ತಿರುವನಂತಪುರಂ: ಮಿಝೊರಾಂ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿರುವ ಕುಮ್ಮನಂ ರಾಜಶೇಖರನ್ ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಶಶಿ ತರೂರ್ ವಿರುದ್ಧ ಕಣಕ್ಕಿಳಿಸುವ ಸಲುವಾಗಿ ರಾಜಶೇಖರನ್ ಅವರನ್ನು ರಾಜ್ಯಕ್ಕೆ ಮರಳಿ ಕಳುಹಿಸಬೇಕು ಎಂದು ಕೇರಳ ಬಿಜೆಪಿ ಘಟಕ ಬಿಜೆಪಿ ವರಿಷ್ಠ ನಾಯಕರಿಗೆ ಮನವಿ ಮಾಡಿತ್ತು. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ ರಾಜೀನಾಮೆ ಅಂಗೀಕೃತಗೊಂಡಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
Related Articles
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಅವರು, ಇದು ವೈಯಕ್ತಿಕ ಸ್ಪರ್ಧೆಯಂತೆ ಕಾಣುತ್ತಿಲ್ಲ ಬದಲಾಗಿ ಪಕ್ಷದ ವಿರುದ್ಧ ದ ಹೋರಾಟವಾಗಿದೆ ಎಂದಿದ್ದಾರೆ.
ಆರ್‌ಎಸ್‌ಎಸ್‌ನೊಂದಿಗೆ ಬಲವಾದ ನಂಟು ಹೊಂದಿರುವ ರಾಜಶೇಖರನ್ ಅವರು ಕೇರಳ ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇದೀಗ ತಿರುವನಂತಪುರಂನಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ.
2014 ರ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಕೇಂದ್ರ ಸಚಿವ ಓ ರಾಜಗೋಪಾಲ್ ಅವರ ವಿರುದ್ಧ ಶಶಿ ತರೂರ್ ಅವರು 15,470 ಮತಗಳಿಂದ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ತಿರುವನಂತಪುರ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಗೊಳ್ಳಲಿದೆಯೆ ಎನ್ನುವ ಕುತೂಹಲ ಮೂಡಿದೆ.