Advertisement

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

02:59 PM Oct 27, 2024 | Team Udayavani |

ಯಾವುದೋ ಊರಿನಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು ಕ್ರಮೇಣ ಕನ್ನಡಿಗರೇ ಆಗಿಹೋಗಿ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಹೊರ ಭಾಷಿಕರ  ಸಂಖ್ಯೆ ದೊಡ್ಡದು. ಅಂಥವರಲ್ಲಿ  ಪ್ರಮುಖರಾದ ವಿವಿಧ ಕ್ಷೇತ್ರಗಳ ಗಣ್ಯರು ಕರ್ನಾಟಕದಲ್ಲಿ ತಾವು ಬದುಕು ಕಟ್ಟಿಕೊಂಡ ಬಗೆೆಯನ್ನು ವಿವರಿಸಿದ್ದಾರೆ…

Advertisement

ನಾವು ಮೂಲತಃ ಗುಜರಾತ್‌ನವರು. ನಾನು ಹಾಗೂ ನನ್ನ ತಂದೆ ಸುರೇಶ್‌ ಶಾ ಅವರು ಹುಟ್ಟಿದ್ದು ಮುಂಬೈನಲ್ಲಾದರೂ, ಬದುಕು ಕಟ್ಟಿಕೊಂಡಿದ್ದು ಕರ್ನಾಟಕದಲ್ಲಿ. ತಂದೆಯವರು ಕಲಿತದ್ದು 10ನೇ ತರಗತಿವರೆಗೆ ಮಾತ್ರ. ಪಾಕೆಟ್‌ ಬುಕ್‌ ಕಂಪನಿಯ ಉದ್ಯೋಗಿಯಾಗಿ ಮುಂಬೈ, ಚೆನ್ನೈನಲ್ಲಿ ಕೆಲಸ ಮಾಡಿ 1967ರ ಹೊತ್ತಿಗೆ ಬೆಂಗಳೂರಿಗೆ ಬಂದ ಅವರು ಪುಸ್ತಕೋದ್ಯಮದಲ್ಲಿ ನಿಪುಣರಾಗಿದ್ದರು. ನಮ್ಮ ತಾಯಿ ಭಾನುಮತಿ ಅವರು, “ನೀವು ಸ್ವಂತ ಪುಸ್ತಕೋದ್ಯಮ ಆರಂಭಿಸಿ’ ಎಂದು ತಂದೆಯವರಿಗೆ ಸಲಹೆ ನೀಡಿದರು. ಅದು ಅವರ ಕನಸಾಗಿತ್ತು. ಹಾಗಾಗಿ ನಮ್ಮ ಪುಸ್ತಕದಂಗಡಿಗೆ “ಸಪ್ನ’ ಎಂದು ಹೆಸರಿಟ್ಟೆವು.

ಅಪ್ಪನೊಂದಿಗೆ ಬೆಂಗಳೂರಿಗೆ ಬಂದಾಗ ನನಗೆ 5 ವರ್ಷ. ಶಾಲೆ ಮುಗಿಸಿದ ತಕ್ಷಣ, ಅಂಗಡಿಗೆ ಹೋಗುತ್ತಿದ್ದೆ. ಅಪ್ಪ ಯಾವಾಗಲೂ ಹೇಳುತ್ತಿದ್ದರು: “ಕನ್ನಡಿಗರು ನಮಗೆ ಅಪಾರ ಪ್ರೀತಿ ತೋರಿದ್ದಾರೆ. ಕನ್ನಡ ಪುಸ್ತಕಗಳೇ ನಮ್ಮ ಬದುಕಿಗೆ ದಾರಿಯಾಗಿವೆ. ಹಾಗಾಗಿ ಕನ್ನಡ, ಕರ್ನಾಟಕದ ಸೇವೆಯನ್ನು ಮಾಡುತ್ತಲೇ ಇರು…’ ಈ ಮಾತುಗಳು ನಮಗೆ ಇಂದಿಗೂ ಪ್ರೇರಣೆ.

