ಕಲಬುರಗಿ: ಪಾಲಿಕೆ ಚುನಾವಣೆ ಫಲಿತಾಂಶ ಬಂದು ಸೋಮವಾರಕ್ಕೆ ಒಂದು ವಾರವಾದರೂ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಪಕ್ಷಗಳ ನಡುವೆ ಮೈತ್ರಿಯ ಒಮ್ಮತ ಮೂಡುತ್ತಿಲ್ಲ. ಹೀಗಾಗಿ ಅನಿಶ್ಚತತೆ ಕರಿನೆರಳು ಹಾಗೂ ಕಸರತ್ತು ಮುಂದುವರಿದಿದೆ.
ಕಾಂಗ್ರೆಸ್ ಪಕ್ಷದವರೇ ಮೇಯರ್ ಆಗಲಿದ್ದಾರೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದರೇ, ಬಿಜೆಪಿ ತಮ್ಮ ಪಕ್ಷದವರೇ ಮೇಯರ್ ಆಗುತ್ತಾರೆ ಎಂದು ಹೇಳುತ್ತಿದೆ. ಆದರೆ ಪ್ರಮುಖ ಪಾತ್ರ ನಿರ್ವಹಿಸಬೇಕಾದ ಜೆಡಿಎಸ್ ಮಾತ್ರ ಯಾರಿಗೂ ಬೆಂಬಲ ನೀಡುವ ಕುರಿತು ತನ್ನ ನಿರ್ಧಾರ ಪ್ರಕಟಿಸಿಲ್ಲ. ಜೆಡಿಎಸ್ ಕಾಯ್ದು ನೋಡುವ ಹಾಗೂ ಅವಕಾಶವಾದಿತನ ತಂತ್ರಕ್ಕೆ ಮೊರೆ ಹೋಗಿದ್ದು, ಮುಂದೇನು? ಎನ್ನುವಂತಾಗಿದೆ.
ಸೆ.13ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಒಟ್ಟಾರೆ ಎಲ್ಲ ಚಟುವಟಿಕೆಗಳು ಏನಿದ್ದರೂ ಬೆಂಗಳೂರಿನಲ್ಲೇ ಎನ್ನುವಂತಾಗಿದೆ. ಆದರೆ ಸದಸ್ಯರ್ಯಾರೂ ಕಮಲ ಆಪರೇಷನಕ್ಕೆ ಒಳಗಾಗಬಾರದೆಂದು ಕಾಂಗ್ರೆಸ್ ಪಕ್ಷ ರವಿವಾರ ತನ್ನೆಲ್ಲ ಪಾಲಿಕೆಯ ಸದಸ್ಯರನ್ನು ಸನ್ಮಾನಿಸುವ ಮೂಲಕ ಒಗ್ಗಟ್ಟಿನ ಮಂತ್ರ ಘೋಷಿಸಿದೆ.
ಕಾಂಗ್ರೆಸ್‌ನಲ್ಲಿ ಲಿಂಗಾಯಿತ ಸದಸ್ಯರೇ ಇಲ್ಲ: ಮೇಯರ್ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದರೆ, ಉಪಮೇಯರ್ ಬಿಸಿಬಿ ವರ್ಗಕ್ಕೆ ಮೀಸಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದಲೇ ಈಗಲೇ ಹಲವರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ ಲಿಂಗಾಯಿತ ವರ್ಗದವರ ಹೆಸರು ಮುಂಚೂಣಿಗೆ ಬರುತ್ತಿದೆ. ಆದರೆ ಕಾಂಗ್ರೆಸ್‌ದಿಂದ ಬಿಜೆಪಿಯಷ್ಟು ಮೇಯರ್ ಆಕಾಂಕ್ಷಿಗಳ ಹೆಸರುಗಳು ಚಾಲ್ತಿಗೆ ಬರುತ್ತಿಲ್ಲ. ಬಿಜೆಪಿ ಗೆದ್ದಿರುವ 23 ಸದಸ್ಯ ಸ್ಥಾನಗಳಲ್ಲಿ 12 ಜನ ಸದಸ್ಯರು ಲಿಂಗಾಯಿತ ವರ್ಗಕ್ಕೆ ಸೇರಿದ್ದಾರೆ. ಆದರೆ ಕಾಂಗ್ರೆಸ್‌ದಿಂದ ಗೆದ್ದಿರುವ 27 ಸ್ಥಾನಗಳಲ್ಲಿ ಒಬ್ಬರೂ ಲಿಂಗಾಯಿತ ವರ್ಗಕ್ಕೆ ಸೇರಿಲ್ಲ. ಕಾಂಗ್ರೆಸ್‌ನ ಒಟ್ಟಾರೆ 27 ಸ್ಥಾನಗಳಲ್ಲಿ 17 ಸದಸ್ಯರು ಮುಸ್ಲಿಂರಿದ್ದಾರೆ. ಎಂಟು ಜನ ದಲಿತ ಸದಸ್ಯರಿದ್ದಾರೆ. ಒಂದು ವೇಳೆ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಏರ್ಪಟ್ಟರೆ ಸಾಮಾನ್ಯ ವರ್ಗದ ಮೇಯರ್ ಸ್ಥಾನಕ್ಕೆ ಪ್ರವರ್ಗದವರೇ ಆಯ್ಕೆ ಆಗುವ ಸಾಧ್ಯತೆಗಳೇ ಹೆಚ್ಚು.
ಕಾಂಗ್ರೆಸ್ ಪಕ್ಷದಿಂದ ಓರ್ವರೂ ಲಿಂಗಾಯಿತ ವರ್ಗದ ಸದಸ್ಯರು ಆಯ್ಕೆ ಆಗದಿರುವುದರಿಂದ ಪಕ್ಷದಲ್ಲಿ ಆತ್ಮಾವಲೋಕನ ನಡೆದಿದೆ. ಲಿಂಗಾಯಿತ ವರ್ಗದವರು ಯಾರೂ ಗೆದ್ದು ಬಂದಿಲ್ಲ ಎನ್ನುವ ವಿಷಯ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
ಸೋಮವಾರದತ್ತ ಎಲ್ಲರ ಚಿತ್ತ: ಕಳೆದ ಒಂದು ವಾರದಿಂದ ನಡೆಯುತ್ತಿರುವ ಕಸರತ್ತಿಗೆ ಸೋಮವಾರ ತೆರೆ ಬೀಳಬಹುದು ಎಂದು ಅಂದಾಜಿಸಲಾಗಿದೆ. ಜೆಡಿಎಸ್ ಯಾರಿಗೆ ಬೆಂಬಲ ನೀಡುತ್ತದೆ ಎನ್ನುವ ನಿರ್ಧಾರ ಸೋಮವಾರ ಪ್ರಕಟಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಒಟ್ಟಾರೆ ಕಲಬುರಗಿ ಮಹಾಪೌರ-ಉಪಮಹಾಪೌರ ಚುನಾವಣೆ ನಡೆದು ಯಾರು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ? ಎಂಬುದು ರಾಜ್ಯದಾದ್ಯಂತ ಚರ್ಚೆಯಾಗುತ್ತಿರುವುದು ಕುತೂಹಲ ಮತ್ತಷ್ಟು ಕೆರಳಿಸುವಂತೆ ಮಾಡಿದೆ.