Advertisement

ಹುಬ್ಬಿ ಮಳೆಗೆ ಕಲಬುರಗಿ ತಬ್ಬಿಬ್ಬು

10:21 AM Sep 09, 2017 | |

ಕಲಬುರಗಿ: ಹಿಂಗಾರು ಹಂಗಾಮಿನ ಮೊದಲ ಮಳೆ ಹುಬ್ಬಿಗೆ ಕಲಬುರಗಿ ನಗರ ಸಂಪೂರ್ಣ ತಬ್ಬಿಬ್ಬುಗೊಂಡಿದೆ.
ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಧವಸ ಧಾನ್ಯ ಹಾಳಾಗಿವೆ, ರಸ್ತೆಗಳಲ್ಲಿ ನೀರು ತುಂಬಿಕೊಂಡು
ಸಂಚಾರಕ್ಕೂ ತೊಂದರೆಯಾಗಿದೆ.

Advertisement

ಕಳೆದ ವರ್ಷದಿಂದ ನಗರದಲ್ಲಿ ಚರಂಡಿ ಕಾಮಗಾರಿ ಭರದಿಂದ ಸಾಗಿರುವುದರಿಂದಾಗಿ ಅಲ್ಲಲ್ಲಿ ನೆರೆ ಉಂಟಾಗುವ ಪ್ರಮೇಯ ತಪ್ಪಿದೆ. ಆದರೂ, ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿದು ಹೋಗದೆ ಮನೆಗಳಿಗೆ ನುಗ್ಗಿದೆ. ತಗ್ಗು ಪ್ರದೇಶದಲ್ಲಂತೂ ನೀರು ಉಪಟಳ ಹೆಚ್ಚಿದೆ.

ಗುರುವಾರ ಸಂಜೆ ಹಾಗೂ ರಾತ್ರಿ ಬಿದ್ದ ಮಳೆ ಇಡೀ ನಗರವನ್ನು ತಬ್ಬಿಬ್ಬು ಮಾಡಿದೆ. ಸಂಜೆ ಬಿರುಸಿನ ಮತ್ತು ರಾತ್ರಿ ಸಾಧಾರಣೆ ಮಳೆ ಜನರನ್ನು ಕಾಡಿದೆ. ನಗರದ ಬಹುತೇಕ ರಸ್ತೆಗಳು ಹಳ್ಳ-ಕೊಳ್ಳಗಳಾದವು. ನಗರದ ಬಹುತೇಕ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತಗೊಂಡಿವೆ. ನೂರಾರು ಮನೆಗಳಲ್ಲಿ ನೀರು ನುಗ್ಗಿದರೆ, ದೊಡ್ಡ-ದೊಡ್ಡ ಕಟ್ಟಡಗಳಲ್ಲಿ ನೆಲ ಮಳಿಗೆಗಳು ನೀರಿನಲ್ಲಿ ಜಲಾವೃತಗೊಂಡಿವೆ.

ನಗರದ ಪ್ರಮುಖ ರಸ್ತೆಗಳಾದ ಸಾರ್ವಜನಿಕ ಉದ್ಯಾನವನದ ರಸ್ತೆ, ಲಾಲಗೇರಿ ಕ್ರಾಸ್‌, ಜಗತ್‌, ಶಹಾಬಜಾರ, ಸಿಟಿ ಬಸ್‌ ನಿಲ್ದಾಣ, ಇನ್ನೂ ಬಡಾವಣೆಗಳಾದ ಗಂಗಾನಗರ, ನ್ಯೂ ರಾಘವೆಂದ್ರ ಕಾಲೋನಿ, ಶಾಮಸುಂದರ ನಗರ, ಗೋಲ್ಡ್‌ಹಬ್‌ ರಸ್ತೆ, ಸೇರಿದಂತೆ ಹಲವು ಕಡೆಗಳಲ್ಲಿ ನೀರು ತುಂಬಿ ತೊಂದರೆಯಾಯಿತು.

ಕೆಲವು ಬಡಾವಣೆಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವ ಕುರಿತು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ನಗರದ ಸ್ಲಂ
ಏರಿಯಾಗಳಂತೂ ಮಳೆ ನೀರು ನಿಂತು ಹೊರಗೆ ಕಾಲು ಇಡಲು ಸಹ ಆಗದಂತಹ ಪರಸ್ಥಿತಿ ಉಂಟಾಯಿತು, ಇದ್ದ
ಮನೆಗಳು ನೀರಿನಿಂದ ಜಲಾವೃತ ಗೊಂಡಿದೆ.ಗಂಗಾನಗರ, ಕೇಂದ್ರ ಬಸ್‌ನಿಲ್ದಾಣ ಪ್ರದೇಶ ಹಾಗೂ ಲಾಳಗೇರಿ ಕ್ರಾಸ್‌
ನಲ್ಲಿನ ಮನೆಗಳಿಗೆ ನುಗ್ಗಿದ್ದ ನೀರನ್ನು ರಾತ್ರಿ ಇಡೀ ಜನರು ಹೊರ ಚೆಲ್ಲಿ ಜಾಗರಣೆ ಮಾಡಿದರು.

Advertisement

ಕೈಕೊಟ್ಟ ವಿದ್ಯುತ್‌: ಭಾರಿ ಜೋರಿನಿಂದ ಮಳೆ ಸುರಿದ ಕಾರಣ ರಾತ್ರಿ ತಗ್ಗು ಪ್ರದೇಶ, ಸ್ಲಂ ಪ್ರದೇಗಳಲ್ಲಿ ವಿದ್ಯುತ್‌
ಸಂಪರ್ಕ ಕಡಿತವಾಗಿತ್ತು. ರಾತ್ರಿ ಇಡೀ ಮಳೆ ಇದ್ದ ಪರಿಣಾಮ ಕೆಲವು ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯವಾಗಲಿಲ್ಲ. ಮಳೆ ಅಡಚಣೆ ಮಾಡಿತು ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 44 ಮಿ.ಮೀ ಮಳೆಯಾಗಿದೆ. ಆದರೆ, ನಗರದಲ್ಲಿ ಶುಕ್ರವಾರ ಸಂಜೆ ಅಂತ್ಯಗೊಂಡ 24
ಗಂಟೆ ಅವಧಿಯಲ್ಲಿ 5-6 ಮಿ.ಮೀ ಮಳೆಯಾಗಿದೆ.

„ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next