ಮುಂಬಯಿ : ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುವ ನಟಿ ಕಂಗನಾ ರಣಾವತ್ ಅಭಿನಯದ ‘ಧಾಕಡ್’ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದು, 8 ದಿನಗಳಲ್ಲಿ ಕೇವಲ 4,420 ರೂ. ಮಾತ್ರ ಗಳಿಸದೆ ಎಂಬ ಲೆಕ್ಕಾಚಾರಗಳು ಲಭ್ಯವಾಗಿದೆ.
ಬಾಲಿವುಡ್ ಹಂಗಾಮಾ ವರದಿಯು ಪ್ರಕಾರ, ಚಿತ್ರ ಬಿಡುಗಡೆಯಾದ ಎಂಟನೇ ದಿನದಲ್ಲಿ ಮತ್ತು ದೇಶಾದ್ಯಂತ ಕೇವಲ 20 ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿ 4,420 ರೂ.ಮಾತ್ರ ಗಳಿಕೆ ಕಂಡಿದೆ.
ರಜನೀಶ್ ಘಾಯ್ ನಿರ್ದೇಶಿಸಿದ, ‘ಧಾಕಡ್’ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ ಕುರಿತು ಕಂಗನಾ ಭರ್ಜರಿ ಪ್ರಚಾರವನ್ನೂ ಕೈಗೊಂಡಿದ್ದರು. ಆದರೆ ಚಿತ್ರ ಪ್ರೇಮಿಗಳು ಚಿತ್ರ ಮಂದಿರದತ್ತ ಹೆಜ್ಜೆ ಹಾಕಲು ಯಾವುದೇ ಆಸಕ್ತಿ ತೋರಿಲ್ಲ.
ಸ್ಪೈ-ಥ್ರಿಲ್ಲರ್ ಚಿತ್ರ ದೇಶದಾದ್ಯಂತ 2200 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ಬೇಹುಗಾರಿಕೆಯ ಥ್ರಿಲ್ಲರ್ ಎಂದು ಶ್ಲಾಘಿಸಲ್ಪಟ್ಟ ‘ಧಾಕಡ್’ ಚಿತ್ರದ ಕಥೆಯು ಅಪರಾಧಿಗಳನ್ನು ನಿರ್ಮೂಲನೆ ಮಾಡುವ ರಹಸ್ಯ ಸೇವಾ ಸಂಸ್ಥೆಯಾದ ITF ಗಾಗಿ ಕೆಲಸ ಮಾಡುವ ಭಾರತೀಯ ಏಜೆಂಟ್ ಅಗ್ನಿ (ಕಂಗನಾ ) ಸುತ್ತ ಸುತ್ತುತ್ತದೆ.
70 ಕೋಟಿ ರೂ. ನಷ್ಟದ ನಂತರ OTT ಹಕ್ಕುಗಳನ್ನು ಖರೀದಿಸಲು ಯಾರೂ ಆಸಕ್ತಿ ಹೊಂದಿಲ್ಲ. ‘ಬೃಹತ್ ದುರಂತ’ ,ಎಂದು ಇಂಡಿಯನ್ ಬಾಕ್ಸ್ ಆಫೀಸ್ ಟ್ವೀಟ್ ಮಾಡಿದೆ.
‘ಧಾಕಡ್’ ಕಾರ್ತಿಕ್ ಆರ್ಯನ್ ಅವರ ‘ಭೂಲ್ ಭುಲೈಯಾ 2’ಚಿತ್ರದ ಜತೆಗೆ ಟಿಕೆಟ್ ಕೌಂಟರ್‌ಗಳಲ್ಲಿ ಘರ್ಷಣೆಗೆ ಸಿಲುಕಿತು ಎಂದು ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ವಿಶ್ಲೇಷಿಸಿದ್ದಾರೆ.
ಕಂಗನಾ ಅಭಿನಯದ ‘ತಲೈವಿ’ ಚಿತ್ರ ಭಾರಿ ಸೋಲು ಕಂಡಿತ್ತು, ಅದಕ್ಕೂ ಮುಂಚೆ ‘ಮಣಿಕರ್ಣಿಕಾ’ ಹರತು ಪಡಿಸಿ ಸಾಲು ಸಾಲು ಚಿತ್ರಗಳು ಸೋಲು ಕಂಡಿದ್ದವು.