ಕನ್ನಡದ ಆಧುನಿಕ ಕಥನ ಪರಂಪರೆಯಲ್ಲಿ ಎಂ. ಎಸ್. ಪ್ರಭಾಕರ ಅವರದು ಮುಖ್ಯ ಹೆಸರು. “ಕಾಮರೂಪಿ’ ಅವರ ಕಾವ್ಯನಾಮ. ಮುಖ್ಯವಾಗಿ, ಈಶಾನ್ಯ ಭಾರತದ ಅಸ್ಸಾಂನ ಪರಿಸರದಲ್ಲಿ ಪತ್ರಕರ್ತರಾಗಿ ಪ್ರಸಿದ್ಧರಾಗಿದ್ದ ಅವರು, ಅಲ್ಲಿನ ವಿ. ವಿ.ಯಲ್ಲಿ ಪ್ರಾಧ್ಯಾಪಕರೂ ಆಗಿದ್ದರು. ಅಮೆರಿಕ, ಆಫ್ರಿಕಾ ಎಂದೆಲ್ಲ ಓಡಾಡಿದ ವಿಪುಲ ಅನುಭವ ಅವರದು. 84ರ ಹರೆಯದ ಕಾಮರೂಪಿ ಪ್ರಸ್ತುತ ಕೋಲಾರದ ಕಠಾರಿಪಾಳ್ಯದಲ್ಲಿ ವಾಸಿಸುತ್ತಿದ್ದಾರೆ. ಸೌತ್ ಆಫ್ರಿಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಪ್ರಕಟಿಸಿದ ಹ್ಯೂಮನ್ ಸ್ಪಿರಿಟ್ ಆಫ್ ಸೌತ್ ಆಫ್ರಿಕಾ ಸಿ.ಡಿ. ಸಂಕಲನವು ಅಂತಾರಾಷ್ಟ್ರೀಯವಾಗಿ ಸುದ್ದಿ ಮಾಡಿತ್ತು. ಅದರ ಆರಂಭದಲ್ಲಿ ಕಾಮರೂಪಿಯವರ ಪದ್ಯವೊಂದಿದೆ. ಅದು ಮೂಲತಃ ಅವರದೇ ಕನ್ನಡ ಪದ್ಯದ ಇಂಗ್ಲಿಶ್ ಅನುವಾದವಾಗಿರುವುದು ವಿಶೇಷ.
ಕಾಮರೂಪಿ ಅವರ ಈಮೇಲ್ : kamaroopi@gmail.com
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಅಂತ್ಯಗೊಳ್ಳುವುದರ ಜೊತೆಗೆ ಅಲ್ಲೊಂದು ರಾಜಕೀಯ ಬದಲಾವಣೆಯೂ ಸಂಭವಿಸಿತು. ಅಲ್ಲಿಯ ತನಕ ಆಳಿಸಿಕೊಂಡವರು ಮುಂದೆ ಆಳುವವರಾಗಿ ಹಿಂದೆ ಆಳಿದವರ ಮೇಲೆ ಸೇಡು ತೀರಿಸಿಕೊಳ್ಳುವ ವಾತಾವರಣವೊಂದು ಸೃಷ್ಟಿಯಾಗಬಾರದೆಂಬ ಎಚ್ಚರ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರಲ್ಲಿತ್ತು. ಎಲ್ಲರನ್ನೂ ಒಳಗೊಳ್ಳುವ ಪ್ರಜಾತಂತ್ರವೊಂದನ್ನು ಕಟ್ಟುವ ಉದ್ದೇಶದಿಂದ ರೂಪುಗೊಂಡು ಅನೇಕ ಯೋಜನೆಗಳಲ್ಲಿ ಟ್ರಾತ್ ಅಂಡ್ ರಿಕನ್ಸಿàಲಿಯೇಷನ್ ಕಮಿಷನ್ (ಟಿಆರ್‌ಸಿ) ಕೂಡ ಒಂದು. ಶೋಷಿತರು ಮತ್ತು ಶೋಷಕರಿಬ್ಬರ ಕಥನಗಳನ್ನೂ ಆಲಿಸಿ ಅವರ ನಡುವೆ ಸಾಮರಸ್ಯ ಮೂಡಿಸುವ ಪ್ರಯತ್ನ ಇದಾಗಿತ್ತು. ತಪ್ಪೊಪ್ಪಿಕೊಂಡವರನ್ನು ಕ್ಷಮಿಸುವ ಪ್ರಕ್ರಿಯೆಯೂ ಇದಾಗಿತ್ತು.
ಟಿಆರ್‌ಸಿ ದೇಶಾದ್ಯಂತ ಸಂಚರಿಸಿ ನಡೆಸಿದ ವಿಚಾರಣೆಗಳ ಧ್ವನಿದಾಖಲೆಗಳನ್ನು ದಕ್ಷಿಣ ಆಫ್ರಿಕಾದ ಅಧಿಕೃತ ರೇಡಿಯೋ ಕೇಂದ್ರವಾದ ಸೌತ್ ಆಫ್ರಿಕಾ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಎಸ್‌ಎಬಿಸಿ) ಪ್ರತಿ ದಿನವೂ ವಿಶೇಷ ಕಾರ್ಯಕ್ರಮವಾಗಿ ಪ್ರಸಾರ ಮಾಡುತ್ತಿತ್ತು. ಸಾವಿರಾರು ಗಂಟೆಗಳಷ್ಟು ದೀರ್ಘವಾದ ಈ ಧ್ವನಿಮುದ್ರಣದ ಆಯ್ದ ಭಾಗಗಳನ್ನು ಸಂಪಾದಿಸಿರುವ ಸಂಕಲನವೇ ಹ್ಯೂಮನ್ ಸ್ಪಿರಿಟ್ ಆಫ್ ಸೌತ್ ಆಫ್ರಿಕಾ. ಬೀಗ ಹಾಕಿಟ್ಟಿರುವ ಪಂಜರದಂಥ ಪೆಟ್ಟಿಗೆಯೊಂದರಲ್ಲಿ ಇರುವ ಆರು ಸಿಡಿಗಳ ರೂಪದಲ್ಲಿ ಈ ಸಂಕಲನವಿದೆ.
ಈ ಸಂಕಲನದ ಆರಂಭದಲ್ಲಿಯೇ ಕನ್ನಡದ ಪ್ರಸಿದ್ಧ ಕಥೆಗಾರ ಕಾಮರೂಪಿ (ಎಂ. ಎಸ್. ಪ್ರಭಾಕರ) ಅವರ ಕವಿತೆಯೊಂದಿದೆ. ವಾಯ್ಸಸ್ ಎಂಬ ಶೀರ್ಷಿಕೆಯ ಈ ಕವಿತೆ ಕನ್ನಡ ಮೂಲದ್ದು. ನಾದ ಬ್ರಹ್ಮ, ಶಬ್ದಬ್ರಹ್ಮ ಶೀರ್ಷಿಕೆಯ ಕನ್ನಡ ಕವಿತೆಯನ್ನು ಕಾಮರೂಪಿಯವರು ರಚಿಸಿದ್ದೇ ಟಿಆರ್‌ಸಿಯ ಜೊತೆಗೆ ಪ್ರವಾಸ ಮಾಡುತ್ತಿದ್ದ ಕಾಲದಲ್ಲಿ. ದಿ ಹಿಂದೂ ಪತ್ರಿಕೆಯ ವರದಿಗಾರರಾಗಿ ದಕ್ಷಿಣ ಆಫ್ರಿಕಾದಲ್ಲಿದ್ದ ಕಾಮರೂಪಿ ಟಿಆರ್‌ಸಿಯ ಜೊತೆಗೆ ಪ್ರವಾಸ ಮಾಡಿ ಹಲವಾರು ವರದಿಗಳನ್ನು ಮಾಡಿದ್ದರು. ಗಾಢವಾದ ವಿಷಾದಕ್ಕೆ ದೂಡುವ ಅನೇಕ ಕಥನಗಳ ಹಿನ್ನೆಲೆಯಲ್ಲಿ ರೂಪುಗೊಂಡ ಈ ಕನ್ನಡ ಕವಿತೆ ಎಸ್‌ಎಬಿಸಿ ಹೊರತಂದ “ಧ್ವನಿ ಕಥನ’ದ ಭಾಗವಾದ ಪ್ರಕ್ರಿಯೆಯ ಹಿಂದೆಯೂ ಒಂದು ಕಥೆಯಿದೆ.
