Advertisement

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

10:18 PM Jan 07, 2025 | Team Udayavani |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಶೇ. 60ರಷ್ಟು ಕಮಿಷನ್​ ನಡೆಯುತ್ತಿದೆ ಎನ್ನುವುದು ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ, ದಾಖಲೆ ಸಹಿತ ಆರೋಪ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ತಿರುಗೇಟಿಗೆ ಕಮಿಷನ್‌ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.

Advertisement

ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ತುಣುಕುಗಳನ್ನು ಟ್ಯಾಗ್‌ ಮಾಡಿ ಎಕ್ಸ್‌ ಖಾತೆಯಲ್ಲಿ ವಾಗ್ಧಾಳಿ ನಡೆಸಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಇಲ್ಲಿದೆ ನೋಡಿ ನಿಮ್ಮ ಲೂಟಿ ಸಾಕ್ಷಿಗುಡ್ಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಖಲೆ ಕೊಡಿ.. ದಾಖಲೆ ಕೊಡಿ ಎನ್ನುತ್ತಿದ್ದೀರಿ.. ಇಲ್ನೋಡಿ ಸನ್ಮಾನ್ಯ ಸಿದ್ದರಾಮಯ್ಯನವರೇ.. ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ. ಪತ್ರಿಕೆಯವರೇ ನಿಮ್ಮ ಸಾಕ್ಷಿಗುಡ್ಡೆಯ ಸಾಕ್ಷಾತ್ಕಾರ ಮಾಡಿಸಿದ್ದಾರೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನೆ ಮಾಡಿದ್ದಾರೆ.

ಚೆಂಬು ಹಾಕಿ ಹಂಡೆ ಹೊಡೆದರು ಎನ್ನುವಂತೆ ಗ್ಯಾರಂಟಿ ಹೆಸರಿನಲ್ಲಿ ಬಿಡಿಗಾಸು ಕೊಟ್ಟು ಕೋಟಿ ಕೋಟಿ ಲೂಟಿ ಮಾಡುತ್ತಿದ್ದೀರಿ. ಜಲ ಸಂಪನ್ಮೂಲ ಇಲಾಖೆ: 14,600 ಕೋಟಿ, ಲೋಕೋಪಯೋಗಿ ಇಲಾಖೆ: 10,000 ಕೋಟಿ, ಗ್ರಾಮೀಣಾಭಿವೃದ್ಧಿ -ಪಂಚಾಯತ್‌ ರಾಜ್‌: 3,100 ಕೋಟಿ, ಸಣ್ಣ ನೀರಾವರಿ: 2,800 ಕೋಟಿ, ಇತರೆ ಇಲಾಖೆ: 1,500 ಕೋಟಿ ಸೇರಿ ಒಟ್ಟು 32,000 ಕೋಟಿ ರೂ. ಗುತ್ತಿಗೆದಾರರ ಬಿಲ್‌ಗ‌ಳು ಬಾಕಿ ಇವೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್‌ ಕರಿನೆರಳು ಕೂಡ ಬಿದ್ದಿದೆ. ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ.

ಭಂಡತನ ಏಕೆ? ಆಗಿರುವ ತಪ್ಪು ಸರಿಪಡಿಸಿಕೊಳ್ಳಿ. ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಗುತ್ತಿಗೆದಾರರ ಬಾಕಿ ಪಾವತಿಗಿಂತ ನನ್ನನ್ನು ಟಾರ್ಗೆಟ್‌ ಮಾಡುವುದು ಮುಖ್ಯವಲ್ಲ ಎಂದು ಸಿಎಂ ಮತ್ತು ಸಚಿವರಿಗೆ ಕೇಂದ್ರ ಸಚಿವರು ಕಿವಿಮಾತು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next