Advertisement

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

01:03 AM Jan 13, 2025 | Team Udayavani |

ಲಾಸ್‌ ಏಂಜಲೀಸ್‌: ಬೆಂಕಿಯ ಕೆನ್ನಾಲಿಗೆಯಿಂದ ತತ್ತರಿಸಿಹೋಗಿರುವ ಲಾಸ್‌ಏಂಜಲೀಸ್‌ನಲ್ಲಿ ಈಗ ಭಾರೀ ವೇಗದಿಂದ ಗಾಳಿಯೂ ಬೀಸುತ್ತಿದ್ದು, ಕಾಳ್ಗಿಚ್ಚಿಗೆ ಮತ್ತಷ್ಟು ತೀವ್ರತೆ ಒದಗಿಸಿದೆ. ಈ ಪ್ರಾಕೃತಿಕ ವಿಕೋಪಕ್ಕೆ ಸಾವನ್ನಪ್ಪಿದವರ ಸಂಖ್ಯೆ ರವಿವಾರ 18ಕ್ಕೇರಿದ್ದು, 12 ಸಾವಿರಕ್ಕೂ ಅಧಿಕ ಕಟ್ಟಡಗಳು ಭಸ್ಮಗೊಂಡಿವೆ.

Advertisement

ಲಾಸ್‌ ಏಂಜಲೀಸ್‌ನ ಇತಿಹಾಸದಲ್ಲೇ ಅತ್ಯಂತ ವಿನಾಶಕಾರಿ ಕಾಳ್ಗಿಚ್ಚು ಇದಾಗಿದ್ದು, ಐಷಾರಾಮಿ ಬಂಗಲೆಗಳು, ಕಟ್ಟಡಗಳಿಂದ ಕಂಗೊಳಿಸುತ್ತಿದ್ದ ನಗರಗಳಲ್ಲಿ ಈಗ ಬೂದಿ ಮಾತ್ರ ಉಳಿದುಕೊಂಡಿದೆ.

ಪ್ರಸ್ತುತ 4 ಪ್ರದೇಶಗಳಲ್ಲಿರುವ ಸಕ್ರಿಯ ಕಾಡ್ಗಿಚ್ಚಿನ ಪೈಕಿ ಪ್ಯಾಲಿಸೇಡ್ಸ್‌ ಪ್ರದೇಶದಲ್ಲಿನ ಬೆಂಕಿಯು ಹೆಚ್ಚುವರಿ 1,000 ಎಕ್ರೆ ಪ್ರದೇಶವನ್ನು ಆಹುತಿ ಮಾಡಿದೆ. ಈ ಪ್ರದೇಶವೊಂದರಲ್ಲೇ 22 ಸಾವಿರ ಎಕ್ರೆ ಪ್ರದೇಶ ಸುಟ್ಟುಹೋಗಿದ್ದು, 426 ಮನೆಗಳೂ ಸೇರಿ 5 ಸಾವಿರ ಕಟ್ಟಡಗಳು ಬೂದಿಯಾಗಿವೆ.

ಬೆಂಕಿಯು ರವಿವಾರದ ವೇಳೆಗೆ ಮ್ಯಾಂಡೆವಿಲ್ಲೆ ಕ್ಯಾನ್ಯನ್‌ ಪ್ರದೇಶಕ್ಕೆ ತಲುಪಿದ್ದು, ಸಮೀಪದ ಸ್ಯಾನ್‌ ಫೆರ್ನಾಂಡೋ ವ್ಯಾಲಿ ಮತ್ತು ಬ್ರೆಂಟ್‌ವುಡ್‌ಗೂ ಆತಂಕ ಎದುರಾಗಿದೆ. ಈ ಎರಡು ಪ್ರದೇಶಗಳಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ಖ್ಯಾತ ನಟ ಅರ್ನಾಲ್ಡ್‌ ಶ್ವಾಜನೇಗರ್‌, ಲೆಬ್ರಾನ್‌ ಜೇಮ್ಸ್‌ ಸೇರಿದಂತೆ ಹಾಲಿವುಡ್‌ನ‌ ಪ್ರಮುಖರು ವಾಸವಾಗಿದ್ದಾರೆ. ಜೇಮ್ಸ್‌ ಇತ್ತೀಚೆಗಷ್ಟೇ 198 ಕೋಟಿ ರೂ.ಗಳಿಗೆ ಇಲ್ಲಿ ಮನೆಯೊಂದನ್ನು ಖರೀದಿಸಿದ್ದರು. ಅಗ್ನಿ ವ್ಯಾಪಿಸುತ್ತಿರುವ ಮತ್ತೆ 1.53 ಲಕ್ಷ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಜತೆಗೆ, 57,000 ಕಟ್ಟಡಗಳೂ ಅಪಾಯದಲ್ಲಿವೆ.

