ಕೆನಡಾ:ಇಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕನ್ನಡ ಸಂಘ ಟೊರೆಂಟೋದ ಸದಸ್ಯರು ಬರ್ಲಿಂಗ್ಟನ್ ನಗರದ ಹಿಡನ್ ವ್ಯಾಲಿಯ ಉದ್ಯಾನವನದಲ್ಲಿ ವನವಿಹಾರದೊಂದಿಗೆ ಸಂಘದ ಸುವರ್ಣ ವರ್ಷದ ಆಚರಣೆಯನ್ನು ಜು.22ರಂದು ಆಚರಿಸಿದರು. 1973ರಲ್ಲಿ ಇದೇ ತಾರೀಕಿನಂದು ಕನ್ನಡ ಸಂಘ ಟೊರೆಂಟೋ ತನ್ನ ಮೊಟ್ಟ ಮೊದಲ ವಾರ್ಷಿಕ ಸಭೆಯನ್ನು ಪಿಕ್‌ನಿಕ್‌ನೊಂದಿಗೆ ಏರ್ಪಡಿಸಿತ್ತು. ಇದೇ ಸಂದರ್ಭದಲ್ಲಿ ಸಂಘವು ತನ್ನ ಸಂವಿಧಾನವನ್ನು ಅಳವಡಿಸಿಕೊಂಡಿತು.
ಅಂದು 50-60 ಅದಮ್ಯ ಉತ್ಸಾಹಿ ಕನ್ನಡಿಗರು ಸೇರಿ ಸ್ಥಾಪಿಸಿದ ಕನ್ನಡ ಸಂಘ ಇಂದು 600ಕ್ಕೂ ಹೆಚ್ಚು ಕನ್ನಡ ಕುಟುಂಬಗಳಿಂದ ಕೂಡಿ ಕೆನಡಾದ ಬೇರೆ ಬೇರೆ ಪ್ರಾಂತಗಳ ಕನ್ನಡಿಗರಿಗೂ ಸಹ ಹಿರಿಮನೆಯಂತೆ ಇದೆ. ಈ ದಿನ ವಿಶೇಷವಾಗಿ, ಮೊತ್ತ ಮೊದಲ ಪಿಕ್ನಿಕ್ ಆಯೋಜಿಸಿದ ಅನೇಕ ಹಿರಿಯರು ಬಹಳ ಸಂಭ್ರಮದಿಂದ ಭಾಗವಹಿಸಿದ್ದರು. ಅವರಲ್ಲಿ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು ಎಸ್. ರಾಮ್‌ಮೂರ್ತಿ ಮತ್ತು ಅವರ ಪತ್ನಿ ನಿರ್ಮಲಾ ಮೂರ್ತಿಯವರು ಉಪಸ್ಥಿತರಿದ್ದು, ಈ ಐತಿಹಾಸಿಕ ದಿನಕ್ಕೆ ಇನ್ನೂ ಹೆಚ್ಚಿನ ಮೆರುಗು ತಂದರು.
ಪ್ರತೀ ವರ್ಷದ ಆಚರಣೆಯಂತೆ ಈ ಬಾರಿಯೂ ಗಣೇಶನ ಮೂರ್ತಿಯ ಪೂಜೆಯೊಂದಿಗೆ ಆಚರಿಸಲಾಯಿತು. ಸಂಸ್ಥಾಪಕ ಸದಸ್ಯ ರಾಮಮೂರ್ತಿ ಹಾಗೂ ಈ ಸಾಲಿನ ಅಧ್ಯಕ್ಷರಾದ ಬೃಂದಾ ಮರಳೀಧರ ದೀಪ ಬೆಳಗುವ ಮೂಲಕ ಸುವರ್ಣ ವರ್ಷದ ಶುಭಾರಂಭಕ್ಕೆ ಚಾಲನೆ ನೀಡಿದರು. ಹಿರಿಯ ಸದಸ್ಯರಾದ ಶ್ರೀಕಾಂತ್ ಇನಾಂದರ್ ಅವರು ಅಥರ್ವ ಶೀರ್ಷ ಹಾಗೂ ವಿನಾಯಕ್ ಹೆಗಡೆಯವರು ಗಣಪ ಭಜನೆಯನ್ನು ಹಾಡಿದರು.
ಸಂಘದ ಐದು ದಶಕಗಳ ಸಂಭ್ರಮವನ್ನು ಐದು ಕೇಕ್‌ಗಳನ್ನು ಕತ್ತರಿಸಿ ಆಚರಿಸಲಾಯಿತು. ಸಂಘದ ಐದು ವಿಶೇಷ ಗುಂಪುಗಳಾದ ಹಿರಿಯರು, ಹಿಂದಿನ ಕಾರ್ಯಕಾರಿ ಸಮಿತಿಯ ಮಹಿಳಾ ಸದಸ್ಯರು, ಪುರುಷ ಸದಸ್ಯರು, ಮಕ್ಕಳು ಹಾಗೂ 50ನೇ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಸಂಭ್ರಮದಲ್ಲಿ ಭಾಗಿಯಾದರು.
ಇದೇ ವೇಳೆ ಸಂಘದ ಯುವ ಸದಸ್ಯರು ಸುಂದರವಾದ ಕಲಾತ್ಮಕ ಮುಖ ಚಿತ್ತಾರಗಳನ್ನು, ಕನ್ನಡದ ಬಾವುಟ, ಕೆನಡ ಬಾವುಟವನ್ನು ರಚಿಸಿದ್ದರು. ವಿವಿಧ ಆಟೋಟ ಸ್ಪರ್ಧೆಗಳನ್ನು ಈ ವೇಳೆ ಆಯೋಜಿಸಲಾಗಿತ್ತು. ಕೆರೆ-ದಡ, ಕುಂಟಾಬಿಲ್ಲೆ, ನಿಂಬೆ-ಚಮಚ ಹೀಗೆ ಬಾಲ್ಯವನ್ನು ಮರೆಕಳಿಸುವ ಅನೇಕ ಆಟಗಳನ್ನು ಚಿಣ್ಣರಿಂದ-ಅಜ್ಜ-ಅಜ್ಜಿಯವರೆಗೆ ಆಡಿ ಬಹುಮಾನ ಪಡೆದುಕೊಂಡರು. ಇದರೊಂದಿಗೆ ಹೂವಿನ ಚಿತ್ತಾರದ ಡ್ರೆಸ್‌ಕೋಡ್ ಸ್ಪರ್ಧೆಯಲ್ಲಿ ಗೆದ್ದವರಿಗೆ ” ಪುಷ್ಪರಾಣಿ-ವನರಾಜ ‘ ಎಂಬ ಬಹುಮಾನ ಕೊಡಲಾಯಿತು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ತೊಂಬತ್ತರ ಹರೆಯದ ಸಂಘದ ಮಾಜಿ ಅಧ್ಯಕ್ಷ ಸಿಂಮೂರ್ತಿ ಅವರು ಬಹಳ ಲವಲವಿಕೆಯಿಂದ ಭಾಗವಹಿಸಿ, ಯುವ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಪೋಷಕರಿಗೆ, ಪ್ರಾಯೋಜಕರಿಗೆ, ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು.
ವರದಿ: ಬೃಂದಾ ಮುರಳೀಧರ್