Advertisement
ಲಕ್ನೋಗೆ ಇದು 2ನೇ ಪಂದ್ಯ. ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಾದ ಮೊದಲ ಮುಖಾಮುಖೀ ಯಲ್ಲಿ ಲಕ್ನೋ 20 ರನ್ನುಗಳ ಸೋಲನು ಭವಿಸಿತ್ತು. ಇನ್ನೊಂದೆಡೆ ಪಂಜಾಬ್ 2 ಪಂದ್ಯಗಳಲ್ಲಿ ಒಂದನ್ನು ಗೆದ್ದು ಇನ್ನೊಂದರಲ್ಲಿ ಎಡವಿದೆ.
ಲಕ್ನೋದ ಸದ್ಯದ ಸಮಸ್ಯೆ ವೇಗದ ಬೌಲಿಂಗ್ ವಿಭಾಗದ್ದು. ಮಾರ್ಕ್ ವುಡ್ ಮತ್ತು ಡೇವಿಡ್ ವಿಲ್ಲಿ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ಯಶ್ ಠಾಕೂರ್ ಅವರ ಮೇಲೆ ಭಾರೀ ಒತ್ತಡ ಬಿದ್ದಿದೆ. ರಾಜಸ್ಥಾನ್ ವಿರುದ್ಧ ಕೃಣಾಲ್ ಪಾಂಡ್ಯ ಹೊರತುಪಡಿಸಿ ಉಳಿದವರೆಲ್ಲ ದುಬಾರಿಯಾಗಿದ್ದರು. ಟಿ20 ವಿಶ್ವಕಪ್ ಪಂದ್ಯಾವಳಿಗೆ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಲೆಗ್‌ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ತೀರಾ ಸಾಮಾನ್ಯವಾಗಿ ಗೋಚರಿಸಿದ್ದರು. ಆದರೆ ಈ ಪಂದ್ಯ ಲಕ್ನೋ ಪಾಲಿಗೆ ತವರಿನ ಪಂದ್ಯವಾಗಿರುವುದರಿಂದ ಹಾಗೂ ಪ್ರಸಕ್ತ ಕೂಟದಲ್ಲಿ ತವರಿನ ತಂಡಗಳೇ ಮೇಲುಗೈ ಸಾಧಿಸುತ್ತಿರುವುದರಿಂದ ಲಕ್ನೋಗೆ ಲಕ್ ಒಲಿದೀತೆಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ರಾಜಸ್ಥಾನ್ ವಿರುದ್ಧದ ಚೇಸಿಂಗ್ ವೇಳೆ 194 ಗಳಿಸಬೇಕಾದ ಕಠಿನ ಸವಾಲು ಲಕ್ನೋಗೆ ಎದುರಾಗಿತ್ತು. ಮಿಂಚಿದವರು ಕೆ.ಎಲ್. ರಾಹುಲ್ ಮತ್ತು ನಿಕೋಲಸ್ ಪೂರಣ್ ಮಾತ್ರ. ಉಳಿದಂತೆ ಕ್ವಿಂಟನ್ ಡಿ ಕಾಕ್, ದೇವದತ್ತ ಪಡಿಕ್ಕಲ್, ಆಯುಷ್ ಬದೋನಿ, ಮಾರ್ಕಸ್ ಸ್ಟೋಯಿನಿಸ್ ಸಂಪೂರ್ಣ ವಿಫಲರಾಗಿದ್ದರು. ಈ ನಾಲ್ವರು ಸೇರಿ ಗಳಿಸಿದ್ದು ಎಂಟೇ ರನ್. ಪಡಿಕ್ಕಲ್ ಖಾತೆಯನ್ನೇ ತೆರೆದಿರಲಿಲ್ಲ. ದೀಪಕ್ ಹೂಡಾ ಸಿಡಿದು ನಿಂತರೂ ಇನ್ನಿಂಗ್ಸ್ ವಿಸ್ತರಿಸಲು ವಿಫಲರಾದರು. ಕಮ್‌ಬ್ಯಾಕ್ ಪಂದ್ಯದಲ್ಲಿ ರಾಹುಲ್ 58 ರನ್ ಬಾರಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ತಂಡದ ಆತ್ಮವಿಶ್ವಾಸವೂ ಹೆಚ್ಚಬೇಕಿದೆ.
Related Articles
ಪಂಜಾಬ್ ಮಿಶ್ರ ಫಲ ಅನುಭವಿಸಿದ ತಂಡ. ಚಂಡೀಗಢದ ನೂತನ ಮುಲ್ಲಾನ್‌ಪುರ್ ಸ್ಟೇಡಿಯಂನಲ್ಲಿ ಡೆಲ್ಲಿಯನ್ನು 4 ವಿಕೆಟ್‌ಗಳಿಂದ ಮಣಿಸಿತು. ಆದರೆ ಆರ್‌ಸಿಬಿ ವಿರುದ್ಧದ ಬೆಂಗಳೂರು ಪಂದ್ಯವನ್ನು 4 ವಿಕೆಟ್‌ಗಳಿಂದ ಕಳೆದುಕೊಂಡಿತು.
