ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಜಾಲ್ಸೂರು ರಾ.ಹೆ. ಮಾರ್ಗದ ಕಲ್ಲಾಜೆ ಬಳಿ ಭೂಕುಸಿತ ನಡೆದ ಸ್ಥಳದಲ್ಲಿ ಹೆಚ್ಚಿನ ಕುಸಿತ ತಡೆಗೆ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಕುಸಿತವಾದ ಬೆನ್ನಲ್ಲೆ ಸೋಮವಾರ ಸುರಿದ ಮಳೆಗೆ ಇನ್ನಷ್ಟು ಕುಸಿತ ಸಂಭವಿಸಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಮರಳಿನ ಬದಲು ಮಣ್ಣು ತುಂಬಿಸಿರುವುದೇ ಇಷ್ಟೊಂದು ಪ್ರಮಾಣದಲ್ಲಿ ಕುಸಿಯಲು ಕಾರಣ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಸುಬ್ರಹ್ಮಣ್ಯ ಭಾಗದಿಂದ ಸುಳ್ಯ, ಮಡಿಕೇರಿ, ಮೈಸೂರು, ಕೇರಳ ಭಾಗಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಕಲ್ಲಾಜೆ ಬಳಿ ರಸ್ತೆಯ ಅಂಚಿನಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು.
ಈ ರಸ್ತೆಯಲ್ಲಿ ಸಂಚಾರ ಕೂಡ ಕೆಲ ದಿನಗಳ ಅವಧಿಗೆ ಸ್ಥಗಿತಗೊಂಡಿತ್ತು. ವೀಕ್ಷಣೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಕುಸಿತಗೊಂಡ ತಳಭಾಗದಿಂದ ಸ್ಯಾಂಡ್ ಬ್ಯಾಗ್ ಅಳವಡಿಸಿ ಕುಸಿತ ತಡೆಗೆ ತಾತ್ಕಾಲಿಕ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಎಂಜಿನಿಯರ್‌ಗೆ ಸೂಚಿಸಿದ್ದರು.
ಅದರಂತೆ ಸ್ಥಳದಲ್ಲಿ ಗುತ್ತಿಗೆದಾರರ ಮೂಲಕ ಮರಳು ಚೀಲ ಅಳವಡಿಸಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ, ಜೋಡಿಸಿಟ್ಟ ಮರಳು ಚೀಲಗಳು ಕೆಲವೇ ದಿನಗಳಲ್ಲಿ ಜರಿದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತವಾಗಿತ್ತು. ಈಗ ಮತ್ತಷ್ಟು ಕುಸಿತವಾಗಿ, ಸಂಪರ್ಕ ಶಾಶ್ವತವಾಗಿ ನಷ್ಟವಾಗುವ ಭೀತಿ ಎದುರಾಗಿದೆ. ಅಲ್ಪ ಮಳೆಗೆ ಈ ಪ್ರಮಾಣದಲ್ಲಿ ಕುಸಿಯಲು ಗುತ್ತಿಗೆದಾರರು ಮರಳಿನ ಬದಲಿಗೆ ಮಣ್ಣಿನ ಚೀಲಗಳನ್ನು ಇಟ್ಟಿರುವುದೇ ಕಾರಣ ಎನ್ನುವುದು ಬೆಳಕಿಗೆ ಬಂದಿದೆ. ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವುದು ಮತ್ತು ಪರ್ಯಾಯ ರಸ್ತೆ ಅಭಿವೃದ್ಧಿಯೇ ಸಮಸ್ಯೆ ಪರಿಹಾರಕ್ಕಿರುವ ದಾರಿಯಾಗಿದೆ.
‘ಸುದಿನ’ ವರದಿ
ಈ ಪ್ರಮುಖ ರಸ್ತೆಯಲ್ಲಿ ಮತ್ತೆ ಸಂಚಾರ ಸ್ಥಗಿತಗೊಳ್ಳುವ ಭೀತಿ ಇರುವ ಕುರಿತು ಮತ್ತು ಪರ್ಯಾಯ ರಸ್ತೆಯಾಗಿ ಗಾಳಿಬೀಡು ಕಡಮಕಲ್ಲು ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಯ ಜರೂರತ್ತಿನ ಕುರಿತು ಸೋಮವಾರ ‘ಉದಯವಾಣಿ’ ಸುದಿನ ವರದಿ ಪ್ರಕಟಿಸಿತ್ತು. ಅಳವಡಿಸಿದ್ದ ಎಲ್ಲ ಮರಳು ಚೀಲಗಳು ಅದೇ ದಿನ ಸಂಜೆ ಮಳೆಗೆ ಕೊಚ್ಚಿಹೋಗಿವೆ.