ಕಡೂರು: ಮನುಷ್ಯನ ದುರಹಂಕಾರದಿಂದ ಮಾನವೀಯ ಮೌಲ್ಯ ಕಳೆದುಕೊಂಡು ದುರಾಸೆಯಿಂದ ಬದುಕುತ್ತಿದ್ದ ಮನುಷ್ಯ ಕೋವಿಡ್ ನಿಂದ ಜೀವನ ಪಾಠ ಕಲಿಯುತ್ತಿದ್ದಾನೆ ಎಂದು ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅಖೀಲ ಭಾರತ ವೀರಶೈವ ಮಹಾಸಭೆ ತಾಲೂಕು ಘಟಕದ ವತಿಯಿಂದ ಕೆ.ಹೊಸಹಳ್ಳಿಯ ಗಂಗಾಂಬಿಕ ಕಲ್ಯಾಣ ಪಟ್ಟಣದ ಪಕ್ಕದಲ್ಲಿ ಶನಿವಾರ ಆಯೋಜಿಸಿದ್ದ ಆಹಾರ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿಶ್ವಕ್ಕೆ ಬಂದಿರುವ ಮಹಾಮಾರಿಯಿಂದ ಇಡೀ ಜಗತ್ತಿನ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಲಾಕ್‌ಡೌನ್‌ನಿಂದ ಅನ್ನ, ಆಹಾರವಿಲ್ಲದೆ ಪರಿತಪಿಸುತ್ತಿದ್ದಾನೆ. ಹಸಿವಿನ ಬೆಲೆ ಗೊತ್ತಾಗುತ್ತಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದಾನೆ. ಅಟ್ಟಹಾಸದಲ್ಲಿ ಮೆರೆಯುತ್ತಿದ್ದವರು ಕೋವಿಡ್ ನಿಂದ ಜೀವನ ಪಾಠ ಕಲಿತಿದ್ದಾರೆ. ತಂದೆ-ತಾಯಿ, ಗುರು-ಹಿರಿಯರೆಂಬ ಭಾವನೆ ಮೂಡುತ್ತಿದೆ. ಭಾವೈಕ್ಯತೆಯಿಂದ ಬದುಕಬೇಕೆಂದು ಹಂಬಲಿಸುತ್ತಿದ್ದಾನೆ. ನಿಜವಾದ ಜೀವನದ ಪಾಠವನ್ನು ನಾವೆಲ್ಲರು ಕೊರೊನಾದಿಂದ ಕಲಿತಂತಾಗಿದೆ. ಇನ್ನಾದರು ಅಂತರ ಕಾಪಾಡಿಕೊಂಡು ಕೋವಿಡ್ ಓಡಿಸೋಣ ಎಂದರು.
ವೀರಶೈವ ಸಮಾಜವು ನೀಡುತ್ತಿರುವ ಆಹಾರ ಕಿಟ್ ಪಡೆದು ಸದುಪಯೋಗ ಪಡಿಸಿಕೊಳ್ಳಿ. ಇದ್ದವರು ಇಲ್ಲದವರಿಗೆ ಸಹಾಯ ಮಾಡಿ ಎಂದರು. ಮಹಾಸಭೆಯ ಜಿಲ್ಲಾಧ್ಯಕ್ಷ ಎಚ್. ಎಂ.ಲೋಕೇಶ್ ಮಾತನಾಡಿ, ಕೊರೊನಾ ವೈರಸ್ ಪ್ರಯುಕ್ತ ಲಾಕ್‌ಡೌನ್ ಮಾಡಿರುವುದರಿಂದ ಕೂಲಿ, ಕಾರ್ಮಿಕರು ಮತ್ತು ಬಡ ಮಧ್ಯಮ ವರ್ಗದ ಜನರು ಕಷ್ಟದಲ್ಲಿದ್ದಾರೆ. ಮಹಾಸಭೆ ವತಿಯಿಂದ ಸಮಾಜದ ಹಾಗೂ ಇತರೆ ಸಮಾಜದ ಬಡವರಿಗೆ ಆಹಾರ ಪದಾರ್ಥ ನೀಡಲಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗುವುದು ಮಹಾಸಭೆಯ ಉದ್ದೇಶ ಎಂದರು.
ಆಹಾರ ಕಿಟ್ ವಿತರಿಸಿದ ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಕೊರೊನಾ ಮಹಾಮಾರಿ ವಿಶ್ವವನ್ನು ಕಂಗೆಡಿಸಿದೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಸಮಾಜದ ಬಡವರಿಗೆ ಸಹಾಯ ಮಾಡುವುದು ಎಲ್ಲರ ಕರ್ತವ್ಯ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರೇಣುಕಾಪ್ರಸಾದ್, ತಾಲೂಕು ಘಟಕದ ಅಧ್ಯಕ್ಷ ಗಂಗಾಧರಯ್ಯ, ಎಚ್.ಸಿ.ರೇವಣಸಿದ್ದಪ್ಪ,ರಾಷ್ಟ್ರೀಯ ಸಮಿತಿ ಸದಸ್ಯೆ ಪಂಕಜ, ಸದಾಶಿವಪ್ಪ, ಎಚ್.ವಿ. ಗಿರೀಶ್, ಹಾಲಾರಾಧ್ಯ, ಮುಂಡ್ರೆ ಗಿರೀಶ್, ಎಚ್.ಎಂ. ಯೋಗೀಶ್, ಲಿಂಗ್ಲಾಪುರದ
ಚಂದ್ರಶೇಖರ್, ಸಾಣೇಹಳ್ಳಿ ಆರಾಧ್ಯ, ಶಿಕ್ಷಕ ಜಿ.ಎಂ.ಯತೀಶ್, ಭಗ್ರೇಶಪ್ಪ, ವಿಶ್ವೇಶ್ವರಯ್ಯ, ಮೆಸ್ಕಾಂ ಮಲ್ಲಿಕಾರ್ಜುನ, ಹುಣಸಘಟ್ಟ ಸನಾತ್‌ಕುಮಾರ್, ಸುಣ್ಣದಹಳ್ಳಿ ಶಶಿಧರ್, ಎಚ್.ಎಲ್.ನವೀನ್ ಮತ್ತು ಸತೀಶ್ ಇದ್ದರು.