Advertisement

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

06:37 PM Dec 18, 2024 | Team Udayavani |

ಉದಯವಾಣಿ ಸಮಾಚಾರ
ಹೊನ್ನಾವರ: ಹಳೆ ಬಸ್‌ನಿಲ್ದಾಣ ಸರಿ ಇಲ್ಲ ಎಂದು ನಾಲ್ಕು ವರ್ಷಗಳ ಹಿಂದೆ 6 ಕೋಟಿ ರೂ. ವೆಚ್ಚದಲ್ಲಿ ಹೊಸ ನಿಲ್ದಾಣ ನಿರ್ಮಿಸಲಾಗಿದೆ. ಸುಧಾರಿಸಲಾರದ, ಸುಧಾರಿಸಬಹುದಾದ ಸಮಸ್ಯೆಗಳಿಂದ ತುಂಬಿ ಹೋದ ಬಸ್‌ನಿಲ್ದಾಣ “ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬಂತೆ ಅಲಂಕಾರದಿಂದ ಕಾಣುತ್ತಿದ್ದು ಇದರ ಒಳ ಹೊಕ್ಕಾಗಲೇ ನಿಜ ಬಣ್ಣ ಕಾಣುತ್ತದೆ.

Advertisement

ಎಂದಿನಂತೆ ಮಳೆಗಾಲದಲ್ಲಿ ಬಸ್‌ ನಿಲ್ದಾಣದ ಎದುರು ಸರೋವರ ನಿರ್ಮಾಣವಾಗುತ್ತದೆ. ರಸ್ತೆಗೆ ಬೆನ್ನು ಮಾಡಿ ಕಟ್ಟಡ ನಿರ್ಮಿಸಿರುವುದರಿಂದ ಪಶ್ಚಿಮದ ಬಿಸಿಲು ಮಧ್ಯಾಹ್ನದ ನಂತರ ಪ್ರಯಾಣಿಕರಿಗೆ ಮಾತ್ರವಲ್ಲ ಅಂಗಡಿಯವರಿಗೆ ಅಪ್ಪಳಿಸುತ್ತದೆ. ಮಳೆಗಾಲದಲ್ಲಿ ನೀರು ಒಳನುಗ್ಗುತ್ತದೆ. ನಿಲ್ದಾಣದಲ್ಲಿ ಕೂರಲು ಆಗುವುದಿಲ್ಲ. ಅಂಗಡಿಗಳ ಸಾಮಾನು ಒದ್ದೆಯಾಗುತ್ತದೆ. ಅದಕ್ಕಾಗಿ ಸ್ವಂತ ಹಣದಲ್ಲಿ ಮರೆ ಮಾಡಿಕೊಂಡಿದ್ದಾರೆ. ನಿಲ್ದಾಣದ ಮಾಡು ತಗ್ಗವಾಗಿ ಇದ್ದರೆ ಈ ತೊಂದರೆ ಶಾಶ್ವತ ಇರುತ್ತಿರಲಿಲ್ಲ. ಹಿಂದಿನ ಬಸ್‌ ಸ್ಟ್ಯಾಂಡ್‌ಗೆ ಬಸ್‌ ಹೊರಗೆ ಹೋಗಲು, ಒಳಗೆ ಬರಲು ಪ್ರತ್ಯೇಕ ಮಾರ್ಗಗಳಿತ್ತು. ಈಗ ಒಂದೇ ಮಾರ್ಗ. ರಸ್ತೆ ಇಕ್ಕಟ್ಟಾಗಿದೆ. ಒಳ ಹೋಗುವ, ಹೊರ ಹೋಗುವ ಬಸ್‌ ಸಿಕ್ಕಿಬೀಳುತ್ತದೆ.

ಈ ಕಟ್ಟಡ ನಿರ್ಮಿಸುವಾಗಲೇ ಶಾಸಕ ದಿನಕರ ಶೆಟ್ಟಿಯವರ ಗಮನಕ್ಕೆ ತರಲಾಗಿತ್ತು. ಸಾರಿಗೆ ಅಧಿಕಾರಿಗಳು ಅವರ ಮಾತು ಕೇಳಲಿಲ್ಲ. ತಪ್ಪಾಗಿ ಹೋಗಿದೆ ಎಂದು ಶಾಸಕ ದಿನಕರ ಶೆಟ್ಟಿ ಈಗ ವಿಷಾದಿಸುತ್ತಾರೆ. ಅಧಿಕಾರಿಗಳ ತಪ್ಪು ಪ್ರಯಾಣಿಕರಿಗೆ ನಿತ್ಯ ಕಿರಿಕಿರಿ ಉಂಟುಮಾಡುತ್ತಿದೆ. ಮುಂದೆ ಕಟ್ಟುವಾಗಲಾದರೂ ಸ್ಥಳೀಯ ಪರಿಸ್ಥಿತಿ ಅಧ್ಯಯನ ಮಾಡಿ ಕಟ್ಟಬೇಕಾಗಿದೆ.

