ಚಿತ್ರದುರ್ಗ: ಸೋಂಕು, ತಾರತಮ್ಯ, ಕಳಂಕಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಆರ್. ರಂಗನಾಥ್ ಕರೆ ನೀಡಿದರು.
ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಎಚ್‌ಐವಿ, ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡುವಿಕೆ ನಿರ್ಮೂಲನಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಎನ್ನುವ ರಾಷ್ಟ್ರೀಯ ಆರೋಗ್ಯ ಅಭಿಯಾನದ ಘೋಷಣೆಯೊಂದಿಗೆ ಇಂದು ಎಚ್‌ಐವಿ, ಏಡ್ಸ್ ದಿನಆಚರಣೆ ಮಾಡಿ ಎಲ್ಲವುಗಳಿಂದ ಮುಕ್ತರಾಗಬೇಕಿದೆ ಎಂದರು.
ಎಚ್‌ಐವಿ ಸೋಂಕು ಕೇವಲ ಆರೋಗ್ಯದ ಸಮಸ್ಯೆ ಅಷ್ಟೇ ಅಲ್ಲ ಇದಕ್ಕೆ ಆರ್ಥಿಕ, ಸಾಮಾಜಿಕ, ಮಾನಸಿಕ ಹಾಗೂ ಸಾಂಸ್ಕೃತಿಕ ಆಯಾಮಗಳಿವೆ. ತಾಯಿಯಿಂದ ಮಗುವಿಗೆ ಸೋಂಕು ಹರಡುವಿಕೆಯ ನಿರ್ಮೂಲನೆಯೇ ಈ ಆಂದೋಲನದ ಮುಖ್ಯ ಉದ್ದೇಶ. ಎಚ್‌ಐವಿ ಮುಕ್ತ ಮಗುವಿನ ಜನನ ಎಚ್‌ಐವಿ ಮುಕ್ತ ಸಮಾಜದ ನಿರ್ಮಾಣ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|ಸುಧಾ ಮಾತನಾಡಿ, ಮೊದಲ ಬಾರಿಗೆ ಎಲ್ಲಾ ತಾಲೂಕಿನಲ್ಲಿ ಪ್ರತಿ ತಿಂಗಳು ನಡೆಯುವ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಡಿಯಲ್ಲಿ ಎಲ್ಲಾ ಗರ್ಭಿಣಿಯರು ಮೊದಲ 3 ತಿಂಗಳಲ್ಲಿ ಎಚ್ ಐವಿ ಸ್ಥಿತಿ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದರು. ಒಂದು ಪಕ್ಷ ಗರ್ಭಿಣಿ ಎಚ್‌ಐವಿ ಸೋಂಕಿತರಾಗಿದ್ದಲ್ಲಿ ತಮ್ಮ ಗರ್ಭಾವಧಿಯಲ್ಲಿ, ಪ್ರಸೂತಿ ಸಮಯದಲ್ಲಿ, ಹಾಲುಣಿಸುವ ಸಮಯದಲ್ಲಿ, ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಚಿಕಿತ್ಸೆಗೆ ಒಳಪಡಿಸಲು ತಿಳಿಸಿದರು.
ಮಗುವಿಗೆ ಜನ್ಮ ನೀಡಿದ ತಕ್ಷಣ ನೆವರೋಪಿನ್ ದ್ರಾವಣ ನೀಡುವುದರಿಂದ ಎಚ್‌ಐವಿ ಸೋಂಕು ಬರದಂತೆ ತಡೆಗಟ್ಟಬಹುದು. ನಂತರ 6 ವಾರ, 6 ತಿಂಗಳು, ಮತ್ತು ಒಂದೂವರೆ ವರ್ಷದವರೆಗೆ ಮಗುವಿನ ಅನುಸರಣೆ ಮಾಡಿ ಮಗುವಿಗೆ ಸೋಂಕು ಹರಡದಂತೆ ತಡೆಗಟ್ಟುವುದು, ಒಂದು ಪಕ್ಷ ಸೋಂಕಿತ ಮಗುವಾಗಿದ್ದಲ್ಲಿ ಆ ಮಗುವಿಗೆ ಶೀಘ್ರ ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಗರ್ಭಿಣಿಯರಿಗೆ ಅರಿಶಿಣ, ಕುಂಕುಮ, ಹೂ, ಕುಪ್ಪಸ ಫಲತಾಂಬೂಲ, ನೀಡುವುದರೊಂದಿಗೆ ಸಾಂಕೇತಿಕವಾಗಿ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಬಸವರಾಜ್, ನಿವಾಸಿ ವೈದ್ಯಾಧಿಕಾರಿ ಡಾ|ಆನಂದ್‌ಪ್ರಕಾಶ್, ಎ.ಆರ್.ಟಿ. ವೈದ್ಯಾಧಿಕಾರಿಗಳಾದ ಡಾ|ರೂಪಶ್ರೀ, ತಾಲೂಕು ಆರೋಗ್ಯಾಧಿಕಾರಿ ಡಾ|ಗಿರೀಶ್ ಮತ್ತಿತರಿದ್ದರು.