Advertisement

ರಸ್ತೆ -ಚರಂಡಿ ಕಾಮಗಾರಿ ಸ್ಥಗಿತ-ಪರದಾಟ

03:24 PM Jan 18, 2020 | Naveen |

ಕಡೂರು: ಪಟ್ಟಣದ ದೇವರಾಜ ಅರಸು ರಸ್ತೆಯ(ಕೆಳ ಸೇತುವೆ ರಸ್ತೆ) ಬಸವೇಶ್ವರ ವೃತ್ತದಿಂದ-ಕನಕ ವೃತ್ತದ ವರೆಗಿನ ಸೇತುವೆ, ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿದ್ದು, ಇದೀಗ ಕೆಲಸ ಸ್ಥಗಿತಗೊಂಡಿದ್ದರಿಂದ ವಾಹನ ಚಾಲಕರು, ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಚರಂಡಿ ನಿರ್ಮಾಣದ ವಿಷಯದಲ್ಲಿ ಗುತ್ತಿಗೆದಾರ, ಪುರಸಭೆ ಮತ್ತು ಇಲಾಖೆ ಮಧ್ಯೆ ಸಾಮರಸ್ಯ ಇಲ್ಲದೇ ಹಲವು ಪ್ರಭಾವಿ ರಾಜಕೀಯ ವ್ಯಕ್ತಿಗಳ ಕಟ್ಟಡ, ನಿವೇಶನಗಳನ್ನು ಉಳಿಸುವ ಹುನ್ನಾರದಿಂದ ಕೆಲಸ ಸ್ಥಗಿತಗೊಂಡಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ.

ದೇವರಾಜು ಅರಸು ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ 80 ಅಡಿ ರಸ್ತೆಗೆ ಜಾಗ ಬಿಟ್ಟು ಚರಂಡಿ ನಿರ್ಮಾಣ ಮಾಡಬೇಕಾಗಿತ್ತು. ಚರಂಡಿ ಕಾಮಗಾರಿ ಆರಂಭಿಸಿದ ಚಿಕ್ಕಮಗಳೂರು ಮೂಲದ ಗುತ್ತಿಗೆದಾರ ಕೆಲವು ಕಡೆ 55, 60 ಮತ್ತೆ ಕೆಲವು ಕಡೆ 80 ಅಡಿಗಳಿಗೆ ಚರಂಡಿ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ರಾಜಕೀಯ ವ್ಯಕ್ತಿಗಳ ನಿವೇಶನ, ಕಟ್ಟಡಗಳ ಮುಂದೆ 80 ಅಡಿ ಮಾಡದೇ 60 ಅಡಿಗಳಿಗೆ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಅವೈಜ್ಞಾನಿಕ ಕಾಮಗಾರಿಯನ್ನು ಕಂಡ ಪುರಸಭೆ ಅಧಿಕಾರಿಗಳು ಗುತ್ತಿಗೆದಾರರಿಗೆ ನೋಟಿಸ್‌ ನೀಡಿದ ಪರಿಣಾಮವಾಗಿ ಕೆಲಸ ಸ್ಥಗಿತಗೊಂಡಿದೆ. ಪುರಸಭೆಯ ಮುಖ್ಯಾಧಿಕಾರಿಗಳು ರಸ್ತೆಯ ಮಧ್ಯ ಭಾಗದಿಂದ 80 ಅಡಿ ಅಳತೆ ಮಾಡಿ ಮಾರ್ಕ್‌ ಮಾಡಿದ್ದು. ಮಾರ್ಕ್‌ ಮಾಡಿರುವ ಪಟ್ಟಿಯಿಂದ ಹೊರಗೆ ಚರಂಡಿ ನಿರ್ಮಾಣ ಮಾಡಬೇಕು. ಇಲ್ಲವಾದರೆ ಕೆಲಸ ನಿಲ್ಲಿಸಬೇಕೆಂಬ ಸೂಚನೆ ಮೇರೆಗೆ ಕೆಲಸ ನಿಂತಿದೆ. ಇದರಿಂದ ನಿತ್ಯ ಓಡಾಡುವ
ವಾಹನದ ಧೂಳಿನಿಂದ ಜನರು ಕಂಗೆಟ್ಟಿದ್ದಾರೆ. ಒಂದೇ ಬದಿಯಲ್ಲಿ ವಾಹನ ಓಡಾಡುವುದರಿಂದ ಟ್ರಾಫಿಕ್‌ ಹೆಚ್ಚಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ರಸ್ತೆಯ ಕಾಮಗಾರಿ ನೋಡಿಕೊಳ್ಳುತ್ತಿದ್ದ ರಾಷ್ಟ್ರೀಯ ಹೆದ್ದಾರಿ
173ರ ಎಇಇ ಸತ್ಯನಾರಾಯಣ ಅವರನ್ನು ಕೂಡಲೇ ವರ್ಗಾವಣೆ
ಮಾಡಿದ್ದು, ಅವರ ಸ್ಥಾನಕ್ಕೆ ಮುನಿರಾಜು ಎಂಬುವರ ನೇಮಕವಾಗಿದೆ. ಇದಕ್ಕೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

Advertisement

ಪಟ್ಟಣದ ಬಸವೇಶ್ವರ ವೃತ್ತದಿಂದ ಚಿಕ್ಕಮಗಳೂರಿನವರೆಗೆ 45 ಕಿ.ಮೀ. ರಸ್ತೆ ಕಾಮಗಾರಿ, ಸೇತುವೆ, ಚರಂಡಿ ನಿರ್ಮಾಣಕ್ಕೆ 204 ಕೋಟಿ ರೂ. ಮಂಜೂರಾಗಿದ್ದು, ಕಡೂರು-ಚಿಕ್ಕಮಗಳೂರು ನಡುವೆ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆಯ ಕಾಮಗಾರಿಯೂ ಇದೇ ಸೇರಿರುತ್ತದೆ. ಬಸವೇಶ್ವರ ವೃತ್ತದಿಂದ ಕನಕ ವೃತ್ತದವರೆಗೆ ನಡೆಯುತ್ತಿದ್ದ ಚರಂಡಿ ಕಾಮಗಾರಿ ಕಳೆದ ಒಂದು ವಾರದಿಂದ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಮಗಾರಿ ಬೇಗ ಆರಂಭಿಸದಿದ್ದರೆ ಸ್ಥಳೀಯ ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗುವುದು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂಬ ಕೂಗು ಕೇಳಿ ಬರುತ್ತಿದೆ.

ಜಿಲ್ಲಾಧಿಕಾರಿಗಳು ಇದೇ ರಸ್ತೆಯಲ್ಲಿ ಹಲವಾರು ಬಾರಿ ಓಡಾಡಿದ್ದು, ಕಾಮಗಾರಿ ಯಾಕೆ ನಿಂತಿದೆ ಎಂಬ ಪ್ರಶ್ನೆಯನ್ನು ಇಲಾಖೆಗೆ ಕೇಳಿದರೆ ಇಲ್ಲಿನ ರಾಜಕೀಯ ಬಣ್ಣ ಬಯಲಾಗುತ್ತದೆ ಎಂದು ನಿವಾಸಿ ಅರುಣ್‌ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ

ಚರಂಡಿ ನಿರ್ಮಾಣ ಕೆಲಸ ಮತ್ತು ರಸ್ತೆ ಮಧ್ಯೆ ಸೇತುವೆ ಕಾಮಗಾರಿ ನಡೆಯುತ್ತಿತ್ತು. ಪುರಸಭೆ ಮುಖ್ಯಾಧಿಕಾರಿಗಳು ರಸ್ತೆ ಮಧ್ಯೆಯಿಂದ 80 ಅಡಿ ಬಿಟ್ಟು ಕಾಮಗಾರಿ ನಡೆಸಬೇಕೆಂದು ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿದೆ. ನಾವು ಇಲಾಖೆ ಕಟ್ಟಡ, ಅಂಗಡಿಗಳನ್ನು ತೆರವುಗೊಳಿಸಿಕೊಟ್ಟರೆ ಕಾಮಗಾರಿ ಮಾಡುತ್ತೇವೆ. ಇಲ್ಲವಾದರೆ ಗುತ್ತಿಗೆದಾರರು ಕೆಲಸ ಮಾಡುವುದಿಲ್ಲ ಎಂಬ ಮಾಹಿತಿ ನೀಡಿದ್ದೆವು.

ಪುರಸಭೆ ಆಡಳಿತ ತೆರವುಗೊಳಿಸಲು ಮುಂದೆ ಬರುತ್ತಿಲ್ಲ. ಕಾಮಗಾರಿ ಸ್ಥಗಿತಗೊಂಡಿದೆ. ನನ್ನನ್ನು ಇದೇ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ.
ಸತ್ಯನಾರಾಯಣ,
ವರ್ಗಾವಣೆಗೊಂಡ ರಾಷ್ಟ್ರೀಯ ಹೆದ್ದಾರಿ 173ರ ಎಇಇ

1964ರಲ್ಲಿ ಆ ರಸ್ತೆಯನ್ನು ಅಂದಿನ ಉಪ ವಿಭಾಗಾಧಿಕಾರಿಗಳು ರಸ್ತೆಯ ಮಧ್ಯಭಾಗದಿಂದ ಎರಡೂ ಕಡೆಗೆ 80 ಅಡಿಯಂತೆ ಭೂ ಸ್ವಾಧೀನ ಮಾಡಿಕೊಂಡು ಅಂದೇ ಪರಿಹಾರ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್‌ ಗಮನಕ್ಕೆ ತಂದು ಸ್ವಾಧೀನ ಮತ್ತು ಪರಿಹಾರ ನೀಡಿರುವ ದಾಖಲೆಗಳನ್ನು ಸಹ ನೀಡಿ 80 ಅಡಿಗಳಿಗೆ ಚರಂಡಿ ನಿರ್ಮಾಣಕ್ಕೆ ಅಳತೆ ಮಾಡಿ ಮಾರ್ಕ್‌ ಮಾಡಲಾಗಿದೆ. ಗುತ್ತಿಗೆದಾರ ಮತ್ತು ಇಂಜಿನಿಯರ್‌ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡುತ್ತಿದ್ದರು. ರಸ್ತೆ ಮಧ್ಯೆದಿಂದ 80 ಅಡಿಗೆ ಚರಂಡಿ ನಿರ್ಮಿಸುವುದಾದರೆ ಕೆಲಸ ಮಾಡಿ ಇಲ್ಲವಾದರೆ ನಿಲ್ಲಿಸಿ ಎಂಬ ಸೂಚನೆ ನೀಡಿರುವುದು ಸತ್ಯ.
. ಮಂಜುನಾಥ್‌,
ಪುರಸಭೆ ಮುಖ್ಯಾಧಿಕಾರಿ

„ಎ.ಜೆ.ಪ್ರಕಾಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next