ಬೈಕ್‌ಗಳನ್ನು ಇಡಲು ಸ್ಥಳವಿಲ್ಲದೇ ಓಡಾಡುವ ಹಾದಿಯಲ್ಲಿ ನಿಲ್ಲಿಸುತ್ತಾರೆ. ಮೊದಲು ಒರಗಿ ಕೂರುವ ಕಾಂಕ್ರೀಟ್‌ ಬೆಂಚುಗಳಿದ್ದವು. ಈಗ ಹಳ್ಳಿ ಬಸ್‌ ಸ್ಟ್ಯಾಂಡ್‌ನ‌ಲ್ಲಿ ಇರುವಂತೆ ಕಲ್ಲಿನ ಕಿರುಪಟ್ಟಿ ಹಾಕಲಾಗಿದೆ. ಬಸ್‌ ಸ್ಟ್ಯಾಂಡ್‌ನ‌ಲ್ಲಿ ಕಾಯುತ್ತಾ ಕೂರುವುದು ಕಷ್ಟವಾಗುತ್ತಿದೆ. ರಾತ್ರಿ ಬಸ್‌ಗಳು ಬರುವುದೇ ಇಲ್ಲ. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕ್ಲಾಸಿಗೆ ಹೋಗುವ
ಬದಲು ಪಬ್ಜಿ ಆಡುತ್ತಾ ಕೂರುತ್ತಾರೆ. ಹೆಣ್ಣುಮಕ್ಕಳ ಜತೆ ಮೋಜು ಮಾಡುತ್ತಾರೆ. ಪೊಲೀಸರು ಇರುವುದಿಲ್ಲ.

ರಿಕ್ಷಾ ಸ್ಟ್ಯಾಂಡ್‌ನ್ನು ಕೆಲವರು ಹಿಡಿದುಕೊಂಡಿದ್ದು ಊರಿನ ಅಥವಾ ಹಳ್ಳಿಗಳ ರಿಕ್ಷಾಗಳಿಗೆ ಸ್ಥಳ ಕೊಡುವುದಿಲ್ಲ. ಸುಲಭ ದರದಲ್ಲಿ ಆರೋಗ್ಯಕರ ಊಟ ತಿಂಡಿ ಪ್ರಯಾಣಿಕರಿಗೆ ದೊರೆಯಬೇಕು, ಕಂಡಲ್ಲಿ ಶೌಚ ಮಾಡದೇ ಇರಲಿ ಎಂದು ಉತ್ತಮ ಶೌಚಾಲಯ ವ್ಯವಸ್ಥೆ ಮಾಡುವುದು ಸಾರಿಗೆ ಸಂಸ್ಥೆ ಮೂಲ ನೀತಿ.

Advertisement

ಈಗ ಊಟ ತಿಂಡಿ ಮತ್ತು ಬೇಕರಿಗಳು ಉತ್ತಮವಾಗಿಲ್ಲ. 10 ಅಡಿ ಅಂಗಡಿಗೆ 10-15 ಸಾವಿರ ರೂ. ಬಾಡಿಗೆ 800 ಚದುರ ಅಡಿಯ
ಕ್ಯಾಂಟಿನ್‌ಗೆ 75 ಸಾವಿರ ರೂ. ಬಾಡಿಗೆ. ಲಾಭ ಮಾಡಲು ಕಡಿಮೆ ಗುಣಮಟ್ಟದ ಉತ್ಪಾದನೆ ಕೊಡುವುದು ಇವರಿಗೆ ಅನಿವಾರ್ಯ.
ಶೌಚಾಲಯದಲ್ಲಿ ಹಣ ಪಡೆದರೂ ಸರಿಯಾಗಿ ಸೇವೆ ಇಲ್ಲ. ಅಂಗಡಿಗಳ ತ್ಯಾಜ್ಯಗಳು ಗಟಾರ್‌ ತುಂಬಿಸಿದ್ದು, ಸ್ವತ್ಛ ಮಾಡದ ಕಾರಣ ದುರ್ವಾಸನೆ ಬೀರುತ್ತದೆ.

ಹೆಚ್ಚಿನ ಪ್ರಯಾಣಿಕರು ಟಪ್ಪರ್‌ ಹಾಲ್‌ ಸರ್ಕಲ್‌, ಕಾಲೇಜು ಸರ್ಕಲ್‌ನಲ್ಲಿ ಕಾಯುತ್ತಾ ನಿಂತು ಬಸ್‌ ಏರುವುದನ್ನು ನಿತ್ಯ ಕಾಣುತ್ತಿದ್ದೇವೆ. ಬಸ್‌ ನಿಲ್ದಾಣದಲ್ಲಿ ಸಾಕಷ್ಟು ಬಾರಿ ಪಿಕ್‌ಪಾಕಿಟ್‌ ನಡೆಯುತ್ತಿದ್ದರೂ, ತಪ್ಪಿಸ್ಥರನ್ನು ಹಿಡಿದು ಶಿಕ್ಷಿಸಲು ಸಿಸಿ ಕ್ಯಾಮೆರಾ ವ್ಯವಸ್ಥೆಯಿಲ್ಲ. ರಾತ್ರಿ ಅನಿವಾರ್ಯವಾಗಿ ಬಸ್‌ ಸ್ಟ್ಯಾಂಡ್‌ನ‌ಲ್ಲಿ ಮಲಗುವ ಪ್ರಯಾಣಿಕರಿಗೆ ಸರಿಯಾದ ರಕ್ಷಣೆ ಇಲ್ಲ. ತಿಂಗಳಿಗೆ ಇಲ್ಲಿಂದಲೇ 3 ಲಕ್ಷ ರೂ. ಬಾಡಿಗೆ ಪಡೆಯುತ್ತದೆ. ಸ್ವಲ್ಪ ಹಣವನ್ನು ಬಸ್‌ಸ್ಟ್ಯಾಂಡ್‌ಗೆ ಬಳಸುವುದಿಲ್ಲ. ಹಲವು ಬಾರಿ ಬಸ್‌ ಸ್ಟ್ಯಾಂಡ್‌ನ‌ ಸಮಸ್ಯೆಗಳ ಕುರಿತು ವರದಿ ಮಾಡಲಾಗಿದೆ. ಆದರೆ ಎಲ್ಲವೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ.

ಜೀ.ಯು

Advertisement

Udayavani is now on Telegram. Click here to join our channel and stay updated with the latest news.

Next