ಅಂತೂ ನಾನು ಬಚಾವಾದೆ: ನಟಿ ಪ್ರೀತಿ ಜಿಂಟಾ
ಲಾಸ್‌ಏಂಜಲೀಸ್‌ನಲ್ಲಿ ಮನೆ ಹೊಂದಿರುವ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಅವರೂ ಕಾಳ್ಗಿಚ್ಚಿನ ಪ್ರತಾಪವನ್ನು ಅನುಭವಿಸಿದ್ದಾರೆ. ರವಿವಾರ ಟ್ವೀಟ್‌ ಮಾಡಿರುವ ಅವರು, “ಇಂಥದ್ದೊಂದು ಭೀಕರ ಕಾಳ್ಗಿಚ್ಚನ್ನು ನೋಡುತ್ತೇನೆಂದು ಎಂದೂ ಭಾವಿಸಿರಲಿಲ್ಲ. ಗಾಳಿಯು ಶಾಂತವಾಗದಿದ್ದರೆ ಮುಂದೇನಾಗಬಹುದು ಎಂಬ ಆತಂಕ ಕಾಡುತ್ತಿದೆ. ನಮ್ಮ ಸುತ್ತಲಿನ ವಿನಾಶಕಾರಿ ಕಾಳ್ಗಿಚ್ಚಿನಿಂದ ಆಘಾತಕ್ಕೊಳಗಾಗಿದ್ದೇನೆ. ಸದ್ಯಕ್ಕೆ ನಾವು ಸುರಕ್ಷಿತವಾಗಿರುವುದನ್ನು ದೇವರಿಗೆ ಧನ್ಯವಾದ ಹೇಳುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

ಮನೆಯಲ್ಲೇ ಆಶ್ರಯ ಕೊಟ್ಟ ಏಂಜಲೀನಾ ಜ್ಯೂಲಿ
ಕಾಳ್ಗಿಚ್ಚಿನಿಂದಾಗಿ ಮನೆ ತೊರೆಯಬೇಕಾಗಿ ಬಂದಿರುವ ಲಾಸ್‌ ಏಂಜಲೀಸ್‌ನ ಪರಿಚಿತರಿಗೆ ನಟಿ ಏಂಜಲೀನಾ ಜ್ಯೂಲಿ ತಮ್ಮ ಮನೆಯಲ್ಲೇ ಆಶ್ರಯ ಕಲ್ಪಿಸಿದ್ದಾರೆ.

ನಟಿ ಕಿಮ್‌ ವಿರುದ್ಧ ಆಕ್ರೋಶ
ಕಾಳ್ಗಿಚ್ಚಿನ ಸಂದರ್ಭದಲ್ಲಿ ಬಳಸಲೆಂದು ಇದ್ದ ನೀರಿನ ಸಂಪನ್ಮೂಲಗಳನ್ನು ವ್ಯರ್ಥಗೈದಿರುವ ನಟಿ ಕಿಮ್‌ ಕರ್ಡಾಶಿಯನ್‌, ಸಿಲ್ವೆಸ್ಟರ್‌ ಸ್ಟಾಲೋನ್‌, ಕೆವಿನ್‌ ಹಾರ್ಟ್‌ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜನರು ವಾರಕ್ಕೆ 2 ಬಾರಿ ಅದೂ ಕೇವಲ 8 ನಿಮಿಷ ಮಾತ್ರ ಉದ್ಯಾನದ ಗಿಡಗಳಿಗೆ ನೀರು ಹಾಕಬೇಕು ಎಂಬ ನಿಯಮವಿದೆ. ಆದರೆ ಈ ಸೆಲೆಬ್ರಿಟಿಗಳು ಈ ನಿಯಮ ಉಲ್ಲಂ ಸುತ್ತಿದ್ದಾರೆ ಎನ್ನಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.