ಪಣಜಿ: ಕಳೆದ ಸುಮಾರು ಹನ್ನೆರಡು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಯಲ್ಲಿ ಮುಳುಗಿದ್ದ ಕಳಸಾ ಬಂಡೂರಿ ನಾಲೆಯಿಂದ ನೀರು ಹರಿಸುವ ಕರ್ನಾಟಕದ ಪರಿಷ್ಕೃತ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಇದು ಮಹದಾಯಿಯ ಕತ್ತು ಹಿಸುಕುವ ಪ್ರಕ್ರಿಯೆಯನ್ನು ಬಲಪಡಿಸುತ್ತದೆ ಮತ್ತು ಇದು ಗೋವಾಗೆ ಎಚ್ಚರಿಕೆಯ ಗಂಟೆಯಾಗಿದೆ. ರಾಜ್ಯ ಸರಕಾರ ಕೇಂದ್ರದ ಮುಂದೆ ಮನವಿ ಸಲ್ಲಿಸಿ ಈ ಅನುಮತಿಗೆ ತಡೆ ನೀಡಬೇಕು ಎಂದು ಪರಿಸರ ತಜ್ಞರು ಆಗ್ರಹಿಸಿದ್ದಾರೆ.
ಗೋವಾದ ಮುಖ್ಯ ಜೀವನಾಡಿ, ಅಂದರೆ ಮಹದಾಯಿ ನದಿಯು ಗೋವಾದ ಜೊತೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮೂಲಕ ಹರಿಯುತ್ತದೆ. 78 ರಷ್ಟು ಮಹದಾಯಿ ಗೋವಾದಿಂದ ಬರುತ್ತದೆ. ಈ ಮಹದಾಯಿ ಹರಿವನ್ನು ತಿರುಗಿಸಲು ಕರ್ನಾಟಕ ಪ್ರಯತ್ನಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಏತನ್ಮಧ್ಯೆ, ಈ ವಿಷಯದಲ್ಲಿ ಪ್ರತಿಪಕ್ಷಗಳು ಈಗ ಸರ್ಕಾರವನ್ನು ಟೀಕಿಸಿವೆ. ಗೋವಾ ಫಾರ್ವರ್ಡ್ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ವಾಗ್ದಾಳಿ ನಡೆಸಿದ್ದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕುರ್ಚಿ ಉಳಿಸಲು ಮಹದಾಯಿ ಅವರ ಕತ್ತು ಹಿಸುಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಎಲುಬಿಲ್ಲದ ನಾಲಿಗೆಯ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು ಗೋವಾ ರಾಜ್ಯ ರಕ್ಷಣೆ ಮಾಡುವವರಿಗೆ ಅಧಿಕಾರ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಮಡಗಾಂವನಲ್ಲಿ ಸುದ್ಧಿಗೋಷ್ಠಿಯಲ್ಲಿ ಗೋವಾ ಫಾರ್ವರ್ಡ್ ಪಕ್ಷದ ಶಾಸಕ ಹಾಗೂ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮಾತನಾಡಿ, ಈ ನಿರ್ಧಾರ ಕೈಗೊಳ್ಳಲು ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಾವಂತ್ ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಿ. ಟಿ. ರವಿ ಉಪಸ್ಥಿತರಿದ್ದರು. ಸಿಕ್ಕಿರುವ ಮಾಹಿತಿ ಪ್ರಕಾರ ಗೋವಾ ಮುಖ್ಯಮಂತ್ರಿ ಸಾವಂತ್ ಅಲ್ಲಿ ಮ್ಹದಾಯಿ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‍ನಿಂದ ಬಿಜೆಪಿ ಸೇರಿದ ಶಾಸಕರಿಗೆ ಸ್ಥಾನ ನೀಡುವಂತೆ ಪಕ್ಷದ ಮುಖಂಡರಿಗೆ ಒತ್ತಾಯಿಸಿದರು. ಮುಖ್ಯಮಂತ್ರಿಗಳಿಗೆ ಅವರ ಕುರ್ಚಿ ಮಹದಾಯಿಗಿಂತ ಪ್ರಿಯವಾಗಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದು ವಿಜಯ್ ಸರ್ದೇಸಾಯಿ ಆರೋಪಿಸಿದರು.
ಈ ಕ್ರಮದ ಮೂಲಕ ಮುಖ್ಯಮಂತ್ರಿಳೇ ನೀವು ಗೋವಾದ ಜನತೆಗೆ ಮಹದಾಯಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಇದೇ ಕೊನೆಯ ಅವಕಾಶ ಎಂದು ಹೇಳಲು ಯತ್ನಿಸುತ್ತಿದ್ದಾರಾ? ಗೋವಾದ ನದಿಗಳ ಸಾವು ಗೋವಾ ರಾಜ್ಯದ ಜನತೆಗೆ ನಿಮ್ಮ ಸರ್ಕಾರದ ಹೊಸ ವರ್ಷದ ಉಡುಗೊರೆಯೇ..? ಎಂದು ಶಾಸಕ ವಿಜಯ್ ಸರ್ದೇಸಾಯಿ ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೃದಯಹೀನ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಟೀಕಿಸಿದ ಸರ್ದೇಸಾಯಿ, ಇದು ಕೇಂದ್ರ ಮತ್ತು ಕರ್ನಾಟಕ ಸರ್ಕಾರದ ಒತ್ತಡಕ್ಕೆ ಮಣಿದು ಗೋವಾ ಸರ್ಕಾರ ಒಪ್ಪಿಕೊಂಡಿರುವ ಸಂಪೂರ್ಣ ಶರಣಾಗತಿ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಾವಂತ್ ಅವರಿಗೆ ತಾಯಿಯಂತಿದ್ದ ಮಹದಾಯಿ ವಿರುದ್ಧ ಇದು ವಂಚನೆ ಎಂದು ಅವರು ಹೇಳಿದ್ದಾರೆ. ಈಗ ಮಹದಾಯಿ ಬಲಿಯಾಗಿದೆ, ಮುಂದೆ ಕಲ್ಲಿದ್ದಲು ತರಲು ದಾರಿ ತೆರೆಯಲಿದ್ದಾರೆ. ಹೀಗಾಗಿ ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.