ಕೊಲ್ಲಿ ದೇಶದಲ್ಲಿನ ಒಂದು ಸಂಜೆ, ಸುಮಾರು 8,000 ಜನ ಸಭಿಕರು, ಸಂಜೆ ಸುಮಾರು 7 ಗಂಟೆ, ಬೃಹತ್ ಗಾತ್ರದ ವೇದಿಕೆ, ಸ್ಥಳೀಯ ಮಂತ್ರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಚಿತ್ರ ಬಿಡಿಸಲು ಆರಂಭಿಸಿದ ಕಲಾವಿದ. ಸಂಜೆಯ ಮೊದಲ ಆಕರ್ಷಣೆ ಈ ಕಾರ್ಯಕ್ರಮ, ಎಲ್ಲರ ಕಣ್ಣುಗಳು ವೇದಿಕೆಯ ಮೇಲಿನ ಆ ಕಲಾ ಸೃಷ್ಟಿಯ ಮೇಲೆ……
ಅಲ್ಲಿ ಇದ್ದ 90 ಪ್ರತಿಶತ ಜನರು ತಮ್ಮ ಜಂಗಮವಾಣಿ (ಮೊಬೈಲ್)ನಲ್ಲಿ ಚಿತ್ರಣವನ್ನು ಸೆರೆ ಹಿಡಿಯುತ್ತಿದ್ದಾರೆ. ಮೊದಲು ಎರಡು ಮುಖ ಹಾಗೂ ಹಸ್ತಗಳು ಗೋಚರಿಸುತ್ತವೆ, ಅನಂತರ ಅವರ ಉಡುಪು. ಆರಂಭವಾದಾಗಿನಿಂದ ಮೂರು ನಿಮಿಷದ ತನಕ ಏನನ್ನು ಚಿತ್ರಿಸುತ್ತಿರುವರೆಂಬ ಊಹೆಯೂ ಸಹ ಯಾರಿಗೂ ಇಲ್ಲ. ಅನಂತರ ನಿಧಾನವಾಗಿ ಕಲ್ಪನೆಯಿಂದ ಉದಯಿಸುವ ವಾಸ್ತವ್ಯ, ಮುಖಗಳು ಯಾರದೆಂದು ಊಹಿಸುವ ಆವಶ್ಯಕತೆ ಇಲ್ಲ, ಬಲಗಡೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರದು, ಎಡಗಡೆ ಕತಾರ್ ದೇಶದ ಎಮಿರ್ ತಮೀಮ್ ಬಿನ್ ಹಮಾದ್ ಅಲ್ ಥಾನಿ ಅವರದು.
9 ನಿಮಿಷ 50 ಸೆಕೆಂಡುಗಳ ಅನಂತರ ಚಿತ್ರ ಸಂಪೂರ್ಣವಾಗಿ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿತು. ಇದರ ಸೃಷ್ಟಿಕರ್ತ ಪ್ರಪಂಚದ ಪ್ರಸಿದ್ಧ ಹಾಗೂ ಅತೀ ವೇಗದ ಚಿತ್ರಗಾರ, ಕನ್ನಡಿಗರಾದ ಕಲಾವಿದ ವಿಲಾಸ್ ನಾಯಕ್. ಏನು ವೇಗ, ಏನು ರಭಸ, ಏನು ನಡೆ, ಏನು ಮಾಧುರ್ಯ, ಎಂತಹ ಕೈಚಳಕ, ಬಣ್ಣಗಳ ಆಯ್ಕೆ ಬಿಡುವಿಲ್ಲದ ಸೃಜನತೆ, ಎಲ್ಲರನ್ನೂ ನಿಬ್ಬೆರಗಾಗಿಸಿತು. ಪ್ರೇಕ್ಷಕರು ಕಣ್ಣು ಮಿಟುಕಿಸಲು ಆಸ್ಪದ ನೀಡದೆ, ನೋಡುತ್ತಿದ್ದಂತೆ ಕಣ್ಣ ಮುಂದೆ ಒಂದು ಅದ್ಭುತ ಕಲೆ ಸೃಷ್ಟಿಯಾಯಿತು. ಇದಕ್ಕೆ ಸಾಕ್ಷಿಯಾಗಿದ್ದವರು ನಿಜವಾಗಲೂ ಪುಣ್ಯವಂತರು ಹಾಗೂ ಕೃತಾರ್ಥರು.
