ಸಾಗರ : ಜಲ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕು. ಜಲಮೂಲವಾಗಿರುವ ಕೆರೆಕಟ್ಟೆಗಳನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿರುವ ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದರು.
ತಾಲೂಕಿನ ಕೆಳದಿ ಗ್ರಾಮದಲ್ಲಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಗ್ರಾಮ ಪಂಚಾಯ್ತಿ ಮತ್ತು ಹಿರೆಕೆರೆ ಅಭಿವೃದ್ಧಿ ಸಮಿತಿ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ನಮ್ಮೂರು ನಮ್ಮ ಕರೆ ಯೋಜನೆಯಡಿ ಕೆಳದಿ ಹಿರೇಕೆರೆ ಹೂಳೆತ್ತುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿರಿಯರು ನಮಗೆ ಕೆರೆಕಟ್ಟೆಗಳನ್ನು ನಿರ್ಮಿಸಿ ಕೊಡುವ ಮೂಲಕ ಜಲಸಂಸ್ಕೃತಿಯನ್ನು ನಮ್ಮ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಿದ್ದಾರೆ. ಬದಲಾದ ದಿನಗಳಲ್ಲಿ ನಾವು ನೀರಿನ ಮಹತ್ವವನ್ನು ಮರೆತಿದ್ದೇವೆ. ಕೆರೆಕಟ್ಟೆಗಳು ಇರುವುದೇ ಮೀನು ಹಿಡಿಯಲು ಎನ್ನುವ ಮನೋಸ್ಥಿತಿ ಬೆಳೆದು ಬಿಟ್ಟಿದೆ. ಜಲಮೂಲ ಉಳಿಸಿಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ನಾವು ನೀರಿಗಾಗಿ ಪರಿತಪಿಸಬೇಕಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಮ್ಮೂರು ನಮ್ಮ ಕೆರೆ ಯೋಜನೆ ಮೂಲಕ ಕೆಳದಿ ಹಿರೇಕೆರೆಯ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ಸಂಗತಿ. ಸಂಸ್ಥೆಯ ಕಾರ್ಯಕ್ರಮಕ್ಕೆ ನಾವು ಸಹಯೋಗ ನೀಡಬೇಕು. ಹೊಸ ಕೆರೆ ಮಾಡಲು ಜಾಗದ ಕೊರತೆ ಇದೆ. ಇಂತಹ ಸಂದರ್ಭದಲ್ಲಿ ಇರುವ ಕೆರೆ ಉಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಹೆಚ್ಚು ಪೂರಕ ಎಂದು ಹೇಳಿದರು.
ಇದನ್ನೂ ಓದಿ : ಎಂಡಿಎಫ್ ಎಜಿಎಂ ಗಲಾಟೆಯಲ್ಲಿ ಹಾಲಪ್ಪ ಇಲ್ಲ; ಬಸವರಾಜ್ ಪ್ರತಿಪಾದನೆ
ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಗೊಂಡಿರುವ ಡಾ. ಕೆಳದಿ ಗುಂಡಾ ಜೋಯಿಸ್ ಅವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ.ಸತ್ಯನಾರಾಯಣ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಾಬು ನಾಯ್ಕ್, ರಾಮಣ್ಣ ಗಳಗಿನಕಟ್ಟೆ, ಕೆ. ಹಾದೇವಪ್ಪ, ಗೋಪಾಲಕೃಷ್ಣ ಇನ್ನಿತರರು ಹಾಜರಿದ್ದರು. ವಿನೋದಾ ಜೋಯ್ಸ್ ಪ್ರಾರ್ಥಿಸಿದರು. ಎಂ.ಕೆ.ದ್ಯಾವಪ್ಪ ವಂದಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು.