Advertisement

ವಿದ್ಯಾರ್ಥಿನಿಯರಿಗೆ ಲಕ್ಷ ರೂ.ಚೆಕ್‌

02:43 PM Nov 04, 2020 | Suhan S |

ದೇವನಹಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ ಇಬ್ಬರು ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಲಾ 1 ಲಕ್ಷ ರೂ. ಚೆಕ್‌ ವಿತರಿಸಿ ಪ್ರೋತ್ಸಾಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಹನುಮಂತರಾಯಪ್ಪ ತಿಳಿಸಿದರು.

Advertisement

ತಾಲೂಕಿನ ಜಿಲ್ಲಾಡಳಿತ ಭವನದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಒಂದು ಲಕ್ಷ ನಗದು ಪ್ರಶಸ್ತಿ ನೀಡಲು ಮಂಜೂರಾತಿ ನೀಡಲಾಗಿದೆ ಎಂದರು.

ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ.60 ರಿಂದ 74.99 ಅಂಕ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 7 ಸಾವಿರ ರೂ. ಮತ್ತು ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲು2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿದ ಎಂದು ತಿಳಿಸಿದರು. ರಾಜ್ಯೋತ್ಸವ ದಿನದಂದು ಜಿಲ್ಲೆಯ ಹೊಸಕೋಟೆಯ ವಿದ್ಯಾರ್ಥಿನಿ ಜಿ.ಎಂ.ಜಿತಾಶ್ರೀ ಮತ್ತು ದೇವನಹಳ್ಳಿ ತಾಲೂಕಿನ ಚಂದನಾ ವರ್ಧನಿ.ವಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಕನ್ನಡ ಬೆಳವಣಿಗೆ ಮಾತಿಗೆ ಸೀಮಿತ: ರವಿ :

ದೊಡ್ಡಬಳ್ಳಾಪುರ: ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿ ಯೋಜನೆ ರೂಪಿಸಬೇಕಾದ ಸರ್ಕಾರಗಳು, ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡಿ, ಅವುಗಳನ್ನು ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಕೇವಲ ಮಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿ ಎಂದು ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಸಂಸ್ಥಾಪಕ ರವಿ ಮಾವಿನಕುಂಟೆ ಹೇಳಿದರು.

Advertisement

ತಾಲೂಕಿನ ದರ್ಗಾಜೋಗಿಹಳ್ಳಿಯಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯಕ್ತ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂಗ್ಲಿಷ್‌ ಕಲಿತರೆ, ಮಾತ್ರ ವೈಭವ ಜೀವನ ನಡೆಸಬಹುದೆಂದು, ಮಾತೃ ಭಾಷೆಯನ್ನು ಕಡೆಗಣಿಸ ಲಾಗುತ್ತಿದೆ. ಕೇವಲ ನವೆಂಬರ್‌ನಲ್ಲಿ ಮಾತ್ರ ಕನ್ನಡ

ಕಾರ್ಯಕ್ರಮ ಮಾಡದೆ, ವರ್ಷ ಪೂರ್ತಿ ಕನ್ನಡದ ಕಾರ್ಯಕ್ರಮಗಳಾಗಬೇಕು. ಅಭಿವೃದ್ಧಿ ಪರಿವರ್ತನೆ ಎಂಬುದು ಶ್ರೀಮಂತರ ಹಾಗೂ ಬಂಡವಾಳ ಶಾಹಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು. ಸರ್ವರಿಗೂ ಸಮಪಾಲ ಎಂಬುದು ಬರಿ ಪುಸ್ತಕದಲ್ಲಿದ್ದರೆ, ಸಾಲದು ಅದು ಕಾರ್ಯಗತವಾದರೆ, ಎಲ್ಲರೂ ಉತ್ತಮ ಜೀವನ ನಡೆಸಲು ಸಾಧ್ಯ. ದರ್ಗಾಜೋಗಿಹಳ್ಳಿ ಮಲ್ಲೇಶ್‌ ಅವರು, ಲಾಕ್‌ಡೌನ್‌ ಆರಂಭದಿಂದ ನಿರಂತರವಾಗಿ ಅನ್ನ ದಾಸೋಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಅನ್ನದಾಸೋಹಿ ದರ್ಗಾಜೋಗಿಹಳ್ಳಿ ಮಲ್ಲೇಶ್ ಮಾತನಾಡಿ, ದಾನಿಗಳ ನೆರವಿನಿಂದ ನಿರಂತರವಾಗಿ 217ನೇ ದಿನಕ್ಕೆ ಅನ್ನದಾಸೋಹ ಕಾಲಿಟ್ಟಿದೆ. ಪ್ರತಿ ದಿನ 300 ಜನರಿಗೆ ಅನ್ನದಾಸದೋಹ ಕಲ್ಪಿಸಲಾಗುತ್ತಿದೆ ಎಂದರು.

ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿ ಜಿಲ್ಲಾ ಗೌರವಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ರಮೇಶ್‌, ತಾಲೂಕು ಅಧ್ಯಕ್ಷ ಅಶೋಕ್‌, ಕಾರ್ಮಿಕ ಘಟಕ ಅಧ್ಯಕ್ಷ ಆನಂದ್‌, ಕಾರ್ಯಾಧ್ಯಕ್ಷ ನವೀನ್‌, ಗೌರವ ಅಧ್ಯಕ್ಷ ನಾಗರಾಜ್‌ ನಾಯಕ್‌, ಶ್ರೀನಿವಾಸ್‌, ಯಮನೂರು, ಶಿವು, ವಿಠ್ಠಲ್, ಅಶೋಕ್‌, ಪ್ರಕಾಶ್‌, ಹೇಮಂತ್‌, ಶಂಭುಲಿಂಗಯ್ಯ ಮತ್ತಿತರರು ಹಾಜರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next