ಕತಾರಿನ “ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್ಸ್’ (ಇಸ್ಲಾಂನ ಕಲೆಯ ವಸ್ತು ಸಂಗ್ರಹಾಲಯ) ಉದ್ಯಾನವನದ ಆವರಣದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐ.ಸಿ.ಸಿ.) ವತಿಯಿಂದ, ಕತಾರಿನ ಭಾರತೀಯ ದೂತಾವಾಸ ಹಾಗೂ ಸ್ಥಳೀಯ ಸಚಿವಾಲಯದ ಸಹಯೋಗದೊಂದಿಗೆ ಮಾರ್ಚ್ 7,8 ಹಾಗೂ 9ರಂದು ಆಯೋಜಿಸಿದ್ದ ಭಾರತದ ಬೃಹತ್ ಉತ್ಸವ “ಪ್ಯಾಸೇಜು ಟು ಇಂಡಿಯಾ-2024′ ಕಾರ್ಯಕ್ರಮದ ಒಂಬತ್ತನೇ ಆವೃತ್ತಿಯಲ್ಲಿ ಈ ಅದ್ಭುತ ಪ್ರದರ್ಶನವನ್ನು ಕಣ್ತುಂಬಿಕೊಳ್ಳುವಂತಾಯಿತು.
ಕಾರ್ಯಕ್ರಮದಲ್ಲಿ ಭಾರತದ ವಿವಿಧ ರಾಜ್ಯಗಳಿಂದ ಕಲಾವಿದರು ಆಗಮಿಸಿ ನೃತ್ಯ ಹಾಗೂ ಗಾಯನ ಪ್ರದರ್ಶಿಸಿದರು, ಆದರೆ ಪ್ರಮುಖ ಆಕರ್ಷಣೆ ವಿಲಾಸ್ ನಾಯಕ ಅವರ ಸ್ಥಳದಲ್ಲಿ ಬಿಡಿಸಿದ ಚಿತ್ರಗಳು. ಮೂರು ದಿನಗಳ ಕಾರ್ಯಕ್ರಮದಲ್ಲಿ ಮೂರು ಬಾರಿ ಇವರ ಕಲೆಯನ್ನು ಪ್ರತ್ಯಕ್ಷವಾಗಿ ಆನಂದಿಸುವ ಅವಕಾಶ ಅಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಲಭಿಸಿತು. ವಿಲಾಸ್ ನಾಯಕ ಅವರು ಕತಾರ್‌ಗೆ ಈ ಹಿಂದೆಯೂ ಭೇಟಿ ನೀಡಿ ತಮ್ಮ ಅಮೋಘ ಸೃಜನ ಕಲೆಯಿಂದ ಪ್ರೇಕ್ಷಕರ ಮನರಂಜಿಸಿದ್ದರು ಹಾಗೂ ಅವರೆಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಇವರನ್ನು ಆಮಂತ್ರಿಸಿದವರು ಪ್ರಸ್ತುತ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐ.ಸಿ.ಸಿ) ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು. ಇವರು ವಿಲಾಸ್ ನಾಯಕ ಅವರ ಪ್ರತಿಭೆಯ ಉಪಾಸಕರು ಮಾತ್ರವಲ್ಲದೆ ಅವರ ಆಪ್ತ ಹಿತೈಷಿಗಳು ಕೂಡ ಆಗಿದ್ದಾರೆ. ಭಾರತ ಹಾಗೂ ಕತಾರಿನ ನಾಯಕರ ಚಿತ್ರಗಳನ್ನು ಬಿಡಿಸುವ ಸೌಭಾಗ್ಯ ನನಗೆ ದೊರಕಿರುವು ನನ್ನ ಸೌಭಾಗ್ಯ ಎಂದು ಈ ಸಮಯದಲ್ಲಿ ಹೇಳಿದ ವಿಲಾಸ್ ನಾಯಕ್ ಅವರ ವಿನಯ ಸ್ವಭಾವವನ್ನು ಎಲ್ಲರೂ ಮೆಚ್ಚಲೇಬೇಕಾಗುತ್ತದೆ.
ಈ ಸಂದರ್ಭದಲ್ಲಿ ವಿಲಾಸ್ ನಾಯಕ್ ಅವರಿಗೆ ಕತಾರ್‌ನ ಮಂತ್ರಿ ಹಾಗೂ ಕತಾರ್ ರಾಷ್ಟ್ರೀಯ ಗ್ರಂಥಾಲಯದ ಅಧ್ಯಕ್ಷರಾದ ಡಾ| ಅಹ್ಮದ್ ಬಿನ್ ಅಬ್ದುಲ್ಲಾ ಅಜೀಜ್ ಅಲ್ ಕುವೇರಿ ಅವರು ಪ್ರಶಂಸೆಯೊಂದಿಗೆ ಗೌರವದಿಂದ ಸಮ್ಮಾನಿಸಿದರು. ವಿಲಾಸ್ ನಾಯಕ್ ಅವರ ಕೀರ್ತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಸಿದ್ಧಿ ಆಗಲಿ ಎಂಬುದು ಕತಾರ್‌ನಲ್ಲಿನ ಭಾರತೀಯರ ಆಶಯ.
*ಕಿಶೋರ್ ವಿ., ದೋಹಾ, ಕತಾರ್