Advertisement

ನವೆಂಬರ್ 1ರಂದು ಕರಾಳ ದಿನಕ್ಕಿಲ್ಲ ಅವಕಾಶ: ಜಿಲ್ಲಾಧಿಕಾರಿ ಎಚ್ಚರಿಕೆ

05:28 PM Oct 16, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವದಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಮ್ಮಿಕೊಳ್ಳುವ ಕರಾಳ ದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಕಡ್ಡಿ ಮುರಿದಂತೆ ಹೇಳಿದ್ದಾರೆ.

Advertisement

ಕರಾಳ ದಿನ ಆಚರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಎಂಇಎಸ್‌ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರನ್ನು ಭೇಟಿಯಾಗಿ ಮನವಿ ಮಾಡಿ, ಈ ವರ್ಷವೂ ನಮ್ಮ ಶಾಂತಿಯುತ ಕರಾಳ ದಿನಾಚರಣೆಗೆ ಅವಕಾಶ ನೀಡಬೇಕು. ನಮ್ಮ ಬೇಡಿಕೆಯನ್ನು ಮಂಡಿಸಲು ಅನುಮತಿ ನೀಡುವಂತೆ ಕೋರಿದರು.

ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡಲು ಅವಕಾಶವಿದೆ. ನಾವು ಪ್ರತಿಭಟನೆ ಮಾಡದಂತೆ ಯಾರಿಗೂ ಹೇಳುವುದಿಲ್ಲ. ಪ್ರತಿಭಟನೆ ಮಾಡಲು ಅನುಮತಿ ನೀಡುತ್ತೇವೆ. ಆದರೆ ಕರ್ನಾಟಕ ರಾಜ್ಯೋತ್ಸವದಂದು ಇಡೀ ರಾಜ್ಯ ಸಂಭ್ರಮದಲ್ಲಿ ಇರುತ್ತದೆ. ಇಂಥದರಲ್ಲಿ ಕರಾಳ ದಿನ ಆಚರಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕಾರ್ಯ ಆಗಬಾರದು. ಹೀಗಾಗಿ ನಾವು ಪ್ರತಿಭಟನೆಗೆ ಅನುಮತಿ ನೀಡುವುದಿಲ್ಲ ಎಂದು ನಯವಾಗಿ ಮನವಿ ತಿರಸ್ಕರಿಸಿ ಎಂಇಎಸ್‌ ಮುಖಂಡರನ್ನು ವಾಪಸ್‌ ಕಳುಹಿಸಿದರು.

ಎಂಇಎಸ್‌ ಮುಖಂಡ, ಮಾಜಿ ಶಾಸಕ ಮನೋಹರ ಕಿಣೇಕರ ಮಾತನಾಡಿ, 1956ರಲ್ಲಿ ರಾಜ್ಯವಾರು ಪ್ರಾಂತ ರಚನೆ ಆದ ಬಳಿಕ
ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರಿಗೆ ಅನ್ಯಾಯವಾಗಿದೆ. ನಮಗೆ ಸಿಗಬೇಕಾದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಮ್ಮನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ನಮ್ಮ ಹೋರಾಟ ಕರ್ನಾಟಕ ಸರ್ಕಾರದ ವಿರುದ್ಧವಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತಪ್ಪು ನಿರ್ಧಾರ ವಿರೋಧಿ ಸಿ ನಾವು ಕರಾಳ ದಿನ ಆಚರಿಸುತ್ತಿದ್ದೇವೆ. ನಮ್ಮ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಬೇಕು. ನವೆಂಬರ್‌ 1ರಂದು ಶಾಂತಿಯುತವಾಗಿ ನಡೆಯುವ ಕರಾಳ ದಿನ ಆಚರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರೋಷನ್‌, ನಾವು ಪ್ರತಿಭಟನೆ ಮಾಡದಂತೆ ಯಾವುದೇ ಒತ್ತಡ ಹೇರುತ್ತಿಲ್ಲ. ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವದಂದು ಪ್ರತಿಭಟನೆ ನಡೆಸಿ ಶಾಂತಿ ಭಂಗವನ್ನುಂಟು ಮಾಡಬಾರದು. ಇನ್ನುಳಿದ ಇತರೆ ಯಾವುದೇ ದಿನವಾದರೂ ನೀವು ಪ್ರತಿಭಟನೆ ಮಾಡಲು ನಾವು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದರು. ಎಂಇಎಸ್‌ ಮುಖಂಡರಾದ ಪ್ರಕಾಶ ಮರಗಾಳೆ, ಮಾಲೋಜಿರಾವ ಅಷ್ಟೇಕರ, ವಿಕಾಸ ಕಲಘಟಗಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next