Advertisement

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

12:40 AM Nov 27, 2024 | Team Udayavani |

ಮೂಡುಬಿದಿರೆ: ಕಂಬಳದಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮ ಎಂದು ಜಿಲ್ಲಾ ಕಂಬಳ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಯಿತು.ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

Advertisement

ತೀರ್ಪುಗಾರರು ನೀಡುವ ತೀರ್ಪಿನ ಬಗ್ಗೆ ಕಂಬಳ ಆಯೋಜಕರು, ಕೋಣಗಳ ಯಜಮಾನರು ಯಾರೂ ಪ್ರಶ್ನಿಸುವಂತಿಲ್ಲ.

ಅಸಮಾಧಾನವಿದ್ದರೆ ಅದನ್ನು ಕಂಬಳ ಸಮಿತಿಯ ಗಮನಕ್ಕೆ ತರಬೇಕೇ ಹೊರತು ತೀರ್ಪುಗಾರರನ್ನಲ್ಲ ಎಂದು ಸೃಷ್ಟ ಪಡಿಸಿದರು.

ಕೇಂದ್ರದ ಮಾನ್ಯತೆಗೆ ಪ್ರಯತ್ನ
ಕಂಬಳಕ್ಕೆ ರಾಜ್ಯ ಸರಕಾರವು ಮಾನ್ಯತೆ ನೀಡಿದೆ ಅದರಂತೆ ಕೇಂದ್ರ ಸರಕಾರದಲ್ಲೂ ಮಾನ್ಯತೆ ಸಿಗಲು ಕಂಬಳ ಸಮಿತಿಯಿಂದ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

ಎಲ್ಲ ಕಂಬಳಗಳಿಗೂ ಅನುದಾನ
ಕಳೆದ ಕಂಬಳ ಋತುವಿನಲ್ಲಿ ರಾಜ್ಯ ಸರಕಾರ ಕಂಬಳಕ್ಕೆ ಅನುದಾನ ನೀಡಿಲ್ಲ. ಈ ಸಲ ಬಜೆಟ್‌ ಮಂಡನೆ ಸಂದರ್ಭದಲ್ಲಿ ಅನುದಾನ ಮೀಸಲಿಡುವಂತೆ ಜಿಲ್ಲೆಯ ಶಾಸಕರು ಆಗ್ರಹಿಸಬೇಕೆಂದು ಮಂಜುನಾಥ ಭಂಡಾರಿ, ಸುನಿಲ್‌ ಕುಮಾರ್‌ ಸಹಿತ ಇತರರ ಬಳಿ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

ಪಿಲಿಕುಳ ಕಂಬಳ ಸರಕಾರವು ಪಿಲಿಕುಳದಲ್ಲಿ ನಡೆಸಬೇಕಾಗಿದ್ದ ಕಂಬಳಕ್ಕೆ ಕರೆಯು ಸಿದ್ಧಗೊಂಡು ದಿನಾಂಕವೂ ನಿಗದಿಯಾಗಿತ್ತು ಆದರೆ ಪ್ರಾಣಿದಯಾ ಸಂಘದವರಿಂದಾಗಿ ತಡೆಯಾಗಿದೆ. ಜಿಲ್ಲಾಧಿಕಾರಿ ಮತ್ತು ಪ್ರಾಧಿಕಾರದವರೂ ನಮ್ಮ ಜತೆಗಿದ್ದಾರೆ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಎಲ್ಲರ ಸಹಕಾರದೊಂದಿಗೆ ಕಂಬಳವನ್ನು ಮಾಡುವ ಯೋಚನೆಯಲ್ಲಿದ್ದೇವೆ ಎಂದರು.

ಸಮಿತಿಯ ಕಾರ್ಯದರ್ಶಿ ಲೋಕೇಶ್‌ ಶೆಟ್ಟಿ ಮುಚ್ಚಾರು, ಗೌರವಾಧ್ಯಕ್ಷ ರೋಹಿತ್‌ ಹೆಗ್ಡೆ ಎರ್ಮಾಳ್‌, ಕಾರ್ಯಧ್ಯಕ್ಷ ಕೆ. ಗುಣಪಾಲ ಕಡಂಬ, ಉಪಾಧ್ಯಕ್ಷ ಎನ್‌. ರಶ್ಮಿತ್‌ ಶೆಟ್ಟಿ, ಉದಯ ಕೋಟ್ಯಾನ್‌, ಕೋಶಾಧಿಕಾರಿ ಏರಿಮಾರ್‌ ಚಂದ್ರಹಾಸ ಸನಿಲ್‌, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್‌ಕಂಗಿನ ಮನೆ, ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡೂ¤ರು, ಕೋಣಗಳ ಯಜಮಾನರಾದ ನಂದಳಿಕೆ ಶ್ರೀಕಾಂತ್‌ ಭಟ್‌ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಪಿಲಿಕುಳ:ವಾರದೊಳಗೆ ಡಿಸಿಗೆ ವರದಿ
ಮಂಗಳೂರು: ಕಾನೂನಾತ್ಮಕ ತೊಡಕು ಎದುರಿಸುತ್ತಿರುವ ಬಹುನಿರೀಕ್ಷಿತ “ಪಿಲಿಕುಳ ಕಂಬಳ’ದ ವಸ್ತುಸ್ಥಿತಿ ಅಧ್ಯಯನಕ್ಕಾಗಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ರಚಿಸಿರುವ ತಜ್ಞರ ಸಮಿತಿಯು ಮಂಗಳವಾರ ಪಿಲಿಕುಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕಂಬಳ ಆಯೋಜನೆಯಿಂದ ಪಿಲಿಕುಳ ಮೃಗಾಲಯದ ಮೇಲೆ ಏನಾದರೂ ಪರಿಣಾಮ ಬೀರಬಹುದೇ? ಜಾನುವಾರುಗಳ ಆರೋಗ್ಯದ ಸುರಕ್ಷೆ ಇತ್ಯಾದಿ ವಿಷಯಗಳ ಬಗ್ಗೆ ಸಮಿತಿ ಪರಾಮರ್ಶೆ ನಡೆಸಿದೆ. ನಾಲ್ವರು ತಜ್ಞರು ಸಿದ್ದಪಡಿಸಿದ ವರದಿ ಮುಂದಿನ 1 ವಾರದೊಳಗೆ ದ.ಕ. ಜಿಲ್ಲಾಧಿಕಾರಿಯವರಿಗೆ ಸಲ್ಲಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next