ಪತ್ರಿಕಾವೃತ್ತಿಯ ದಿನಗಳಿಂದ ಇಲ್ಲಿಯ ತನಕವೂ ಟಿ.ವಿ.ಯಿಂದ ದೂರವೇ ಇರುವ ಕಾಮರೂಪಿಯವರಿಗೆ ರೇಡಿಯೋವೇ ಸದಾ ಸಂಗಾತಿ. ಟಿಆರ್‌ಸಿಯ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದ ಎಸ್‌ಎಬಿಸಿಯ ತಂಡದ ಜೊತೆಗೆ ಅವರಿಗೆ ನಿಕಟ ಒಡನಾಟವಿತ್ತು. ಎಷ್ಟರ ಮಟ್ಟಿಗೆಂದರೆ ಸುದೀರ್ಘ ಧ್ವನಿ ಮುದ್ರಣಗಳನ್ನು ಆರು ಸಿ.ಡಿ.ಗಳಲ್ಲಿ ಹಿಡಿಸುವ ಒಂದು ಸಂಕಲನವಾಗಿ ಮಾರ್ಪಡಿಸುವ ಪ್ರಕ್ರಿಯೆಯಲ್ಲೂ ಅವರು ಪಾಲ್ಗೊಂಡಿದ್ದರು. ಈ ಯೋಜನೆಯ ನಿರ್ಮಾತೃಗಳಲ್ಲಿ ಒಬ್ಬರಾಗಿದ್ದ ಆ್ಯಂಜಿ ಕ್ಯಾಪೆಲಿಯಾನಿಸ್ ಅವರ ಜೊತೆಗಿನ ಮಾತುಕತೆಯಲ್ಲಿ ಈ ಕನ್ನಡ ಕವಿತೆಯ ಪ್ರಸ್ತಾಪವಾಯಿತು. ಅದರ ಅರ್ಥವೇನು ಎಂದು ಕೇಳಿದ ಆ್ಯಂಜಿ ಇದನ್ನು ಅನುವಾದಿಸಲು ಒತ್ತಾಯಿಸಿದರು. ಪರಿಣಾಮವಾಗಿ ವಾಯ್ಸಸ್ ಎಂಬ ಶೀರ್ಷಿಕೆಯಲ್ಲಿ ಈ ಪದ್ಯ ಇಂಗ್ಲಿಷ್‌ಗೆ ಅನುವಾದಗೊಂಡಿತು. ಹ್ಯೂಮನ್ ಸ್ಪಿರಿಟ್ ಆಫ್ ಆಫ್ರಿಕಾವನ್ನು ಎಸ್‌ಎಬಿಸಿ ಪ್ರಕಟಿಸಿದಾಗ ಅದರ ಮೊದಲ ಪುಟದಲ್ಲಿಯೇ ಸ್ಥಾನ ಪಡೆಯಿತು.
ಟಿಆರ್‌ಸಿಯಲ್ಲಿ ಟ್ರಾತ್ ಕಮಿಷನರ್ ಆಗಿದ್ದ ಯಾಸ್ಮಿನ್ ಸೂಕಾ ಅವರು ಹೇಳುವಂತೆ ಈ ಸಿ.ಡಿ.ಗಳ ಗುತ್ಛವು ಪ್ರಪಂಚದ ಅತ್ಯಂತ ಶ್ರೀಮಂತ ಮೌಖೀಕ ಇತಿಹಾಸದ ಪ್ರತಿನಿಧಿ. ಇಂಥದ್ದೊಂದು ಮಹತ್ವದ ಸಂಕಲನ ಕನ್ನಡದ ಲೇಖಕರೊಬ್ಬರನ್ನೂ ಒಳಗೊಂಡಿದೆ.
ಎನ್. ಎ. ಎಂ. ಇಸ್ಮಾಯಿಲ್