Advertisement
ಪಂಜಾಬ್ ಪವರ್ ಪ್ಲೇಯಲ್ಲಿ ರನ್ ಗಳಿಸಲು ಪರದಾಡುತ್ತಿದೆ. ಜಾನಿ ಬೇರ್‌ಸ್ಟೊ ಅವರ ವೈಫಲ್ಯ ಇದಕ್ಕೆ ಮುಖ್ಯ ಕಾರಣ. ಧವನ್ ತಮ್ಮ ಸ್ಟ್ರೈಕ್‌ರೇಟ್ ಹೆಚ್ಚಿಕೊಳ್ಳುತ್ತಿರುವ ಹೊತ್ತಿನಲ್ಲಿ ಉಳಿದವರು ಹಿನ್ನಡೆ ಕಾಣುತ್ತಿದ್ದಾರೆ. ಪ್ರಭ್‌ಸಿಮ್ರಾನ್ ಸಿಂಗ್ ಕಳೆದ ಋತುವಿನ ಫಾರ್ಮ್ ಕಂಡುಕೊಂಡಿಲ್ಲ. ಉಪನಾಯಕ ಜಿತೇಶ್ ಶರ್ಮ ಕೂಡ ಜಬರ್ದಸ್ತ್ ಪ್ರದರ್ಶನ ನೀಡಬೇಕಿದೆ.
ಪಂಜಾಬ್ ತಂಡದ ಆಶಾಕಿರಣವಾಗಿ ರುವವರು ಆಲ್‌ರೌಂಡರ್ ಸ್ಯಾಮ್ ಕರನ್. ಎರಡೂ ಪಂದ್ಯಗಳಲ್ಲಿ ಇವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದಾರೆ. ಡೆಲ್ಲಿ ವಿರುದ್ಧದ ಜಯದಲ್ಲಿ ಕರನ್ ಕೊಡುಗೆ ಮಹತ್ವದಾಗಿತ್ತು.
ಪಂಜಾಬ್ ಬೌಲಿಂಗ್ ವಿಭಾಗ ಒಟ್ಟಾರೆಯಾಗಿ ಸುಧಾರಣೆ ಕಾಣಬೇಕಿದೆ. ರಬಾಡ, ಕರನ್, ಅರ್ಷದೀಪ್, ಹರ್ಷಲ್ ಪಟೇಲ್, ಹರ್‌ಪ್ರೀತ್ ಬ್ರಾರ್ ಲಕ್ನೋ ಟ್ರ್ಯಾಕ್‌ನಲ್ಲಿ ಎಂಥ ಮ್ಯಾಜಿಕ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.
ಸಂಭಾವ್ಯ ತಂಡಗಳು
ಲಕ್ನೋ: ಕೆ.ಎಲ್. ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ದೇವದತ್ತ ಪಡಿಕ್ಕಲ್, ನಿಕೋಲಸ್ ಪೂರಣ್, ಕೃಣಾಲ್ ಪಾಂಡ್ಯ, ಮಾರ್ಕಸ್ ಸ್ಟೋಯಿನಿಸ್, ದೀಪಕ್ ಹೂಡಾ, ರವಿ ಬಿಷ್ಣೋಯಿ, ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ಯಶ್ ಠಾಕೂರ್.ಪಂಜಾಬ್: ಶಿಖರ್ ಧವನ್ (ನಾಯಕ), ಜಾನಿ ಬೇರ್‌ಸ್ಟೊ, ಸ್ಯಾಮ್ ಕರನ್, ಲಿಯಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಾಗಿಸೊ ರಬಾಡ, ರಾಹುಲ್ ಚಹರ್, ಅರ್ಷದೀಪ್ ಸಿಂಗ್. ಪಿಚ್ ರಿಪೋರ್ಟ್
ಇದು ಏಕಾನಾ ಸ್ಟೇಡಿಯಂನಲ್ಲಿ ನಡೆಯುವ ಈ ಋತುವಿನ ಮೊದಲ ಪಂದ್ಯ. ಇಲ್ಲಿ 2 ರೀತಿಯ ಪಿಚ್‌ಗಳಿಗೆ. ಒಂದು ಬ್ಯಾಟರ್‌ಗಳಿಗೆ, ಇನ್ನೊಂದು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಸ್ಪಿನ್ ಟ್ರ್ಯಾಕ್‌ನಲ್ಲಿ ಚೇಸಿಂಗ್ ಕಷ್ಟ. ಶನಿವಾರದ ಪಂದ್ಯ ಬ್ಯಾಟಿಂಗ್ ಟ್ರ್ಯಾಕ್‌ನಲ್ಲೇ ನಡೆಯುವ ಸಾಧ್ಯತೆ ಹೆಚ್ಚು.