ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ನಂತರ ಕೋಚ್ ಗೌತಮ್ ಗಂಭೀರ್ ಅವರ ಕಟುವಾದ ಹೇಳಿಕೆಗಳ ವಿಚಾರದ ಕುರಿತು ತೀವ್ರ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಶ್ರೀವತ್ಸ ಗೋಸ್ವಾಮಿ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಡ್ರೆಸ್ಸಿಂಗ್ ರೂಮ್ ಸಂಭಾಷಣೆಗಳು ಪವಿತ್ರ ಮತ್ತು ಗೌಪ್ಯವಾಗಿರಬೇಕು ಎಂದು ಇರ್ಫಾನ್ ಪಠಾಣ್ ಒತ್ತಿ ಹೇಳಿದ್ದು, ಗೋಸ್ವಾಮಿ ಉಲ್ಲಂಘನೆಯನ್ನು ಖಂಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ವರದಿಯ ಪ್ರಕಾರ, ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ 184 ರನ್ಗಳ ಸೋಲಿನ ನಂತರ ಗೌತಮ್ ಗಂಭೀರ್ ತಂಡದ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಪರಿಸ್ಥಿತಿಯ ಅಗತ್ಯತೆಗಳಿಗಿಂತ ತಮ್ಮ ಸಹಜ ಆಟಕ್ಕೆ ಆದ್ಯತೆ ನೀಡುವುದಕ್ಕಾಗಿ ಆಟಗಾರರನ್ನು ಟೀಕಿಸಿದ್ದರು.
ಯಾವುದೇ ಆಟಗಾರರನ್ನು ಹೆಸರಿಸದೆ, ಹೊಂದಾಣಿಕೆಯ ಕೊರತೆಯ ಬಗ್ಗೆ ಗಂಭೀರ್ ನಿರಾಶೆಯನ್ನು ವ್ಯಕ್ತಪಡಿಸಿದ್ದರು, ಈ ವಿಧಾನವು ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಎಂದಿದ್ದರು.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-2 ಹಿನ್ನಡೆಯಲ್ಲಿರುವಾಗ ಡ್ರೆಸ್ಸಿಂಗ್ ರೂಮ್ ವಿಚಾರ ಸೋರಿಕೆಯಾಗಿದ್ದು, ಒಂದು ಟೆಸ್ಟ್ ಬಾಕಿ ಉಳಿದಿದ್ದು ಭಾರತ ತಂಡಕ್ಕೆ ಸರಣಿ ಸಮಬಲ ಮಾಡುವ ಅವಕಾಶವಿದೆ. ಜನವರಿ 3 ರಂದು ಸಿಡ್ನಿಯಲ್ಲಿ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದೆ.