Advertisement

ಕಲ್ಯಾಣಿ ಮುಚ್ಚುವ ಪಾಲಿಕೆ ನಿರ್ಧಾರಕ್ಕೆ ಆಕ್ರೋಷ

11:38 AM May 27, 2018 | Team Udayavani |

ಬೆಂಗಳೂರು: ನಗರದಲ್ಲಿ ಜಲಮೂಲಗಳು ನಾಶವಾಗುತ್ತಿವೆ. ನಗರೀಕರಣದ ಭರದಲ್ಲಿ ಹಲವು ಕೆರೆಗಳು ಅಸ್ತಿತ್ವ ಕಳೆದುಕೊಂಡಿದ್ದು, ಬಹುತೇಕ ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಿಸಲಾಗಿದೆ. ಇದರ ನಡುವೆ ಉಳಿದಿರುವ ಕೆರೆಗಳಿಗೆ ತ್ಯಾಜ್ಯ ನೀರು ಬಿಟ್ಟು ಕಲುಷಿತಗೊಳಿಸಲಾಗಿದೆ. ಈ ನಡುವೆ ಜಲಮೂಲಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪಾಲಿಕೆಯೇ ಅಭಿವೃದ್ಧಿ ಹೆಸರಿನಲ್ಲಿ ಕಾಲುವೆ, ಕಲ್ಯಾಣಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ.

Advertisement

ಪ್ರಸ್ತುತ ರಸತೆ ವಿಸ್ತರಣೆ ನೆಪದಲ್ಲಿ ಗೊಟ್ಟಿಗೆರೆ ಕಲ್ಯಾಣಿಯನ್ನು ಮುಚ್ಚಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಬನ್ನೇರುಘಟ್ಟ ಮುಖ್ಯರಸ್ತೆ ವಿಸ್ತರಣೆಗೆ ಬಿಬಿಎಂಪಿ ಯೋಜನೆ ರೂಪಿಸಿದೆ.

ಇದಕ್ಕಾಗಿ ಗೊಟ್ಟಿಗೆರೆಯ ಅತ್ಯಂತ ಪುರಾತನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ಕಲ್ಯಾಣಿಯನ್ನು ಮುಚ್ಚಲು ನಿರ್ಧರಿಸಿದೆ. ಜತೆಗೆ ಈ ವಿಷಯವನ್ನು ಸ್ಥಳೀಯರ ಗಮನಕ್ಕೂ ತರದೆ ಏಕಾಏಕಿ ಕಲ್ಯಾಣಿಗೆ ಮಣ್ಣು ತುಂಬುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ದೇವಾಲಯಕ್ಕೆ ಹೊಂದಿಕೊಂಡಿರುವ ಬೃಹತ್‌ ಕಲ್ಯಾಣಿ, ನಿರ್ವಹಣೆಯಿಲ್ಲದೆ ಪಾಳುಬಿದ್ದಿತ್ತು. ಈ ನಡುವೆ ವಿವಿಧ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಕಲ್ಯಾಣಿಯಲ್ಲಿದ್ದ ತ್ಯಾಜ್ಯ ತೆರವುಗೊಳಿಸಿ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪಾಲಿಕೆ ಅಧಿಕಾರಿಗಳು ರಸ್ತೆ ವಿಸ್ತರಣೆಗಾಗಿ ಎರಡು ದಿನಗಳಿಂದ ಕಲ್ಯಾಣಿಗೆ ಮಣ್ಣು ತುಂಬುವ ಕೆಲಸ ಆರಂಭಿಸಿದ್ದಾರೆ.

ಈ ಕುರಿತು ಸ್ಥಳೀಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬನ್ನೇರುಘಟ್ಟ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆಯಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಮುಂದಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಕಲ್ಯಾಣಿಯನ್ನು ಮಣ್ಣು ಹಾಕಿ ಮುಚ್ಚುತ್ತಿದ್ದು, ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. 

Advertisement

ಬಿಬಿಎಂಪಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯದರಾದ ಸೌರಭ್‌, ಹಲವು ವರ್ಷಗಳ ಹಿಂದೆಯೇ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಕಲ್ಯಾಣಿ ನಿರ್ಮಿಸಲಾಗಿದೆ. ಬೃಹದಾಕಾರದ ಕಲ್ಯಾಣಿಯಾಗಿರುವುದರಿಂದ ಮಳೆಗಾದಲ್ಲಿ ಮಳೆನೀರು ಕೊಯ್ಲಿಗೆ ಹೆಚ್ಚು ಸಹಕಾರಿಯಾಗಿದ್ದು, ಕಲ್ಯಾಣಿಯಿಂದ ಸುತ್ತಮುತ್ತಲಿನ ಭಾಗಗಳಲ್ಲಿ ಅಂತರ್ಜಲ ಮಟ್ಟ ಉತ್ತಮಗೊಳ್ಳುವ ಸಾಧ್ಯತೆಯಿದೆ.

ಇದ್ಯಾವುದರ ಅರಿವಿಲ್ಲದ ಅಧಿಕಾರಿಗಳು ಕಲ್ಯಾಣಿಯನ್ನು ನಾಶಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಕಲ್ಯಾಣಿಯ ಪಕ್ಕದಲ್ಲಿಯೇ ಬಿಬಿಎಂಪಿ ಕಚೇರಿಯಿದ್ದರೂ, ಪಾಳುಬಿದ್ದ ಕಲ್ಯಾಣಿಯ ಪುನರುಜ್ಜೀವನಕ್ಕೆ ಮುಂದಾಗಿರಲಿಲ್ಲ. ವಿವಿಧ ಸಂಘಟನೆಗಳು ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎರಡು ವರ್ಷಗಳಿಂದ ಕಲ್ಯಾಣಿಯ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಆದರೀಗ ರಸ್ತೆ ವಿಸ್ತರಣೆ ಹೆಸರಿನಲ್ಲಿ ಏಕಾಏಕಿ ಹತ್ತಾರು ಲಾರಿ ಮಣ್ಣು ಸುರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೂರಿದ್ದು, ಜಲಮೂಲಗಳನ್ನು ಅಭಿವೃದ್ಧಿಪಡಿಸಬೇಕಾದ ಪಾಲಿಕೆಯ ಅಧಿಕಾರಿಗಳೇ ಅವುಗಳನ್ನು ನಾಶಪಡಿಸಲು ಮುಂದಾಗುವುದು ಸರಿಯೇ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next