Advertisement

ಕಡೆಕಾರು ಪಡುಕರೆ: ಅಪಾಯಕಾರಿ ಮಕ್ಕಳ ಪಾರ್ಕ್‌; ಮುಟ್ಟಿದರೆ ಚುಚ್ಚಲಿದೆ!

06:00 AM Jul 13, 2018 | Team Udayavani |

ಮಲ್ಪೆ: ಕಡೆಕಾರು ಪಡುಕರೆಯ ಕಡಲತೀರದಲ್ಲಿರುವ ಏಕೈಕ ಚಿಣ್ಣರ ನೆಚ್ಚಿನ ತಾಣವಾಗಿ ರೂಪುಗೊಂಡಿದ್ದ ಮಕ್ಕಳ ಪಾರ್ಕ್‌ ಸರಿಯಾದ ನಿರ್ವಹಣೆಯಿಲ್ಲದೆ ಇದೀಗ ನಿರುಪಯುಕ್ತವಾಗಿದ್ದು, ಸಾರ್ವಜನಿಕರ ಜೀವಕ್ಕೆ ಕುತ್ತು ತರುವ ಸ್ಥಿತಿಯಲ್ಲಿದೆ.

Advertisement

ಮುಟ್ಟಿದರೆ ಚುಚ್ಚುತ್ತದೆ
ಕಳೆದ ಮೂರು ವರ್ಷದಿಂದ ಮಕ್ಕಳ ಆಟದ ಪರಿಕರಗಳೆಲ್ಲ ದುಸ್ಥಿತಿಯಲ್ಲಿದೆ. ಜೋಕಾಲಿಗಳು ಅಪಾಯಕಾರಿಯಾಗಿ ನೇತಾಡುತ್ತಿವೆ. ತುಕ್ಕು ಹಿಡಿದ ಜಾರು ಬಂಡಿಗಳು ಅರ್ಧಕ್ಕೆ ತುಂಡಾಗಿ ಮುಟ್ಟಿದರೆ ಚುಚ್ಚಿಕೊಳ್ಳುವಂತಿದೆ. ಉಯ್ನಾಲೆಯ ಕಂಬ, ಪೀಠಗಳು ಮುರಿದಿವೆ. ಕಬ್ಬಿಣದ ಕಂಬಿಗಳು ಕಿತ್ತು ಹೊರಬಂದಿದ್ದು ಮಕ್ಕಳನ್ನು ಘಾಸಿಗೊಳಿಸುವಂತಿವೆ. ಜಾರುಬಂಡಿ ಏರುವ ಏಣಿ ಮುರಿದಿದೆ. ಮಕ್ಕಳು ಮುರಿದ ಪರಿಕರಗಳಲ್ಲೇ ಆಟವಾಡಿದರೆ ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುವ ಸ್ಥಿತಿ ಇದೆ.

7 ವರ್ಷದ ಹಿಂದೆ ಸ್ಥಾಪನೆ
7 ವರ್ಷಗಳ ಹಿಂದೆ ಅಂದಿನ ಜಿ.ಪಂ. ಸದಸ್ಯರಾಗಿದ್ದ ದಿವಾಕರ ಕುಂದರ್‌ ಅವರ ಮುತುವರ್ಜಿಯಿಂದ ಜಿ.ಪಂ. ಅನುದಾನದಲ್ಲಿ ಇಲ್ಲಿನ ಕಡೆಕಾರು ಯುವಕ ಮಂಡಲದ ವೇದಿಕೆಯ ಬಳಿ ನಿರ್ಮಾಣಗೊಳಿಸಲಾಗಿತ್ತು. ಉಯ್ನಾಲೆ, ಜಾರುಬಂಡಿ, ತಿರುಗು ಬಂಡಿ, ಸಹಿತ ವಿವಿಧ ಬಗೆಯ ಆಟಿಕೆಗಳಿಂದಾಗಿ ಸಂಜೆ ವೇಳೆ ಈ ಪರಿಸರದ ಮಕ್ಕಳನ್ನು ಈ ಉದ್ಯಾನವನ ಆಕರ್ಷಿಸಿತ್ತು.

ಇದೀಗ ಮುರಿದ ಹಾಗೂ ಶಿಥಿಲಾವಸ್ಥೆಯಲ್ಲಿನ ಪರಿಕರಗಳನ್ನು ಇನ್ನೂ ದುರಸ್ತಿ ಮಾಡಿಲ್ಲ. ನಿರ್ವಹಣೆ ಮಾಡಬೇಕಾಗಿದ್ದ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿರುವ ಕಾರಣ ಸಮಸ್ಯೆ ಉಲ್ಬಣಗೊಂಡಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗರಿಕರು ಆರೋಪಿಸಿದ್ದಾರೆ.

ಆಟಿಕೆ ಸರಿಪಡಿಸಬೇಕು
ಪಡುಕರೆಯ ಏಕಮಾತ್ರ ಬಾಲವನವನ್ನು ಸಂಪೂರ್ಣ ದುರಸ್ಥಿಗೊಳಿಸಿ, ಮಕ್ಕಳ ಮನರಂಜನೆಯ ಆಟಿಕೆ ಸಾಮಾನುಗಳನ್ನು ಸರಿಪಡಿಸಬೇಕು. ಜಿ.ಪಂ. ಸದಸ್ಯರ ಗಮನಕ್ಕೆ ತಂದು ಅನುದಾನವನ್ನು ಮೀಸಲಿರಿಸಿ ದುರಸ್ಥಿ ಪಡಿಸುವಂತೆ ಪಡುಕರೆ ಯುವಕ ಮಂಡಲದ ಮೂಲಕ ಮನವಿಯನ್ನು ಮಾಡಲಾಗಿದೆ. ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನು ಮಾಡಿ ಮಕ್ಕಳಿಗೆ ಉಪಯೋಗವಾಗುವಂತೆ ಮಾಡಬೇಕಾಗಿದೆ.
– ಸುರೇಶ್‌ ಮೆಂಡನ್‌,  ಅಧ್ಯಕ್ಷರು ಪಡುಕರೆ 
ಯುವಕ ಮಂಡಲ

Advertisement
Advertisement

Udayavani is now on Telegram. Click here to join our channel and stay updated with the latest news.

Next