Advertisement

ಜಾನ್‌ ಮತ್ತು ಮಾತಾಡುವ ಮೀನು

06:00 AM Jul 19, 2018 | |

ತುಂಬಾ ಹಿಂದೆ ಭಾಗ್ಯಪುರ ಎಂಬ ಊರಿನಲ್ಲಿ ಜಾನ್‌ ವ್ಯಕ್ತಿ ಇದ್ದ. ಅವನು ಅಪಾರ ಪ್ರಾಮಾಣಿಕನೂ, ಸತ್ಯವಂತನೂ, ಹೃದಯವಂತನೂ ಆಗಿದ್ದ. ಅವರಿವರ ಬಳಿ ಕೂಲಿ ಕೆಲಸ ಮಾಡಿ ಕಡು ಕಷ್ಟದಲ್ಲೂ, ತೃಪ್ತಿಯಿಂದಲೇ ಜೀವಿಸುತ್ತಿದ್ದ. 

Advertisement

ಒಮ್ಮೆ ಜಾನ್‌ ಕೆರೆ ಬದಿಯ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ. ಒಡನೆಯೇ ಆಶ್ಚರ್ಯಕಾರಿ ಘಟನೆಯೊಂದು ಘಟಿಸಿತು. ದೊಡ್ಡ ಗಾತ್ರದ ಮೀನೊಂದು ಕೆರೆಯಿಂದ ರಸ್ತೆ ಮೇಲೆ ಹಾರಿ ಬಿದ್ದಿತು. ಮತ್ತೆ ಕೆರೆಗೆ ಮರಳಲು ಯತ್ನಿಸಿದರೂ ಆಗದೆ ವಿಲ ವಿಲ ಒದ್ದಾಡತೊಡಗಿತು. ಅದನ್ನು ಕಂಡು ಇವನ ಕರುಳು ಚುರುಕ್‌ ಎಂದಿತು. ಮೀನಿಗೆ ಸಹಾಯ ಮಾಡಲು ಮುಂದಾಗುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಮೀನುಗಾರನೊಬ್ಬ “ಆಹಾ ತಿಂಗಳುಗಟ್ಟಲೆ ಬಲೆ ಬೀಸಿದರೂ ಇಂಥ ಮೀನು ಸಿಗುವುದಿಲ್ಲ. ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತೆ ಈ ಮೀನು’ ಎನ್ನುತ್ತಾ ಮೀನನ್ನು ಹಿಡಿಯಲು ಬಂದನು. ಜಾನ್‌ ಮೀನುಗಾರನನ್ನು ತಡೆದನು. ಅವರಿಬ್ಬರ ನಡುವೆ ವಾಗ್ವಾದ ಏರ್ಪಟ್ಟಿತು. ಕೊನೆಗೆ ತನ್ನ ಇಡೀ ದಿನದ ಸಂಪಾದನೆಯನ್ನು ನೀಡಿದ ಮೇಲೆಯೇ ಮೀನುಗಾರ ಗೊಣಗುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದ. ಜಾನ್‌ ನಿಧಾನವಾಗಿ ಆ ಮೀನನ್ನು ಕೆರೆಯೊಳಕ್ಕೆ ಬಿಟ್ಟನು. ಕೆರೆ ಸೇರಿದ ತಕ್ಷಣ ಮೀನು ಪುಳಕ್ಕನೆ ನೀರೊಳಗೆ ಮಾಯವಾಯಿತು. ಇತ್ತ ಜಾನ್‌ ಖಾಲಿ ಕೈಯಲ್ಲಿ ಮನೆಗೆ ವಾಪಸ್ಸಾದನು. ಆ ದಿನ ಊಟ ಮಾಡಲು ಏನೂ ಇರಲಿಲ್ಲ. ಹಸಿವಿನಲ್ಲೇ ಆ ರಾತ್ರಿಯನ್ನು ಕಳೆದನು. ಅಕ್ಕಪಕ್ಕದ ಮನೆಯವರೆಲ್ಲರೂ ಅವನ ಅತಿಯಾದ ಪರೋಪಕಾರ ಗುಣವನ್ನು ಆಡಿಕೊಂಡರು.

ಈ ಘಟನೆ ನಡೆದು ಒಂದು ವಾರ ಕಳೆದಿರಬಹುದು. ಜಾನ್‌ ಕೆಲಸ ಮಾಡುತ್ತಿದ್ದ ಊರಿನ ಶ್ರೀಮಂತ ವ್ಯಕ್ತಿ ಮುಸ್ತಾಫಾ ಅವರ ಮನೆಯಲ್ಲಿ ಕಳ್ಳತನವಾಯಿತು. ಅತ್ಯಂತ ದುಬಾರಿ ಬೆಲೆಯ ಉಂಗುರ ಕಳೆದು ಹೋಗಿತ್ತು. ತಲೆ ತಲಾಂತರಗಳಿಂದ ಆ ಕುಟುಂಬದ ಆಸ್ತಿಯಾಗಿದ್ದ ಉಂಗುರವಾಗಿತ್ತು ಅದು. ಮಾರುಕಟ್ಟೆಯಲ್ಲಿ ಮಾರಿದರೂ ಹೆಚ್ಚಿನ ಬೆಲೆ ಸಿಗುವುದು ಖಾತರಿ. ಊರೆಲ್ಲಾ ಹುಡುಕಿದರೂ ಕಳ್ಳ ಸಿಗಲಿಲ್ಲ. ತನ್ನೊಡೆಯನ ಮನೆಯಲ್ಲಿ ಕಳ್ಳತನವಾಗಿದ್ದು ಕೇಳಿ ಜಾನ್‌ ಕೂಡ ನೊಂದುಕೊಂಡ.

ಒಂದು ಸಂಜೆ ಕೆಲಸ ಮುಗಿಸಿ ಕೆರೆ ಬದಿಯ ರಸ್ತೆಯಲ್ಲಿ ನಡೆದುಬರುತ್ತಿದ್ದ. ಯಾರೋ ಅವನ ಹೆಸರು ಹಿಡಿದು ಕರೆದ ಹಾಗಾಯ್ತು. ನೋಡಿದರೆ ತಾನು ಹಿಂದೆ ರಕ್ಷಿಸಿದ ಮೀನು ನೀರಿನಿಂದ ತಲೆ ಮೇಲೆತ್ತಿ ಮಾತಾಡುತ್ತಿದೆ. ಜಾನ್‌ಗೆ ನಂಬಲಾಗಲೇ ಇಲ್ಲ. 

ಮೀನು “ಅಯ್ನಾ ನೀನು ಹಿಂದೊಮ್ಮೆ ನನ್ನ ಪ್ರಾಣವನ್ನು ಕಾಪಾಡಿದ್ದೆ. ಆ ಋಣವನ್ನು ತೀರಿಸುವ ಸಮಯ ಹತ್ತಿರ ಬಂದಿದೆ.’ ಎಂದು ಹೇಳಿ ಒಂದು ಉಂಗುರವನ್ನು ಜಾನ್‌ ಕೈ ಮೇಲಿಟ್ಟಿತು. ಅದನ್ನು ನೋಡಿ ಜಾನ್‌ ಹೌಹಾರಿದ. ಅದು ಮುಸ್ತಾಫ್ ಅವರ ಉಂಗುರವಾಗಿತ್ತು. ಮೀನು “ಹೆದರಬೇಡ. ಕಾಗೆಯೊಂದು ಆ ಉಂಗುರವನ್ನು ಕದ್ದು, ಹಾರಿ ಹೋಗುತ್ತಿತ್ತು. ದಾರಿ ಮಧ್ಯ ದಣಿವಾಗಿ ಬಾಯೆ¤ರೆಯಿತು. ಆಗ ಈ ಉಂಗುರ ಕೆರೆಗೆ ಬಿದ್ದಿತು.’ ಎಂದು ವಿಷಯವನ್ನೆಲ್ಲಾ ಹೇಳಿತು.

Advertisement

ನಂತರವೇ ಜಾನ್‌ ಆ ಉಂಗುರವನ್ನು ಕಿಸೆಗೆ ಹಾಕಿಕೊಂಡಿದ್ದು. ಅದನ್ನು ಜೋಪಾನವಾಗಿ ಯಜಮಾನನಿಗೆ ನೀಡಿದಾಗ ಅವರು ಸಂತುಷ್ಟರಾದರು. ಬಹುಮಾನವನ್ನು ಕೊಟ್ಟಿದ್ದಲ್ಲದೆ, ತಮ್ಮ ಮನೆಯಲ್ಲಿ ಉತ್ತಮ ನೌಕರಿಯನ್ನು ನೀಡಿದರು. ಜಾನ್‌ ಚೆನ್ನಾಗಿ ಬಾಳಿ ಬದುಕಿದ.

 ರಾಜು

Advertisement

Udayavani is now on Telegram. Click here to join our channel and stay updated with the latest news.

Next