ಕಡಬ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜನ ವಿರೋಧಿ ಆಡಳಿತ, ದಿನಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿನ ವೈಫಲ್ಯವನ್ನು ವಿರೋಧಿಸಿ ಕಡಬ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ರವಿವಾರ ಕಡಬ ಪೇಟೆಯಲ್ಲಿ ಪ್ರತಿಭಟನ ಸಭೆ ಜರಗಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತ ನಾಡಿದ ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಸುಳ್ಯ ಅವರು, ಕೇಂದ್ರ ಆರೋಗ್ಯ ಸಚಿವೆ ಅನುಪ್ರಿಯಾ ಪಟೇಲ್ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಹೇಳಿಕೆ ನೀಡಿದ್ದಾರೆ. ಅದರನ್ವಯ ಅಡಿಕೆ, ಸುಪಾರಿ ಉತ್ಪನ್ನಗಳನ್ನು ನಿಷೇಧಿಸಲು ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಈ ವಿಚಾರವನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ್ಯ ಅಮಿತ್ ಶಾ ಅವರೆದುರು ಪಕ್ಷಭೇದ ಮರೆತು ನಾವೆಲ್ಲರೂ ಪ್ರಶ್ನಿಸಬೇಕಾಗಿದೆ ಎಂದರು.
ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಕೆಪಿಸಿಸಿ ಸದಸ್ಯ ಡಾ| ರಘು ಬೆಳ್ಳಿಪ್ಪಾಡಿ, ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ್ಯ ದಿವಾಕರ ಗೌಡ ಮೊದಲಾದವರು ಮಾತನಾಡಿದರು. ಪ್ರತಿಭಟನೆಯ ವೇಳೆ ಪಕೋಡಾ ತಯಾರಿಸಿ ಮಾರಾಟ ಮಾಡುವ ಮೂಲಕ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಅಣಕಿಸಲಾಯಿತು.
ಡಿಸಿಸಿ ಉಪಾಧ್ಯಕ್ಷ ವಿಜಯಕುಮಾರ್ ರೈ ಕರ್ಮಾಯಿ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ಇಲ್ಯಾಸ್ ಹೊಸ್ಮಠ, ಕಾರ್ಯದರ್ಶಿ ಸೈಮನ್ ಸಿ.ಜೆ., ಯುವ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ಜಿಲ್ಲಾ ಪ್ರ.ಕಾರ್ಯದರ್ಶಿ ಶರೀಫ್ ಕಂಠಿ, ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ, ಕೆ.ಟಿ. ವಲ್ಸಮ್ಮ, ಉಷಾ ಆಂಚನ್, ಮಹಿಳಾ ಕಾಂಗ್ರೆಸ್‌ನ ಜಿಲ್ಲಾ ಪ್ರ. ಕಾರ್ಯದರ್ಶಿ ಉಷಾ ಜೋಯಿ, ಡಿಸಿಸಿ ಸದಸ್ಯರಾದ ನೀಲಾವತಿ ಶಿವರಾಮ್, ಶರೀಫ್ ಎ.ಎಸ್., ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ದಿನೇಶ್, ಉಪಾಧ್ಯಕ್ಷೆ ಮೇಫಿ ಚೆರಿಯನ್, ಕಡಬ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ಡೇನಿಸ್ ಫೆರ್ನಾಂಡಿಸ್, ರಾಮಕೃಷ್ಣ ಹೊಳ್ಳಾರು, ಪ್ರಮುಖರಾದ ಕ್ಸೇವಿಯರ್ ಬೇಬಿ, ಶಿವಣ್ಣ ಗೌಡ ಇಡ್ಯಾಡಿ, ಎಚ್.ಆದಂ, ಸುಧೀರ್‌ಕುಮಾರ್ ಶೆಟ್ಟಿ ಬಿಳಿನೆಲೆ, ಶಾಲಿನಿ ಸತೀಶ್ ನಾೖಕ್, ಸುಧೀರ್ ದೇವಾಡಿಗ ಉಪಸ್ಥಿತರಿದ್ದರು.
ಸರಕಾರ ವಿಫಲ
ಕಾಂಗ್ರೆಸ್‌ನ ಸುಳ್ಯ ವಿಧಾನಸಭಾ ಕ್ಷೇತ್ರದ ಉಸ್ತವಾರಿ ಸವಿತಾ ರಮೇಶ್ ಮಾತನಾಡಿ, ಕೋಟ್ಯಂತರ ಉದ್ಯೋಗ ಸೃಷ್ಟಿ, ಕಪ್ಪು ಹಣವನ್ನು ಬಯಲಿಗೆಳೆದು ಪ್ರತಿ ಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದು ಸಹಿತ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇದೀಗ ಪಕೋಡಾ ಮಾರಾಟ ಮಾಡುವಂತೆ ಯುವಕರಿಗೆ ಬೇಜವಾಬ್ದಾರಿಯ ಕರೆ ನೀಡಿದ್ದಾರೆ. ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಗಗನಕ್ಕೇರುತ್ತಿದ್ದು, ಬೆಲೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರವು ವಿಫಲವಾಗಿದೆ ಎಂದು ದೂರಿದರು.