Advertisement

ಕಲಬುರಗಿ: 11 ದೀದಿಯರಿಗೆ ಸ್ವಾತಂತ್ರ್ಯೋತ್ಸವಕ್ಕೆ ಪ್ರಧಾನಿ ಮೋದಿ ಆಹ್ವಾನ

05:26 PM Aug 14, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮತ್ತು ಹೊಸ ನಿಟ್ಟಿನಲ್ಲಿ ಕೃಷಿಯನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಟ್ಟಿರುವ ಹೊಸ ಹೆಜ್ಜೆ ಭಾಗವಾಗಿ ರಾಜ್ಯದ 11 ಜನ ಲಕಪತಿ ಮತ್ತು ಡ್ರೋಣ್‌ ದೀದಿಯರಿಗೆ ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರ ಆಹ್ವಾನಿಸಿದೆ.

Advertisement

ಸಂತೋಷದ ವಿಚಾರ ಎಂದರೆ 11 ಜನರ ಪೈಕಿ ಮೂವರು ಕಲಬುರಗಿಯವರು ಎನ್ನುವುದು ಕಲ್ಯಾಣದ ಹೆಮ್ಮೆಯ ಸಂಗತಿಯಾಗಿದೆ. ಡ್ರೋಣ್‌ ದೀದಿಯರಾದ ಕಲಬುರಗಿಯ ಸಂಗೀತಾ ಬಸವರಾಜ್‌, ಅಫಜಲಪುರದ ಬನಶಂಕರಿ ಗುರುಬಸಪ್ಪ ನಿಂಬಾಳ್‌, ಜಕ್ಕಮ್ಮ ಬಸವರಾಜ್‌ ಸೇರಿದಂತೆ ಉತ್ತರ ಕನ್ನಡದ ಸುಧಾ ಗಣೇಶ ಸಿದ್ದಿ, ಕೊಪ್ಪಳದ ಶಶಿಕಲಾ ನಿಂಗಪ್ಪ, ಗದಗದ ಅಕ್ಷತಾ ಆರ್‌.ಪಾಟೀಲ, ಚಿತ್ರದುರ್ಗದ ವೀಣಾ ಕಾಂತರಾಜ್‌ ಜಿ.ಎಂ., ತುಮಕೂರಿನ ಭವ್ಯಾ ಎಂ.ಟಿ., ಹಾಸನದ ರೋಜಾ ಅನಿಲಕುಮಾರ ಎಸ್‌., ಬಳ್ಳಾರಿಯ ಸಂಗೀತಾ ಅವಿನಾಶ ಕುಮಾರ ತಿಗರಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ಸಾಧಕಿಯರೊಂದಿಗೆ ಅವರ ಗಂಡಂದಿರು ಸಹ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಲು ಕೇಂದ್ರ ಸರ್ಕಾರ ಆಹ್ವಾನಿಸಿದೆ.

ಏನಿದು ದೀದಿ ಕಹಾನಿ?: ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿ ಕೊಡಲು ಕೇಂದ್ರ ಸರ್ಕಾರದ “ನಮೋ ಡ್ರೋಣ್‌ ದೀದಿ’ ಯೋಜನೆ ಇದಾಗಿದೆ. ಸ್ವ-ಸಹಾಯ ಸಂಘಗಳ ಅರ್ಹ ಮಹಿಳೆಯರಿಗೆ ಕೋರಮಂಡಲ, ಇಫ್ಕೂ ಮತ್ತು ಆರ್‌ಸಿಎಫ್‌ ಕಂಪನಿಗಳ ಸಹಯೋಗದಲ್ಲಿ ಡ್ರೋಣ್‌ ಚಾಲನಾ ತರಬೇತಿ ನೀಡಲಾಗಿದೆ. ಪ್ರತಿ ಜಿಲ್ಲೆಯಿಂದ 10ರಿಂದ 15 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರಿಗೆ ಮೈಸೂರು, ಹೈದ್ರಾಬಾದ್‌ ಹಾಗೂ ಚೆನ್ನೈ ತರಬೇತಿ
ಕೇಂದ್ರಗಳಲ್ಲಿ ತರಬೇತಿ ನೀಡಿ, ಪರವಾನಗಿ ಕೂಡಾ ಕೊಡಲಾಗಿದೆ.

