ಕಲಬುರಗಿ: ಖಾವಿ, ಖಾಕಿ, ಖಾದಿಯನ್ನು ಸರಿಪಡಿಸುವವರೇ ಪತ್ರಕರ್ತರು. ಎಲ್ಲರನ್ನೂ ತಿದ್ದಿ-ಸಲಹೆ ನೀಡಿ ಸರಿ ದಾರಿಗೆ ತರುವಂತವರು ಪತ್ರಕರ್ತರು. ಎಲ್ಲರಿಗೂ ಗುರುಗಳು ಪತ್ರಕರ್ತರು ಎಂದರೆ ತಪ್ಪಾಗಲಾರದು ಎಂದು ನಗರದ ಸುಲಫಲ ಮಠದ ಪೀಠಾಧಿಪತಿ ಹಾಗೂ ಶ್ರೀಶೈಲಂ ಸಾರಂಗಮಠದ ಜಗದ್ಗುರು ಡಾ| ಸಾರಂಗಧರ ದೇಶಿಕೇಂದ್ರ ಸ್ವಾಮಿಗಳು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕ ಹೊಂದಿರುವ ಪತ್ರಕರ್ತ ದೇವೇಂದ್ರಪ್ಪ ಕಪನೂರ ಅವರ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು. ಖಾಕಿ, ಖಾದಿ ಒಬ್ಬರಿಗೊಬ್ಬರು ಹೇಳಬಹುದು. ಆದರೆ ಈ ಮೂವರಿಗೂ ತಿದ್ದುವ ಹೊಣೆಗಾರಿಕೆ ಪತ್ರಕರ್ತರೇ ಹೊಂದಿದ್ದಾರೆ ಎಂದು ಹೇಳಿದರು.
ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ರಂಗ ಮಾಧ್ಯಮದಲ್ಲಿ ದುಡಿದವರು ದೇವೇಂದ್ರಪ್ಪ ಕಪನೂರ. ಬ್ಯಾಲದಿಂದಲೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಸರ್ಕಾರದ ಮಹತ್ವಾಕಾಂಕ್ಷೆಯ ಸಾಕ್ಷರತೆ ಕಾರ್ಯಕ್ರಮವನ್ನು ಬೀದಿ ನಾಟಕಗಳ ಮೂಲಕ ಜನರಿಗೆ ತಲುಪಿಸಿದವರು. ಅವರದ್ದು ಹಾರ್ಡ್‌ವೇರ್ ದೇಹ, ಸಾಫ್ಟ್ ವೇರ್ ಮನಸ್ಸು. ಒಟ್ಟಾರೆ ಪತ್ರಿಕೋಧ್ಯಮದ ಜತೆಗೆ ರಂಗ ಕಲಾವಿದರಾಗಿದ್ದಾರೆ ಎಂದರು.
ಪೊಲೀಸ್ ಆಯುಕ್ತ ಡಾ| ವೈ. ಎಸ್. ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ದಯಾನಂದ ಅಗಸರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ ಮತ್ತು ವಾರ್ತಾ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರ ಬಿ.ಜಿ ಸಹ ಮಾತನಾಡಿದರು. ಸನ್ಮಾನಿತಗೊಂಡು ಮಾತನಾಡಿದ ದೇವೇಂದ್ರಪ್ಪ ಕಪನೂರ, ಈ ಸನ್ಮಾನದಿಂದ ತಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿಸಿದೆ.
ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಅರ್ಹ ಪತ್ರಕರ್ತರಿಗೆ ಸೂಕ್ತ ಗೌರವ ಕೊಡಿಸುವಲ್ಲಿ ಪ್ರಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು. ಸಂಘದ ವತಿಯಿಂದ ಕಪನೂರ ದಂಪತಿಯನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು ದೇವೇಂದ್ರಪ್ಪ ಕಪನೂರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಹಿರಿಯ ಪತ್ರಕರ್ತರು, ಸಂಘದ ಪದಾಧಿಕಾರಿಗಳು, ಕಪನೂರ ಪರಿವಾರದವರು ಇದ್ದರು.