Advertisement
ಇದು ಸಜೀಪಮೂಡ ಗ್ರಾಮದ ಕಲ್ಲ ಕುಮೇರು (ಕಲ್ಲಗುಂಡಿ) ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಕಥೆ. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಪ್ರಸ್ತಾವನೆಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಿಂಡಿ ಅಣೆಕಟ್ಟಿಗೆ ಪ್ರಸ್ತುತ ಗೇಟ್ ಅಳವಡಿಸಲಾಗಿದ್ದು, ಸುಮಾರು 5-6 ಕಿ.ಮೀ.ವರೆಗೂ ಜಲರಾಶಿ ಸುಂದರವಾಗಿ ಕಂಗೊಳಿಸುತ್ತಿದೆ.
ಕಲ್ಲಗುಂಡಿ ಭಾಗದ ಹತ್ತಾರು ಕೃಷಿಕರು ತಮ್ಮ ಅಡಿಕೆ, ತೆಂಗಿನ ತೋಟಕ್ಕೆ ಬೇಸಗೆಯಲ್ಲಿ ನೀರು ಹಾಕಬೇಕಾದರೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಹಲವು ದಶಕಗಳ ಹಿಂದೆ ತೋಡಿನಲ್ಲಿ ಹೊಂಡವನ್ನು ತೆಗೆದು ಅದರ ಮೂಲಕ ತೋಟಕ್ಕೆ ನೀರು ಹಾಯಿಸುತ್ತಿದ್ದರು. ಆದರೆ ಮಳೆಗಾಲದಲ್ಲಿ ಅದು ಮುಚ್ಚಿ ಹೋಗಿ ಮತ್ತೆ ಹೊಂಡ ತೆಗೆಯಬೇಕಿತ್ತು. ಬಳಿಕ ಕೆಲವು ವರ್ಷಗಳಿಂದ ತೋಡಿನಲ್ಲೇ ರಿಂಗ್ ಹಾಕಿ ಅದರಿಂದ ನೀರು ತೆಗೆಯುತ್ತಿದ್ದರು. ಆದರೆ ಮಳೆಗಾಲ ಬಂತೆಂದರೆ ಸಾಕು ರಿಂಗ್‌ನೊಳಗೆ ಮಣ್ಣು ಹೋಗದಂತೆ ರಕ್ಷಣೆ ಮಾಡಬೇಕಾದ ಸಾಹಸವನ್ನೂ ಮಾಡಬೇಕಿತ್ತು. ಆದರೆ ಪ್ರಸ್ತುತ ತೋಟಕ್ಕೆ ತಾಗಿಕೊಂಡೇ ಸಮೃದ್ಧ ಜಲರಾಶಿಯಿದ್ದು, ತೋಟಕ್ಕೆ ನೀರು ಹಾಕುವ ಅಗತ್ಯವೇ ಇಲ್ಲದ ರೀತಿಯಲ್ಲಿ ಜಲರಾಶಿ ಕಾಣತ್ತಿದೆ. ಜತೆಗೆ ಸುತ್ತಮುತ್ತಲ ಬಾವಿಗಳಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಸ್ಥಳೀಯ ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Related Articles
ತೋಡಿನ ಒಂದು ಭಾಗವು ಸಜೀಪಮೂಡ ಗ್ರಾಮಕ್ಕೆ ಸೇರಿದರೆ, ಇನ್ನೊಂದು ಭಾಗ ಅಮೂrರು ಗ್ರಾಮದಲ್ಲಿದೆ. ಸಜೀಪಮೂಡದ ಕಲ್ಲಗುಂಡಿ ಪ್ರದೇಶದ ಮಂದಿ ತಮ್ಮ ಅಗತ್ಯ ಕೆಲಸಗಳಿಗೆ ಅಮೂrರು ಕರಿಂಗಾಣದ ಮೂಲಕ ಕಲ್ಲಡ್ಕ, ಬಿ.ಸಿ.ರೋಡ್ ಭಾಗಕ್ಕೆ ಹೋಗುತ್ತಿದ್ದಾರೆ. ಆದರೆ ಮಧ್ಯೆ ತೋಡು ಬರುವುದರಿಂದ ಪ್ರತಿವರ್ಷವೂ ಅಡಿಕೆ ಮರಗಳನ್ನು ಕಡಿದು ಅಡ್ಡಲಾಗಿ ಕಾಲುಸಂಕ ನಿರ್ಮಿಸಬೇಕಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುವ ತೋಡನ್ನು ಕಾಲುಸಂಕದ ಮೂಲಕ ದಾಟುವುದೆಂದರೆ ದೊಡ್ಡ ಸಾಹಸವೇ ಆಗಿತ್ತು. ಜತೆಗೆ ಪ್ರತಿವರ್ಷ ಅದನ್ನು ನಿರ್ಮಿಸುವುದಕ್ಕೂ ಸ್ಥಳೀಯರು ಸಾಹಸವನ್ನೇ ಮಾಡುತ್ತಿದ್ದರು.
