Advertisement

ತೆವಳುತ್ತ ಸಾಗಿದೆ ಕಾಗಿಣಾ ಮೇಲ್ಸೇತುವೆ ಕಾಮಗಾರಿ..!

06:10 PM Aug 12, 2021 | Team Udayavani |

ಸೇಡಂ: ತಾಲೂಕಿನ ಮಳಖೇಡ ಬಳಿಯ ಕಾಗಿಣಾ ನದಿಗೆ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿ ತೆವಳುತ್ತ ಸಾಗಿದೆ. ಪ್ರತಿ ಬಾರಿ ಧಾರಾಕಾರ ಮಳೆಯಾದರೆ ಪ್ರವಾಹ ಉಂಟಾಗಿ ಮೇಲ್ಸೇತುವೆ ಮುಳುಗುತ್ತದೆ. ಬ್ರಿಡ್ಜ್ ಮೇಲೆ ನೀರು ಹರಿಯುತ್ತದೆ. ಇದರಿಂದ ಹೈದ್ರಾಬಾದ- ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸ್ಥಗಿತ ಗೊಂಡ ಉದಾಹರಣೆಗಳಿವೆ.

Advertisement

24 ಕೋಟಿ ರೂ.ಗಳ ಈ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ ಡಿಸಿಎಲ್‌) ವಹಿಸಲಾಗಿದೆ. ಟೆಂಡರ್‌ ಪಡೆದ ಗುತ್ತಿಗೆದಾರರಿಗೆ 18 ತಿಂಗಳಲ್ಲಿ ಕಾಮಗಾರಿ ಯನ್ನು ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಕಾಮಗಾರಿ ಪೂರ್ಣಗೊಳಿಸುವ ಅವಧಿ ಮುಗಿದಿದ್ದರೂ ಇನ್ನು ತೆವಳುತ್ತ ಕೆಲಸ ಸಾಗಿದೆ.

ಪ್ರವಾಹ ಸ್ಥಿತಿಯಿಂದ ಕಾಗಿಣಾ ನದಿ ತಟದಲ್ಲಿರುವ ಐತಿಹಾಸಿಕ ಸುಕ್ಷೇತ್ರ ಟೀಕಾಚಾರ್ಯರ ಮೂಲ ವೃಂದಾವನ ಪ್ರತಿ ಬಾರಿ ಯೂ ಮುಳುಗುತ್ತದೆ. ಅನೇಕ ಮನೆಗಳಿಗೆ ನೀರು ನುಗ್ಗಿ ಇಲ್ಲಿನ ಜನರು ಅಪಾರ ನಷ್ಟ ಅನುಭವಿಸುವಂತೆ ಆಗುತ್ತದೆ. ಅಲ್ಲದೇ ಅನೇಕ ಸಾವು-ನೋವುಗಳು ಉಂಟಾಗಿವೆ. ಕಾಮಗಾರಿ ಸಂಪೂರ್ಣವಾಗಲು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಕೆಆರ್‌ಡಿಸಿಎಲ್‌ ಅಧಿಕಾರಿಗಳಿಗೆ ಸೂಚಿಸಲು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು
ನಾಗರಿಕರು ಆಗ್ರಹಿಸಿದ್ದಾರೆ.

ಮಳಖೇಡ, ಸಂಗಾವಿ ಹಾಗೂ ಇನ್ನಿತರೆ ಕಾಗಿಣಾ ನದಿ ತಟದ ನಿವಾಸಿಗಳ ಮನೆಗಳಿಗೆ ನದಿ ನೀರು ನುಗ್ಗುತ್ತಿರುವುದರಿಂದ, ಬ್ರಿಡ್ಜ್ ಮುಳುಗಿ ಪ್ರಯಾಣಿಕರಿಗೆ ಅನಾನುಕೂಲ ಆಗುತ್ತಿರುವುದರಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಅಧಿ ಕಾರಿಗಳು ಮತ್ತು ಗುತ್ತಿಗೆದಾರರು ಅವಧಿಯೊಳಗೆ ಮುಗಿಸುವ ಜವಾಬ್ದಾರಿ ವಹಿಸಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ, ಕಾಮಗಾರಿ ಪೂರ್ಣಗೊಳಿಸಲು ಸೂಚಿಸಬೇಕು.
ಕಲ್ಯಾಣಪ್ಪಗೌಡ ಪಾಟೀಲ, ಬಿಜೆಪಿ ಹಿರಿಯ ಮುಖಂಡ, ಮಳಖೇಡ

ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ಪ್ರವಾಹ ಭೀತಿ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರಿಂದ ಕಾಗಿಣಾ ನದಿಯ ಬ್ರಿಡ್ಜ್ ಮುಳುಗಡೆ ಆಗುವ ಭೀತಿಗೊಳಗಾಗಿತ್ತು. ಬ್ರಿಡ್ಜ್ ಕಾಮಗಾರಿ ಪೂರ್ಣ ಮಾಡಿ ಸಮಸ್ಯೆಗೆ ತಿಲಾಂಜಲಿ ಹಾಡಬೇಕಾದ ಅ ಧಿಕಾರಿಗಳು ಕೈಕಟ್ಟಿ ಕುಳಿತ ಪರಿಣಾಮ ಬ್ರಿಡ್ಜ್ ಕಾಮಗಾರಿ  ಪೂರ್ಣಗೊಂಡಿಲ್ಲ.

Advertisement

ಎಸ್ಟಿಮೇಟ್‌ ಪ್ರಕಾರ ಈ ತಿಂಗಳು ಕಾಗಿಣಾ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಇತ್ತೀಚೆಗೆ ನದಿಯಲ್ಲಿ ನೀರಿನ ಮಟ್ಟ ಜಾಸ್ತಿಯಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಸಾಧ್ಯವಾದ ಮಟ್ಟಿಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗಿದೆ.
ಚನ್ನಬಸಪ್ಪ,ಕಾರ್ಯನಿರ್ವಾಹಕ ಅಧಿಕಾರಿ,
ಕೆಆರ್‌ಡಿಸಿಎಲ್‌, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next