Advertisement
ಹೊಸಪೇಟೆಯಲ್ಲಿ ಮಾತನಾಡಿದ್ದ ಶಾಸಕ ಗವಿಯಪ್ಪ, ಗ್ಯಾರಂಟಿ ಯೋಜನೆಗಳ ಕಾರಣದಿಂದ ಈಗ ಬಡವರಿಗೆ ಮನೆಗಳನ್ನು ಕೊಡಲು ಕಷ್ಟವಾಗುತ್ತಿದೆ. ಹೀಗಾಗಿ ಶಕ್ತಿ ಸಹಿತ “ಬೇಕಾಗಿಲ್ಲದ’ ಎರಡ್ಮೂರು ಗ್ಯಾರಂಟಿಗಳನ್ನು ರದ್ದು ಮಾಡುವುದರಿಂದ ಅನುದಾನವನ್ನು ಸರಿದೂಗಿಸಿ, ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬಹುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ತೀರ್ಮಾನ ಅವರಿಗೆ ಬಿಟ್ಟದ್ದು ಎಂದಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿರುವ ಶಾಸಕರು, “ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಗ್ಯಾರಂಟಿ ಯೋಜನೆಗಳು ರದ್ದಾಗುವುದಿಲ್ಲ’ ಎಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಬಡ-ಮಧ್ಯಮ ವರ್ಗದ ಜನರಿಗೆ ವರದಾನವಾಗಿವೆ. ಅಲ್ಲದೆ ಕಾಂಗ್ರೆಸ್ ಸರಕಾರದ ಹೆಮ್ಮೆಯ ಯೋಜನೆಗಳಾಗಿವೆ. ಈ ಗ್ಯಾರಂಟಿಗಳಿಂದಲೇ ರಾಜ್ಯದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗವಿಯಪ್ಪ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಜಯನಗರ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದರು.