Advertisement

ಆರೋಗ್ಯ ಸೇವೆ ಬಲವರ್ಧನೆಗೆ ಕೈಜೋಡಿಸಿ

03:01 PM Feb 28, 2017 | |

ಹುಬ್ಬಳ್ಳಿ: ದೇಶದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ವೈದ್ಯಕೀಯ ಯಂತ್ರ-ಸಲಕರಣೆಗಳ ಸೌಲಭ್ಯಕ್ಕೆ ಖಾಸಗಿ ಸಂಸ್ಥೆಗಳ ನೆರವಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅದೇ ರೀತಿ ಖಾಸಗಿ ವೈದ್ಯರುಗಳು ಆರೋಗ್ಯ ಸೇವೆ ಬಲವರ್ಧನೆಗೆ ಸರಕಾರದ ಯತ್ನಕ್ಕೆ ಕೈ ಜೋಡಿಸಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವ ಫ‌ಗ್ಗನ್‌ ಸಿಂಗ್‌ ಕುಲಾಸ್ತೆ ಹೇಳಿದರು. 

Advertisement

ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತನಿಧಿ ಕಟ್ಟಡದಲ್ಲಿ ಇನ್ಫೋಸಿಸ್‌ ಪ್ರತಿಷ್ಠಾನ ನೆರವಿನ ರಕ್ತ ಅಂಗಾಂಶಗಳ ಪ್ರತ್ಯೇಕಿಕರಣ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 

ದೇಶದ ಒಟ್ಟು ಆಂತರಿಕ ಬೆಳವಣಿಗೆ ದರದಲ್ಲಿ ಆರೋಗ್ಯದ ಪಾಲು ಶೇ.1.4ರಷ್ಟು ಇದ್ದು, ಕೇಂದ್ರ ಬಜೆಟ್‌ನಲ್ಲಿ ಒಟ್ಟು 47 ಸಾವಿರ ಕೋಟಿ ನಿಗದಿ ಪಡಿಸಲಾಗಿದೆ. ಹುಬ್ಬಳ್ಳಿಯಲ್ಲಿನ ರಾಷ್ಟ್ರೋತ್ಥಾನ ರಕ್ತ ಭಂಡಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೊಂದು ಪುಣ್ಯದ ಕಾರ್ಯ ಎಂದರು.

ಬದಲಾಗಬೇಕಿದೆ ಮನೋಭಾವನೆ: ರಕ್ತದಾನದ ಬಗೆಗಿನ ಹಲವು ತಪ್ಪು ಕಲ್ಪನೆಗಳು ಹೋಗಲಾಡಿಸಿ ಹೆಚ್ಚಿನ ರಕ್ತದಾನಕ್ಕೆ ಉತ್ತೇಜಿಸಬೇಕಾಗಿದೆ. ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಬಿದ್ದದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡದೆ ಕೆಲವರು ಮೊಬೈಲ್‌ ನಲ್ಲಿ ವೀಡಿಯೋ ಮಾಡಿ ಅದನ್ನು ವಾಟ್ಸ್‌ಆ್ಯಪ್‌ಗ್ಳಿಗೆ ಹಾಕುವ ಅಮಾನವೀಯ ಮನೋಭಾವನೆ ಬದಲಾಗಬೇಕಾಗಿದೆ ಎಂದರು. 

ಇನ್ಫೋಸಿಸ್‌ ಪ್ರತಿಷ್ಠಾನದ ಧರ್ಮದರ್ಶಿ ವಿನೋದ ಹಂಪಾಪುರ ಮಾತನಾಡಿ, ಪ್ರತಿಷ್ಠಾನ ಹಲವು ರೀತಿಯ ಸಾಮಾಜಿಕ ಸೇವಾ ನೆರವು ಕಾರ್ಯ  ಮಾಡುತ್ತಿದೆ. ಬಡವರಿಗೆ ನೆರವು ನೀಡಿಕೆ ಕಾರ್ಯದೊಂದಿಗೆ ದೇಶ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು. 

Advertisement

30 ಲಕ್ಷ ಯುನಿಟ್‌ ರಕ್ತದ ಕೊರತೆ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ದೇಶದಲ್ಲಿ ಪ್ರಸ್ತುತ ಸುಮಾರು 90 ಲಕ್ಷ ಯುನಿಟ್‌ ರಕ್ತ ಲಭ್ಯವಾಗುತ್ತಿದೆ. ಬೇಡಿಕೆ ಸುಮಾರು 120 ಲಕ್ಷ ಯುನಿಟ್‌ ಇದ್ದು, ಇನ್ನು 30 ಲಕ್ಷ ಯುನಿಟ್‌ ಕೊರತೆ ಎದುರಿಸುವಂತಾಗಿದೆ. ರಕ್ತದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಬೇಕಾಗಿದೆ ಎಂದರು.  

ಭಾರತದಲ್ಲಿ ವರ್ಷಕ್ಕೆ ಸರಾಸರಿ 10 ಲಕ್ಷ ಜನರಿಗೆ ಕ್ಯಾನ್ಸರ್‌ ರೋಗ ಪತ್ತೆಯಾಗುತ್ತಿದೆ. ಇವರಿಗೆ ರಕ್ತದ ಅವಶ್ಯಕತೆ ಇದ್ದು, ರಕ್ತ ದಾನಿಗಳ ಸಂಖ್ಯೆ ಹೆಚ್ಚಬೇಕಿದೆ. ರಾಜ್ಯದಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಕಳೆದ ಆರು ತಿಂಗಳಿಂದ ಬಂದ್‌ ಆಗಿದ್ದು, ಈ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದರು. 

ಆರ್‌ಎಸ್‌ಎಸ್‌ ರಾಷ್ಟ್ರೀಯ ವ್ಯವಸ್ಥಾಪಕ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಇನ್ನೊಬ್ಬರಿಗೆ ಸ್ಪರ್ಧಿಯಾಗಲು ಹುಬ್ಬಳ್ಳಿಯಲ್ಲಿ ರಾಷ್ಟ್ರೋತ್ಥಾನ ರಕ್ತ ಭಂಡಾರ ಆರಂಭಿಸಿಲ್ಲ. ಬದಲಾಗಿ, ಸಾಮಾನ್ಯ ಜನರಿಗೆ ಸಕಾಲಕ್ಕೆ ಹಾಗೂ ಯೋಗ್ಯ ದರದಲ್ಲಿ ರಕ್ತ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ ಎಂದರು. 

ಇದೀಗ ರಕ್ತ ಅಂಗಾಂಶಗಳ ಪ್ರತ್ಯೇಕಿಕರಣ ಘಟಕದಿಂದಲೂ ಸಾಮಾನ್ಯ ಜನರಿಗೆ ಯೋಗ್ಯ ಹಾಗೂ ಕಡಿಮೆ ದರದಲ್ಲಿ ಸೌಲಭ್ಯಗಳು ದೊರೆಯಲಿವೆ. ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತ ಭಂಡಾರ ಉತ್ತರ ಕರ್ನಾಟಕದಲ್ಲೇ ನಂಬರ್‌ ಒನ್‌ ಆಗಬೇಕಾಗಿದೆ ಎಂದರು.  ನರರೋಗ ತಜ್ಞ ಡಾ| ಕ್ರಾಂತಿ ಕಿರಣ ಅಧ್ಯಕ್ಷತೆ ವಹಿಸಿದ್ದರು.

ಮೂರು ಸಾವಿರಮಠದ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಡಾ| ಎಸ್‌.ಆರ್‌.ರಾಮಸ್ವಾಮಿ, ದಿನೇಶ ಹೆಗ್ಡೆ ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ದಾನಿಗಳಾದ ವೀರೇಂದ್ರ ಛೇಡಾ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು. ದತ್ತಮೂರ್ತಿ ಕುಲಕರ್ಣಿ ಸ್ವಾಗತಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next