ಕಿಶ್ತ್ವಾರ್: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಯಾರೂ ನಡೆಯಲು ಯೋಚನೆ ಮಾಡಲು ಸಾಧ್ಯವಾಗದ ಮಟ್ಟಕ್ಕೆ ಸಮಾಧಿ ಮಾಡಲಾಗುವುದು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ(ಸೆ16) ಹೇಳಿಕೆ ನೀಡಿದ್ದಾರೆ
ಕಿಶ್ತ್ವಾರ್ನಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಸುನಿಲ್ ಶರ್ಮ ಅವರ ಪರ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಶಾ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಸರಕಾರ ರಚಿಸಲು ಸಾಧ್ಯವಾಗುವುದಿಲ್ಲ.ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಬಗ್ಗೆ ಅವರ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಈ ಇರುವುದು ಮೋದಿ ಸರಕಾರ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುವ ಶಕ್ತಿ ಯಾರಿಗೂ ಇಲ್ಲ”ಎಂದರು.
“ಈ ಚುನಾವಣೆ ಎರಡು ಶಕ್ತಿಗಳ ನಡುವೆ, ಒಂದು ಕಡೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಮತ್ತು ಇನ್ನೊಂದು ಕಡೆ ಬಿಜೆಪಿ. ಎನ್ಸಿ-ಕಾಂಗ್ರೆಸ್ ನಾವು ಸರ್ಕಾರ ರಚಿಸಿದರೆ 370 ನೇ ವಿಧಿಯನ್ನು ಮರುಸ್ಥಾಪಿಸುತ್ತೇವೆ ಎಂದು ಹೇಳುತ್ತಿವೆ. ಅದನ್ನು ಮರುಸ್ಥಾಪಿಸಬೇಕೇ ಹೇಳಿ? ಪಹಾರಿಗಳು ಮತ್ತು ಗುಜ್ಜರುಗಳು ಮತ್ತು ಇತರರಿಗೆ ಬಿಜೆಪಿ ನೀಡಿದ ನಿಮ್ಮ ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತದೆ” ಎಂದರು.
ಕಾಶ್ಮೀರ ಈಗ ಸುರಕ್ಷಿತವಾಗಿದೆ. ಹಾಗಾಗಿ ರಾಹುಲ್ ಬಾಬಾ ಇಲ್ಲಿಗೆ ಬಂದು ಆರಾಮವಾಗಿ ಐಸ್ಕ್ರೀಂ ತಿನ್ನಬಹುದು, ಬೈಕ್ ಓಡಿಸಬಹುದು ಎಂದು ಶಾ ಕುಟುಕಿದ್ದಾರೆ.
ಅಲ್ಲದೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ, ಕಣಿವೆಯ ಲಾಲ್ಚೌಕ್ಗೆ ತೆರಳಲು ಭಯವಾಗುತ್ತಿತ್ತು ಎಂದು ನೀಡಿದ್ದ ಹೇಳಿಕೆಗೆ ಶಾ ಪ್ರತಿಕ್ರಿಯಿಸಿ, “ಶಿಂಧೆ ಸಾಹೇಬರೇ ಈಗ ನಿಮ್ಮ ಮಕ್ಕಳನ್ನೂ ಕರೆದುಕೊಂಡು ಬಂದು ಲಾಲ್ಚೌಕ್ನಲ್ಲಿ ಸುತ್ತಾಡಬಹುದು. ಯಾರೂ ನಿಮಗೆ ಹಾನಿ ಮಾಡುವ ಧೈರ್ಯ ಮಾಡುವುದಿಲ್ಲ, ಕಣಿವೆ ಅಷ್ಟು ಭದ್ರವಾಗಿದೆ’ ಎಂದಿದ್ದಾರೆ.
ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಡ್ಡರ್-ನಾಗಸೇನಿ ಸೇರಿದಂತೆ 24 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸೋಮವಾರ ಕೊನೆಯ ದಿನವಾಗಿತ್ತು.