ಮೊದಲ ಪುಸ್ತಕ ಕಾರಂತರದ್ದು…

ನಾವು ಪ್ರಕಟಿಸಿದ ಮೊದಲ ಕನ್ನಡ ಪುಸ್ತಕ, ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’. ಅಲ್ಲಿಂದ ಯಶೋ ಪಯಣ ಆರಂಭವಾಯಿತು ಎನ್ನಬಹುದು. ನಂತರ ಡಾ. ಚಂದ್ರಶೇಖರ ಕಂಬಾರ, ಡಾ. ಚೆನ್ನವೀರ ಕಣವಿ ಅವರ ಆದಿಯಾಗಿ 500ಕ್ಕೂ ಅಧಿಕ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಈವರೆಗೆ ಸಪ್ನ ಪ್ರಕಟಿಸಿದ ಕನ್ನಡ ಪುಸ್ತಕಗಳು 7 ಸಾವಿರ. ನಾವು ಎಲ್ಲೇ ಹೋಗಲಿ, ಜನ ನಮ್ಮನ್ನು ಗೌರವದಿಂದ ನೋಡುತ್ತಾರೆ. ನಮ್ಮ ಊರಿನಲ್ಲಿ ಸಪ್ನ ಮಳಿಗೆ ಆರಂಭಿಸಿ ಎಂದು ಬೇಡಿಕೆ ಇಡುತ್ತಾರೆ.

Advertisement

ಇದೇ ನನ್ನ ತವರೂರು:

ಕರ್ನಾಟಕದವರು ನಮ್ಮನ್ನೆಂದೂ ಹೊರಗಿನವರ ಹಾಗೆ ನೋಡಿಲ್ಲ. ಕರ್ನಾಟಕವೇ ನಮಗೀಗ ತವರು ಮನೆ. ಪ್ರತಿ ವರ್ಷ ನವೆಂಬರ್‌ 1ರಂದು, ರಾಜ್ಯೋತ್ಸವದ ವರ್ಷದಷ್ಟು ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತೇವೆ. ಪುಸ್ತಕ ಪ್ರಕಟಿಸಿದರೆ ಸಾಲದು, ಜನರಲ್ಲಿ ಓದುವ ಅಭಿರುಚಿ, ಹವ್ಯಾಸ ಬೆಳೆಸಬೇಕು ಎಂದುಕೊಂಡು ಪುಸ್ತಕ ಹಬ್ಬ, ಕನ್ನಡ ಪುಸ್ತಕಗಳ ಪ್ರಚಾರ ಕಾರ್ಯ ಹಮ್ಮಿಕೊಳ್ಳುತ್ತೇವೆ. ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಪುಸ್ತಕ ಮಳಿಗೆ ಆರಂಭಿಸಬೇಕೆಂಬ ದೊಡ್ಡ ಆಸೆ ಇದೆ.

ವಿಚಿತ್ರ ಎಂದರೆ, ಅಮ್ಮನ ತವರೂರು ಪಾಕಿಸ್ತಾನದ ಕರಾಚಿ, ಅಪ್ಪ ಹುಟ್ಟಿದ್ದು ಮುಂಬೈ, ಕೆಲಸಕ್ಕಾಗಿ ಹೋಗಿದ್ದು ಚೆನ್ನೈಗೆ. ಆದರೆ, ಅಮ್ಮನ ಕನಸಿನ “ಸಪ್ನ’ ಆರಂಭಿಸಿ, ನಮ್ಮ ಬದುಕು ರೂಪಿಸಿ­ಕೊಂಡಿದ್ದು ಕರ್ನಾಟಕ­ದಲ್ಲಿ. ಕರುನಾಡು, ಕನ್ನಡ ಪುಸ್ತಕಗಳು ನಮ್ಮ ಮೂರು ತಲೆಮಾರಿಗೆ ಬೆಳಕಾಗಿವೆ.

-ನಿತಿನ್‌ ಶಾ, ಸಪ್ನ ಬುಕ್‌ ಹೌಸ್‌ ಮಾಲೀಕರು

Advertisement

Udayavani is now on Telegram. Click here to join our channel and stay updated with the latest news.

Next