ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನಗಳಲ್ಲಿ ಜಯಗಳಿಸಲಿದೆ. ಅಲ್ಲದೇ, ರಾಜ್ಯದ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಪಕ್ಷದ ಯಾವುದೇ ತೀರ್ಮಾನಕ್ಕೂ ಬದ್ಧನಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ನ ಗೆಲುವು 1978ರ ಅಭೂತಪೂರ್ವ ವಿಜಯವನ್ನು ಮರುಕಳಿಸಲಿದೆ. ಆ ಮೂಲಕ ಲೋಕಸಭೆ ಚುನಾವಣೆಯ ವಿಜಯಕ್ಕೆ ಮುನ್ನುಡಿ ಬರೆಯಲಿದೆ ಎಂದಿದ್ದಾರೆ.
ಅಲ್ಲದೇ, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಪೈಟೋಟಿ ಇರುವುದರ ಬಗ್ಗೆ ಕೇಳಿಬಂದಿರುವ ಮಾತುಗಳ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ಅನೇಕ ವರದಿಗಳಿವೆ. ಆದರೆ, ಅದು ಮಾಧ್ಯಮಗಳ ದೃಷ್ಟಿಕೋನ ಅಷ್ಟೇ. ವಾಸ್ತವದಲ್ಲಿ ಪಕ್ಷದಲ್ಲಿ ಪ್ರತಿ ನಾಯಕರು ಹಾಗೂ ಕಾರ್ಯರ್ತರ ನಡುವೆ ಒಗ್ಗಟ್ಟಿದೆ. ಕಾಂಗ್ರೆಸ್ ಗೆಲುವಿಗಾಗಿ ಎಲ್ಲರೂ ಅವಿರತವಾಗಿ ಶ್ರಮಿಸುತ್ತಿದ್ದೇವೆ. ವೈಯಕ್ತಿಕವಾಗಿ ನನಗೆ ಪಕ್ಷ ಮೊದಲು, ಸಿಎಂ ಸ್ಥಾನ ನಂತರ, ಹೀಗಾಗಿ ಈ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ನಿರ್ಣಯಕ್ಕೆ ಬದ್ಧನಾಗಿದ್ದೇನೆ ಎಂದಿದ್ದಾರೆ.
ಬಿಜೆಪಿ ವಿರುದ್ಧ ಕಿಡಿ
ಬಜರಂಗದಳ ನಿಷೇಧ ವಿಚಾರದ ಕಾಂಗ್ರೆಸ್ ಪ್ರಸ್ತಾಪದ ವಿಚಾರವನ್ನು ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಈ ವಿಚಾರವನ್ನು ತಪ್ಪಾಗಿ ನಿರೂಪಿಸುವ ಮೂಲಕ ಸಮಾಜವನ್ನು ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ದೇಶದ ಯುವ ಜನತೆಗೆ ಉದ್ಯೋಗ, ಜನಸಾಮಾನ್ಯನಿಗೆ ಬೆಲೆ ಏರಿಕೆಯಿಂದ ಮುಕ್ತಿ ನೀಡಿದ ಬಿಜೆಪಿ ಬರೀ ಪ್ರಚೋದನಾ ಭಾಷಣಗಳ ಮೂಲಕ ಸಮಾಜವನ್ನು ಒಡೆಯುತ್ತಿದೆ.ಬಿಜೆಪಿಯ ಮೋದಿ ಮಂತ್ರ ಈ ಬಾರಿ ರಾಜ್ಯದಲ್ಲಿ ಫಲಿಸುವುದಿಲ್ಲ ಎಂದು ಡಿಕೆಶಿ ಕಿಡಿಕಾರಿದ್ದಾರೆ.