ನಾನು ಹೊಸ ಕಂಪನಿಗೆ ಸೇರಿದ್ದು ಮಾರ್ಚ್ ಮೊದಲ ವಾರದಲ್ಲಿ. ಸೇರಿದ ಹತ್ತನೇ ದಿನಕ್ಕೇ ಕಂಪನಿಯವರು ವರ್ಕ್ ಫ್ರಮ್ ಹೋಂ ಘೋಷಿಸಿದರು. ಮನೆಯಿಂದಲೇ ಕೆಲಸವೇನೋ ನಡೆಯುತ್ತಿತ್ತು. ಆದರೆ, ಸಂಬಳ ಪಡೆಯಲು ಹೊಸ ಬ್ಯಾಂಕ್ ಖಾತೆ ತೆರೆಯಬೇಕಿತ್ತು. ಎಚ್.ಆರ್. ಫೋನ್ ಮಾಡಿ- “ಮುಂದಿನ ತಿಂಗಳು ಹೊಸ ಅಕೌಂಟ್‌ಗೇ ಸ್ಯಾಲರಿ ಹಾಕ್ಬೇಕು. ಬೇಗ ಅಕೌಂಟ್ ಓಪನ್ ಮಾಡಿ’ ಅಂದರು. ಕಾರಣಾಂತರಗಳಿಂದ ಆನ್‌ಲೈನ್ ಮೂಲಕ ಅಕೌಂಟ್ ತೆರೆಯಲಾಗಲಿಲ್ಲ.
“ಲಾಕ್‌ಡೌನ್ ಮುಗಿ ಯು ವವರೆಗೂ ಗೇಟ್ ತೆರೆಯುವುದಿಲ್ಲ’ ಎಂದು ನಾನಿರುವ ಪಿ.ಜಿ. ಓನರ್ ಹೇಳಿಬಿಟ್ಟಿದ್ದರು. ಹಾಗಾಗಿ ಎಲ್ಲವೂ ಮೊದಲಿನಂತಾಗಲಿ ಅಂತ ಕಾಯುತ್ತಿದ್ದೆ. ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಓಡಿದ್ದು ಬ್ಯಾಂಕ್‌ಗೆ ಮಾಸ್ಕ್, ಗ್ಲೌಸ್ ಧರಿಸಿ ವಾಪಸ್ ಬಂದ ಮೇಲೆ ಬಿಸಿ ನೀರಲ್ಲಿ ಸ್ನಾನ ಮಾಡಿದರೂ, ಏನೋ ಒಂಥರಾ ಭಯ. ನಾನು ಆಟೋದಲ್ಲಿ ಹೋಗಿದ್ದು, ಬ್ಯಾಂಕ್ ನಲ್ಲಿಯೂ ಏನನ್ನೂ ಮುಟ್ಟಿಲ್ಲ, ಬಂದ ಕೂಡಲೇ ಸ್ನಾನ ಮಾಡಿದ್ದೇನೆ ಅಂದುಕೊಳ್ಳುತ್ತಾ ಯು ಟ್ಯೂಬ್‌ನಲ್ಲಿ ನ್ಯೂಸ್ ಹಾಕಿದರೆ, ಆಘಾತಕಾರಿ ಸುದ್ದಿ ಕಣ್ಣಿಗೆ ಬಿತ್ತು.
ನಾನು ಹೋಗಿದ್ದ ಏರಿಯಾದಲ್ಲೇ ಇಬ್ಬರಲ್ಲಿ ಕೋವಿಡ್ 19 ಪತ್ತೆಯಾಗಿತ್ತು. ಸುದ್ದಿ ಕೇಳಿ ಜಂಘಾಬಲವೇ ಉಡುಗಿ ಹೋಯ್ತು. ದೇವರೇ, ಈಗೇನಪ್ಪಾ ಮಾಡೋದು. ಇವತ್ತು ಆ ಏರಿಯಾಕ್ಕೆ ನಾನೂ ಹೋಗಿದ್ದೇನೆ. ಹಂಗಾದ್ರೆ, ನನಗೂ ಕೋವಿಡ್ 19 ಬಂದಿರುತ್ತಾ? ನನಗೆ ಬಂದುಬಿಟ್ಟರೆ ರೂಮ್ ಮೇಟ್‌ಗೂ ಬರಬಹುದು. ಇಡೀ ಪಿ.ಜಿ.ಯ ಹುಡುಗಿ ಯರಿಗೆಲ್ಲ ಹಬ್ಬಬಹುದು. ಅವರೆಲ್ಲ ಬೇರೆ ಬೇರೆ ಆಫೀಸ್‌ಗೆ ಹೋಗುತ್ತಾರೆ. ಅವರಿಂದ ಅವರ ಆಫೀಸ್‌ಗೆಲ್ಲ ಹರಡಿ ಬಿಡುತ್ತದೆ.