ಡ್ರೋಣ್‌ ಮೂಲಕ ರೈತರ ಹೊಲ, ತೋಟಗಳಿಗೆ ದ್ರವ ರೂಪದ ಕೀಟ, ರೋಗನಾಶಕ, ರಸಗೊಬ್ಬರ ಮತ್ತು ನೈಸರ್ಗಿಕ ಕೃಷಿ ಪರಿಕರಗಳನ್ನು ಸಿಂಪಡಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಇಂದಿನ ಡಿಜಿಟಲ್‌(ತಾಂತ್ರಿಕ) ಯುಗದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಅತ್ಯವಶ್ಯಕವಾಗಿದೆ. ರೈತರು ಅನುಭವಿಸುತ್ತಿರುವ ಕೂಲಿ ಕಾರ್ಮಿಕರ ಸಮಸ್ಯೆ ಸರಿದೂಗಿಸಲು
ಡ್ರೋಣ್‌ ಸಿಂಪರಣೆ ವರದಾನವಾಗಲಿದೆ. ಅಲ್ಲದೆ, ಮಹಿಳೆಯರಿಗೆ ಆದಾಯವನ್ನು ತರಲಿದೆ. ಆದ್ದರಿಂದ ಈ ತರಬೇತಿ ಪಡೆದ ಮಹಿಳೆಯರನ್ನು ಡ್ರೋಣ್‌ ದೀದಿ ಎಂದೂ, ಡ್ರೋಣ್‌ ಬಳಕೆ ಮಾಡಿ ಹಣ ಗಳಿಕೆ ಮಾಡುತ್ತಿರುವ ಮಹಿಳೆಯರಿಗೆ ಲಕಪತಿ ದೀದಿ ಎಂದು ಕರೆಯಲಾಗುತ್ತಿದೆ.

ಈ ರೀತಿಯ ಸಾಧನೆ ಮಾಡಿರುವ ದೀದಿಯರಿಗೆ ಕೇಂದ್ರ ಸರ್ಕಾರ ಉತ್ತೇಜನ ಹಾಗೂ ಸಾರ್ವಜನಿಕ ಆಯಾಮದಲ್ಲಿ ಅವರ ಪ್ರಯತ್ನ ಮತ್ತು ಶ್ರಮ ಗೌರವಿಸುವ ನಿಟ್ಟಿನಲ್ಲಿ ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು
ಆಹ್ವಾನ ನೀಡಿದೆ. ಇದು ಈಗ ಆ ಮಹಿಳೆಯರಿಗೆ ದೊರಕಿದ ಸರ್ವಶ್ರೇಷ್ಠ ಗೌರವವೂ ಆಗಿದೆ ಎನ್ನುವುದು ಹೆಮ್ಮೆಯ ಸಂಗತಿ.

Advertisement

ಬಹಳ ಖುಷಿ ಮತ್ತು ಹೆಮ್ಮೆಯೂ ಆಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಬರೀ ಕೂಲಿ ಆಳುಗಳು ಎನ್ನುವುದು ಇತ್ತು. ಆದರೆ, ಈಗ ನಾವು  ಮಹಿಳೆಯರು ಲಕಪತಿ ಆಗಿದ್ದೇವೆ. ಹೊಲ, ತೋಟಗಳಲ್ಲಿ ದ್ರವ ರೂಪದ ಕೀಟ, ರೋಗನಾಶಕ, ರಸಗೊಬ್ಬರ ಸಿಂಪರಣೆ ಮಾಡಿ ಹಣ ಗಳಿಕೆ ಮಾಡುತ್ತಿದ್ದೇವೆ. ಈಗ ನಮಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಸ್ವಾತಂತ್ರ್ಯೋ ತ್ಸವದಲ್ಲಿ ಪಾಲ್ಗೊಳ್ಳಲು ಕರೆದಿರುವುದು ಹೆಮ್ಮೆಯ ಸಂಗತಿ. ಇನ್ನೂ ಮಹಿಳೆ ಅನಾದರಕ್ಕೆ ಒಳಗಾಗುವ ಮಾತಿಲ್ಲ.
ಸಂಗೀತಾ ಬಸವರಾಜ ಹಿರೇಗೌಡ,
ಡ್ರೋಣ್‌ ದೀದಿ, ಕಲಬುರಗಿ

ಇದೊಂದು ಒಳ್ಳೆಯ ಯೋಜನೆಯಾಗಿದೆ. ಇದರಿಂದ ಮಹಿಳೆ ಸ್ವಾವಲಂಬಿಯ ಜತೆಯಲ್ಲಿ ಸ್ವಂತ ಉದ್ಯೋಗ ಮಾಡುವಂತೆಯೂ
ಆಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ನಾವು ಬಹಳಷ್ಟು ಮಹಿಳೆಯರಿಗೆ ತರಬೇತಿಗೆ ಕರೆದಿದ್ದೆವು. 13 ಜನರಿಗೆ ತರಬೇತಿ ನೀಡಲಾಗಿದೆ.
ಅವರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯೋಗ ಅಥವಾ ಯೋಜನೆ ಕೃಷಿಯ ನಂಬಿಕೆ ಬದಲಿಸಲಿದೆ.
*ಭಂವರಸಿಂಗ್‌ ಮೀನಾ,
ಜಿಪಂ ಸಿಇಒ, ಕಲಬುರಗಿ

*ಸೂರ್ಯಕಾಂತ್‌ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next