Advertisement
ಈ ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಅಬಟ್‌ಮೆಂಟ್ ಎತ್ತರ 3.60 ಮೀ. ಆಗಿದ್ದು, 2 ಮೀ. ಎತ್ತರಕ್ಕೆ ನೀರು ನಿಲ್ಲಿಸಲಾಗುತ್ತದೆ. ನದಿಯು 20.10 ಮೀ. ಇದ್ದು, 4.25 ಮೀ. ಅಗಲದ ಸೇತುವೆ ನಿರ್ಮಾಣಗೊಂಡಿದೆ. ಒಟ್ಟು 3 ಮೈನ್ ಪಿಯರ್‌ಗಳಿದ್ದು, 4 ಡಮ್ಮಿ ಪಿಯರ್‌ಗಳಿರುತ್ತವೆ. 8 ಕಿಂಡಿಗಳಿದ್ದು, ಸ್ಟಾಪ್ ಲಾಗ್ ಗೇಟ್ ಮಾದರಿಯ ಗೇಟ್‌ಗಳನ್ನು ನೀರು ಸಂಗ್ರಹಕ್ಕೆ ಬಳಸಲಾಗುತ್ತಿದೆ.
0.74 ಎಂಸಿಎಫ್‌ಟಿ ಶೇಖರಣ ಸಾಮರ್ಥ್ಯಸುಮಾರು 2 ಕೋ. ರೂ.ವೆಚ್ಚದ ಯೋಜನೆಯಲ್ಲಿ 20.10 ಮೀ. ಉದ್ದ(ನದಿಯ ಅಗಲ) ಹಾಗೂ 4.25 ಮೀ. ಅಗಲದ ಸೇತುವೆ ನಿರ್ಮಾಣವಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. 0.74 ಎಂಸಿಎಫ್‌ಟಿ ನೀರಿನ ಶೇಖರಣ ಸಾಮರ್ಥ್ಯವಿದ್ದು, ಸಾಕಷ್ಟು ಉದ್ದಕ್ಕೆ ಸಮೃದ್ಧ ಜಲರಾಶಿ ಹರಡಿಕೊಂಡಿದೆ.
-ಶಿವಪ್ರಸನ್ನ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬಂಟ್ವಾಳ ಹತ್ತಾರು ವರ್ಷಗಳ ಬೇಡಿಕೆ ಈಡೇರಿದೆ ನಮ್ಮ ಹತ್ತಾರು ವರ್ಷಗಳ ಬೇಡಿಕೆಯೊಂದು ಇದರ ಮೂಲಕ ಈಡೇರಿದ್ದು, ಶಾಸಕರು ಹಾಗೂ ಸ್ಥಳೀಯರ ಪ್ರಯತ್ನದ ಫಲವಾಗಿ ಅನುದಾನ ಬಂದಿದೆ. ತೋಟಕ್ಕೆ ನೀರು ಹಾಗೂ ತೋಡಿನ ಕಾಲುಸಂಕ ನಿರ್ಮಾಣಕ್ಕೆ ನಾವು ಸಾಕಷ್ಟು ಸಾಹಸ ಮಾಡಬೇಕಿತ್ತು. ಈಗ ಒಂದೇ ಯೋಜನೆಯ ಮೂಲಕ ಎರಡೂ ಬೇಡಿಕೆ ಈಡೇರಿದ್ದು, ಮುಂದೆ ರಸ್ತೆ ನಿರ್ಮಾಣದ ಬೇಡಿಕೆಯೂ ಸಿಕ್ಕಿದೆ.
-ವಸಂತಕುಮಾರ್ ಕಲ್ಲಗುಂಡಿ, ಸ್ಥಳೀಯ ಕೃಷಿಕರು - ಕಿರಣ್ ಸರಪಾಡಿ