ಮ್ಯಾಡ್ರಿಡ್ (ಸ್ಪೇನ್): ವಿಶ್ವದ ನಂ. 6 ಆಟಗಾರ, ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಎರಡನೇ ಬಾರಿಗೆ ಮ್ಯಾಡ್ರಿಡ್ ಓಪನ್ ಟೆನಿಸ್ ಕಿರೀಟ ಏರಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ ಅವರು ಇಟಲಿಯ ಮ್ಯಾಟೊ ಬೆರೆಟಿನಿ ವಿರುದ್ಧ 6-7 (8-10), 6-4, 6-3 ಅಂತರದ ಜಯ ಸಾಧಿಸಿದರು. ಇದು ಜ್ವೆರೇವ್ ಗೆದ್ದ 4ನೇ ಮಾಸ್ಟರ್ 1000 ಪ್ರಶಸ್ತಿ.
ಫೈನಲ್ ಹಾದಿಯಲ್ಲಿ ಕ್ಲೇ ಕೋರ್ಟ್ ಸ್ಪೆಷಲಿಸ್ಟ್‌ಗಳಾದ ರಫೆಲ್ ನಡಾಲ್, ಡೊಮಿನಿಕ್ ಥೀಮ್ ಅವರನ್ನು ಹಿಮ್ಮೆಟ್ಟಿಸಿದ್ದ ಜ್ವೆರೇವ್ ನೆಚ್ಚಿನ ಆಟಗಾರನಾಗಿ ಗೋಚರಿಸಿದ್ದರು. ಮೊದಲೆರಡು ಸೆಟ್‌ಗಳಲ್ಲಿ ಬೆರೆಟಿನಿ ಉತ್ತಮ ಹೋರಾಟ ಸಂಘಟಿಸಿದರು.
ಆರಂಭಿಕ ಸೆಟ್ ಅನ್ನು ಜ್ವೆರೇವ್ ಟೈ- ಬ್ರೇಕರ್‌ನಲ್ಲಿ ಕಳೆದುಕೊಂಡರು. ಇನ್ನಷ್ಟು ಪ್ರಯತ್ನಪಟ್ಟದ್ದಿದ್ದರೆ ಬೆರೆಟಿನಿ ದ್ವಿತೀಯ ಸೆಟ್ ಕೂಡ ವಶಪಡಿಸಿ ಕೊಳ್ಳಬಹುದಿತ್ತು. ಆದರೆ ಇಲ್ಲಿ ಜ್ವೆರೇವ್ ಜಬರ್ದಸ್ತ್ ಪ್ರದರ್ಶನವಿತ್ತರು.
ಇದನ್ನೂ ಓದಿ :ಇಂಗ್ಲೆಂಡ್ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್ ಭವಿಷ್ಯ
2018ರಲ್ಲಿ ಡೊಮಿನಿಕ್ ಥೀಮ್ ಅವರನ್ನು ಮಣಿಸುವ ಮೂಲಕ ಜ್ವೆರೇವ್ ಮೊದಲ ಸಲ ಮ್ಯಾಡ್ರಿಡ್ ಓಪನ್ ಚಾಂಪಿಯನ್ ಎನಿಸಿದ್ದರು.
ಈ ಗೆಲುವು ಮುಂಬರುವ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗೆ ಹೊಸ ಸ್ಫೂರ್ತಿ ತುಂಬಿದೆ ಎಂಬುದಾಗಿ ಜ್ವೆರೇವ್ ಹೇಳಿದ್ದಾರೆ. ಇದಕ್ಕೂ ಮೊದಲು ರೋಮ್ ಪಂದ್ಯಾವಳಿ ನಡೆ ಯಲಿದ್ದು, ಇದರಲ್ಲಿಯೂ ಜ್ವೆರೇವ್ ಪಾಲ್ಗೊಳ್ಳಲಿದ್ದಾರೆ.