈಜುವ ಸಂಕಲ್ಪ ತೊಟ್ಟರು. ಅದರಲ್ಲಿ ಯಶಸ್ವಿಯೂ ಆದರು. ಅದು ಕೂಡಾ ಬರೋಬ್ಬರಿ ಒಂದು ಕಿಲೋ ಮೀಟರ್!
ಇಷ್ಟಕ್ಕೆ ಮುಗಿದಿಲ್ಲ ಈಕೆಯ ಸಾಧನೆಯ ಪಟ್ಟಿ. ತನ್ನ ದೈಹಿಕ ಅಶಕ್ತತೆಯ ಕಾರಣವನ್ನು ಬದಿಗಿರಿಸಿ ಅಸಾಧ್ಯವನ್ನೆಲ್ಲಾ ಸಾಧ್ಯವಾಗಿಸುವ ಪಣ ತೊಟ್ಟರು. ಇಂತಹ ಗಟ್ಟಿಗಿತ್ತಿ ದೀಪಾ ಮುಂದೆ ಕಣ್ಣು ಹಾಯಿಸಿದ್ದು ಜಾವೆಲಿನ್ ಥ್ರೋ ಮತ್ತು ಶಾಟ್ ಪುಟ್ ಕ್ರೀಡೆಯ ಮೇಲೆ. ಗುಂಡೆಸತದಲ್ಲಿ ಪರಿಣಿತಿ ಪಡೆದ ದೀಪಾ 2016ರ ರಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕವನ್ನೂ ಗೆದ್ದರು.
2012 ಲಂಡನ್ ಪ್ಯಾರಾ ಒಲಿಂಪಿಕ್ಸ್ ಗೂ ದೀಪಾ ಮಲಿಕ್ ಹೆಸರು ಪರಿಗಣಿಸಲಾಗಿತ್ತು. ಆದರೆ ಭಾರತದಿಂದ ಕೇವಲ 10 ಮಂದಿ ಕಳುಹಿಸುವ ನಿರ್ಧಾರ ಮಾಡಿದ್ದರಿಂದ ದೀಪಾ ತಮ್ಮ ಪ್ರಥಮ ಪ್ಯಾರಾ ಒಲಿಂಪಿಕ್ಸ್ ಪದಕಕ್ಕೆ ಮತ್ತೆ ನಾಲ್ಕು ವರ್ಷ ಕಾಯಬೇಕಾಯಿತು.
ಜಾವೆಲಿನ್ ಥ್ರೋ, ಈಜು ಮತ್ತು ಶಾಟ್ ಪುಟ್ ನಲ್ಲಿ 20 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ದೀಪಾ ಮಲಿಕ್, 2010, 2014, 2018 ಹೀಗೆ ಸತತ ಮೂರು ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಪದಕ ಗೆದ್ದ ಭಾರತದ ಏಕೈಕ ಮಹಿಳೆ.
2012ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕ್ರತರಾದ ದೀಪಾ, 2017ರ ಪದ್ಮಶ್ರೀ ಗೌರವ ಪಡೆದರು. 2019ರ ಸಾಲಿನ ಕ್ರೀಡಾ ಲೋಕದ ಅತ್ಯುನ್ನತ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಕೀರ್ತನ್ ಶೆಟ್ಟಿ ಬೋಳ