ಆರ್.ಚಂದ್ರು ನಿರ್ಮಾಣ, ನಿರ್ದೇಶನದ “ಕಬ್ಜ’ ಚಿತ್ರ ಮಾರ್ಚ್ 17ರಂದು ತೆರೆಕಾಣಲಿದೆ. ಉಪೇಂದ್ರ ನಾಯಕರಾಗಿರುವ ಹಾಗೂ ಸುದೀಪ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಕಬ್ಜ’ ಪ್ಯಾನ್ ಇಂಡಿಯಾ ಚಿತ್ರ.
ಇತ್ತೀಚೆಗೆ ಐಎಂಡಿಬಿ ಬಿಡುಗಡೆಗೊಳಿಸಿದ 2023ರ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡ ಚಿತ್ರ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆ ಯಾಗುತ್ತಿದೆ. ಮೊದಲ ಹಂತವಾಗಿ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇಂದು ಅದ್ಧೂರಿಯಾಗಿ ನಡೆಯುತ್ತಿದೆ.
ಶಿಡ್ಲಘಟ್ಟದ ಜೂನಿಯರ್ ಕಾಲೇಜು ನೆಹರು ಮೈದಾನದಲ್ಲಿ ಕಲರ್‌ಫುಲ್ ಕಾರ್ಯಕ್ರಮದ ಮೂಲಕ ಹಾಡು ಬಿಡುಗಡೆಯಾಗಲಿದೆ. ಶಿವರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು, ನಿರ್ದೇಶಕ ಆರ್.ಚಂದ್ರು “ಕಬ್ಜ’ ಚಿತ್ರದಲ್ಲಿ ಏನು ಮಾಡಿರಬಹುದು ಎಂಬ ಕುತೂಹಲ ಅನೇಕರಲ್ಲಿತ್ತು. ಅದಕ್ಕೆ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಉತ್ತರ ನೀಡಿದೆ. ಚಂದ್ರು ತಮ್ಮ ದೊಡ್ಡ ಕನಸನ್ನು ಅಷ್ಟೇ ದೊಡ್ಡದಾಗಿ ತೆರೆಮೇಲೆ ತರುತ್ತಿರುವುದಕ್ಕೆ ಸಾಕ್ಷಿಯಾಗಿ ಟೀಸರ್ ಮೂಡಿಬಂದಿದೆ. ಒಂದು ಗ್ಯಾಂಗ್‌ಸ್ಟಾರ್ ಕಥೆಯನ್ನು ಪಕ್ಕಾ ರಗಡ್ ಆಗಿ ಹೇಳಲು ಏನೆಲ್ಲಾ ಅಂಶಗಳನ್ನು ಒಟ್ಟು ಮಾಡಬೇಕೋ, ಅವೆಲ್ಲವನ್ನು ಒಟ್ಟು ಸೇರಿಸಿ, “ಕಬ್ಜ’ ಎಂಬ ಒಂದು ಹೊಸ ಪ್ರಪಂಚವನ್ನು ಚಂದ್ರು ಸೃಷ್ಟಿ ಮಾಡಿರೋದು ಎದ್ದು ಕಾಣುತ್ತದೆ.
ಔಟ್ ಅಂಡ್ ಔಟ್ ಆ್ಯಕ್ಷನ್‌ನೊಂದಿಗೆ ಬಂದಿರುವ ಟೀಸರ್‌ನಲ್ಲಿ ಗನ್ ಸದ್ದಿನ ಜೊತೆಗೆ ರಕ್ತಸಿಕ್ತ ಅಧ್ಯಾಯವೂ ತೆರೆದುಕೊಳ್ಳುತ್ತದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್ ಸಖತ್ ಸ್ಟೈಲಿಶ್ ಹಾಗೂ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರವಿ ಬಸ್ರೂರು ರೀರೆಕಾರ್ಡಿಂಗ್, ಎ.ಜೆ.ಶೆಟ್ಟಿ ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ ಕೂಡಾ ಗಮನ ಸೆಳೆಯುತ್ತಿದೆ.ಈಗಾಗಲೇ ಬೇರೆ ಬೇರೆ ಭಾಷೆಗಳಿಂದ ದೊಡ್ಡ ದೊಡ್ಡ ವಿತರಣಾ ಸಂಸ್ಥೆಗಳು ಸಿನಿಮಾ ಬಿಡುಗಡೆ ಮಾಡಲು ಮುಂದೆ ಬಂದಿವೆ.