ಕೊನೆಗೆ, ಪಿಜಿಯನ್ನೇ ಖಾಲಿ ಮಾಡಿಸಬೇಕಾ ಗುತ್ತೆ… ಇಷ್ಟೆಲ್ಲಾ ನೆನಪಿಸಿಕೊಂಡು ಅಳುವೇ ಬಂತು. ನಿಧಾನಕ್ಕೆ ರೂಮ್ ಮೇಟ್‌ಗೆ ವಿಷಯ ಹೇಳಿದೆ. ಹಾಗೇನೂ ಆಗಲ್ಲ ಕಣೇ ಅಂತ ಧೈರ್ಯ ತುಂಬಿದರೂ, ಆ ಕ್ಷಣದಿಂದಲೇ ಅವಳು ನನ್ನಿಂದ ಅಂತರ ಕಾಯ್ದುಕೊಳ್ಳಲು ಪ್ರಾರಂಭಿಸಿದಳು. ನಿಂಗೆ ಅಷ್ಟು ಹೆದರಿಕೆ ಆಗುತ್ತಿದ್ದರೆ, ಎಲ್ಲರಿಂದ ಸ್ವಲ್ಪ ದೂರವೇ ಇರು. ಆದ್ರೆ, ಯಾರಿಗೂ ವಿಷಯ ಹೇಳ್ಬೇಡ ಅಂತಲೂ ಹೇಳಿದಳು.
ಅವಳು ಹೇಳಿದ ಹಾಗೆ, ನನ್ನನ್ನು ನಾನು ಕ್ವಾರಂಟೈನ್ ಮಾಡಿಕೊಂಡು ಬಿಟ್ಟೆ. ರೂಮ್‌ನಿಂದ ಹೊರಗೆ ಬರುವುದನ್ನೇ ನಿಲ್ಲಿಸಿದೆ. ಆ ಏರಿಯಾದಲ್ಲಿ ಇನ್ನೂ ಎಷ್ಟು ಜನಕ್ಕೆ ಬಂದಿದೆ ಅಂತ ನ್ಯೂಸ್ ನೋಡುವುದೇ ಮುಂದಿನ ಒಂದು ವಾರದ ಕಾಯಕವಾಯ್ತು. ಹೀಗೆ ಕೋವಿಡ್ 19 ಭಯದಲ್ಲಿ ಹದಿನೈದು ದಿನ ಕಳೆದವಳಲ್ಲಿ ರೋಗದ ಲಕ್ಷಣ ಕಾಣಿಸಲಿಲ್ಲ. “14 ದಿನದೊಳಗೆ ಸೋಂಕಿನ ಲಕ್ಷಣ ಗೊತ್ತಾಗಿ ಬಿಡುತ್ತದೆ.
ನಿಂಗೆ ಏನೂ ಆಗಿಲ್ಲ. ಸುಮ್ನೆ ಹೆದರಿಕೊಳ್ಳಬೇಡ’ ಅಂತ ರೂಮ್ ಮೇಟ್ ಸಮಾಧಾನ ಮಾಡಿದಳು. ನೀನು ಹೆದರಿದ್ದಲ್ಲದೆ, ನನಗೂ ಟೆನ್ಶನ್ ಕೊಟ್ಟುಬಿಟ್ಟೆ ಅಂತ ಹೇಳಿ ನಕ್ಕಳು. ಅಬ್ಟಾ, ಒಟ್ನಲ್ಲಿ ನನ್ನ ಓವರ್ ಥಿಂಕಿಂಗ್‌ನಿಂದಾಗಿ 14 ದಿನ ಮಾನಸಿಕ ಹಿಂಸೆ ಅನುಭವಿಸಿಬಿಟ್ಟೆ. ಸಣ್ಣ ಹೆದರಿಕೆ ಹೇಗೆ ಹೆಮ್ಮರವಾಗಿ ನೆಮ್ಮದಿಯನ್ನು ಕಿತ್ತುಕೊಂಡುಬಿಡುತ್ತದಲ್ವಾ?
* ರೋಹಿಣಿ