ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯ): ಕನ್ನಡಿಗ ಪ್ರಕಾಶ್ ನಂಜಪ್ಪ ಮತ್ತು ಡಬಲ್ ಟ್ರ್ಯಾಪ್ ಶೂಟರ್ ಅಂಕುರ್ ಮಿತ್ತಲ್ ಅವರು ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದಾರೆ. ಈ ಮೂಲಕ ಭಾರತ ಒಟ್ಟಾರೆ ಐದು ಚಿನ್ನ ಸಹಿತ 15 ಪದಕ ಗೆದ್ದ ಸಾಧನೆ ಮಾಡಿದೆ.
50 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧನೆಗೈದಿದೆ. ನಂಜಪ್ಪ ಚಿನ್ನದ ಪದಕ ಜಯಿಸಿದರೆ ವಿಶ್ವಕಪ್ ಫೈನಲ್‌ನ ಕಂಚು ವಿಜೇತ ಅಮನ್‌ಪ್ರೀತ್ ಸಿಂಗ್ ಬೆಳ್ಳಿ ಮತ್ತು ಜಿತು ರಾಯ್ ಕಂಚಿನ ಪದಕ ಗೆದ್ದಿದ್ದಾರೆ. ಡಬಲ್ ಟ್ರ್ಯಾಪ್‌ನಲ್ಲಿ ಅಂಕುರ್ ಮಿತ್ತಲ್ ಚಿನ್ನ ಗೆದ್ದು ಸಂಭ್ರಮಿಸಿದರೆ ವನಿತೆಯರ ಡಬಲ್ ಟ್ರ್ಯಾಪ್‌ನಲ್ಲಿ ಶ್ರೇಯಸಿ ಸಿಂಗ್ ಬೆಳ್ಳಿ ಪಡೆದಿದ್ದಾರೆ. ಇಂಗ್ಲೆಂಡಿನ ಮ್ಯಾಥ್ಯೂ ಫ್ರೆಂಚ್ ಅವ ರನ್ನು ಸೋಲಿಸುವ ಮೂಲಕ ಮಿತ್ತಲ್ ಚಿನ್ನ ಜಯಿಸಿದರು.
ಶುಕ್ರವಾರ ನಡೆದ ಪುರುಷರ 50 ಮೀ. ಪಿಸ್ತೂಲ್ ವಿಭಾಗ ಸ್ಪರ್ಧೆಯಲ್ಲಿ ಪ್ರಕಾಶ್ ಒಟ್ಟು 222.4 ಅಂಕವನ್ನು ಸಂಪಾದಿಸಿ ಪ್ರಥಮ ಸ್ಥಾನ ಪಡೆದರು. ಶೂಟಿಂಗ್‌ನ ಆರಂಭದಿಂದಲೂ ಪ್ರಕಾಶ್ ಉತ್ತಮ ಲಯ ಕಾಯ್ದು ಕೊಂಡಿದ್ದರು. ನಿಖರ ಗುರಿ ಇಡುವಲ್ಲಿ ಯಶಸ್ವಿಯಾದ ಕನ್ನಡಿಗ ಅಂತಿಮವಾಗಿ ಚಿನ್ನದ ಪದಕ ಗೆದ್ದರು. ಭಾರತದ ಇನ್ನಿಬ್ಬರು ಶೂಟರ್‌ಗಳಾದ ಅಮನ್‌ಪ್ರೀತ್ ಸಿಂಗ್ ಬೆಳ್ಳಿ ಮತ್ತು ಜಿತು ರಾಯ್ ಕೂಡ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕ್ರಮವಾಗಿ ಕಂಚಿನ ಪದಕ ಗೆದ್ದರು.
ಇದಕ್ಕೂ ಮುನ್ನ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿಯೂ ಭಾರತೀಯರು ಕ್ಲೀನ್‌ಸ್ವೀಪ್ ಮಾಡಿದ್ದರು. ಶಹಜರ್ ರಿಜ್ವಿ ಚಿನ್ನ, ಓಂಕಾರ್ ಸಿಂಗ್ ಬೆಳ್ಳಿ, ಜಿತು ರಾಯ್ ಕಂಚಿನ ಪದಕ ಗೆದ್ದಿದ್ದರು. ಹೀಗಾಗಿ ಭಾರತಕ್ಕೆ ಇದು ಎರಡನೇ ಕ್ಲೀನ್‌ಸ್ವೀಪ್ ಆಗಿದೆ. ಉಳಿದಂತೆ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಗಗನ್ ನಾರಂಗ್ 50 ಮೀ. ರೈಫಲ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಪ್ರಕಾಶ್ ಈ ಹಿಂದೆ ಪ್ರಮುಖವಾಗಿ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚು, 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ 2014ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.