Advertisement

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

12:16 AM Nov 13, 2024 | Team Udayavani |

ಸೈಬರ್‌ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ(ಎಐ) ಸೇರಿ ಭವಿಷ್ಯದ ತಂತ್ರಜ್ಞಾನಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಈಗಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಕೋರ್ಸ್‌ ಗಳನ್ನು ರಾಜ್ಯ ಸರಕಾರವು ಆರಂಭಿಸುತ್ತಿದೆ.

Advertisement

ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ನಡೆಯಾಗಿದೆ. ಈ ಕೋರ್ಸ್‌ಗಳು ಮಾಹಿತಿ ತಂತ್ರಜ್ಞಾನ ಸಂಬಂಧಿತ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶವನ್ನು ಒದಗಿಸುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಬಹುರಾಷ್ಟ್ರೀಯ ಕಂಪೆನಿಗಳಾದ ಸಿಸ್ಕೋ ಮತ್ತು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿಯ (ಕಿಟ್ಸ್‌) ಸಹಭಾಗಿತ್ವದಲ್ಲಿ ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಸೈಬರ್‌ ಸುರಕ್ಷತೆ ಕೌಶಲ್ಯ ಮತ್ತು ಸೈಬರ್‌ ಸುರಕ್ಷತೆ’ ಆನ್‌ಲೈನ್‌ ತರಬೇತಿ ಮತ್ತು ಆಯ್ದ ಸರಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಬಹುರಾಷ್ಟ್ರೀಯ ಕಂಪೆನಿ ಡೆಲ್‌ ಟೆಕ್ನಾಲಜೀಸ್‌ ನೆರವಿನೊಂದಿಗೆ “ಮಹಿಳೆ ಮತ್ತು ಕೃತಕ ಬುದ್ಧಿಮತ್ತೆ’ ಕೋರ್ಸ್‌ ಆರಂಭಿಸಲಾಗುತ್ತಿದ್ದು, ಇವು ಉಚಿತವಾಗಿವೆ.

ಈಗ ಕೇವಲ ಸಾಂಪ್ರದಾಯಿಕ ವಲಯದ ಉದ್ಯೋಗಗಳನ್ನು ನೆಚ್ಚಿಕೊಳ್ಳುವಂತಿಲ್ಲ. ಹೊಸ ಕಾಲದ ಹೊಸ ಕೌಶಲಗಳನ್ನು ಬೇಡುವ ಉದ್ಯೋಗಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಸರಕಾರದ ಹೊಣೆಯಾಗಿದೆ. ಅದಕ್ಕೆ ಸಂಬಂಧಿಸಿದಂತೆ ಪಠ್ಯಗಳನ್ನು ಅಳವಡಿಸುವುದರ ಜತೆಗೆ, ಅಗತ್ಯ ತರಬೇತಿಯನ್ನು ಒದಗಿಸಿದರೆ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಪಡೆಯಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಈ ಅಲ್ಪಾವಧಿಯ ತರಬೇತಿ ಹೆಚ್ಚು ಮಹತ್ವದ್ದಾಗಿದೆ.

ತಂತ್ರಜ್ಞಾನ ಹಿನ್ನೆಲೆ ಇಲ್ಲದ ವಿದ್ಯಾರ್ಥಿಗಳಿಗೆ “ಸೈಬರ್‌ ಭದ್ರ­ತೆಯ ಪರಿಚಯ’ ಕೋರ್ಸ್‌ ಮತ್ತು ಕಂಪ್ಯೂಟರ್‌ ಸೈನ್ಸ್‌ ಹಿನ್ನೆಲೆಯುಳ್ಳ ವಿದ್ಯಾರ್ಥಿ­ಗಳಿಗೆ “ಸೈಬರ್‌ ಸುರಕ್ಷತೆ ಅಗತ್ಯಗಳು’ ವಿಷಯ ಹೆಚ್ಚು ಸೂಕ್ತ ಎಂದು ಉನ್ನತ ಶಿಕ್ಷಣ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖೀಸಿದೆ. ಆದಾಗ್ಯೂ ವಿದ್ಯಾರ್ಥಿಗಳು ಈ ಎರಡರಲ್ಲಿ ತಮಗಿಷ್ಟವಾದ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿದೆ. ಜತೆಗೆ ಆಸಕ್ತ ಪ್ರಾಧ್ಯಾಪಕರೂ ಈ ಕೋರ್ಸ್‌ಗೆ ಸೇರಿಕೊಳ್ಳಬಹುದು. ಜತೆಗೆ, ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಆಯ್ದ ಸರಕಾರಿ ಕಾಲೇಜುಗಳ ವಿದ್ಯಾರ್ಥಿನಿಯರಿಗೆ “ಮಹಿಳೆ ಮತ್ತು ಕೃತಕ ಬುದ್ಧಿಮತ್ತೆ’ ಕಾರ್ಯಕ್ರಮವನ್ನು ಈ ವರ್ಷ ಪರಿಚಯಿಸಲಾಗುತ್ತಿದೆ. ಈ ವರ್ಷ ಈ ಜಿಲ್ಲೆಗಳ 17 ಕಾಲೇಜಿನಲ್ಲಿ ಕಾರ್ಯಕ್ರಮ ಜಾರಿಗೆ ಬರಲಿದೆ.

Advertisement

ಈ ಎಲ್ಲ ಕೋರ್ಸ್‌ಗಳು 30, 20 ಮತ್ತು 15 ಗಂಟೆಯದ್ದಾಗಿದ್ದರೂ ವಿದ್ಯಾರ್ಥಿಗಳಿಗೆ ಕೌಶಲಗಳನ್ನು ವೃದ್ಧಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂಬುದರ ಬಗ್ಗೆ ಯಾವುದೇ ಅನುಮಾನಗಳಿಲ್ಲ. ದತ್ತಾಂಶ ಮತ್ತು ವಿಶ್ಲೇಷಣೆ ಯೊಂದಿಗೆ ಕೃತಕ ಬುದ್ಧಿಮತ್ತೆ, ಸಂವಹನ ಕೌಶಲ ಮೊದಲಾದ ಅಗತ್ಯ ಕೌಶಲಗಳು, ತಿಳುವಳಿಕೆ, ವಿಶೇಷ ತಜ್ಞತೆಗಳನ್ನು ಪರಿಚಯಿಸುತ್ತರುವುದು ವಿದ್ಯಾರ್ಥಿಗಳ ಒಟ್ಟಾರೆ ಬೆಳವಣಿಗೆಯ ದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಲಿದೆ.

ಪದವಿ ವಿದ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣ ಇಲಾಖೆ ಶುರು ಮಾಡಿರುವ ಈ ಪ್ರಯತ್ನವು ಹೆಚ್ಚು ಮುತುವರ್ಜಿಯಿಂದ ಜಾರಿಯಾಗಬೇಕು. ಆರಂಭಶೂರತ್ವ ತೋರದೆ, ನಿರಂತರವಾಗಿ ಹಮ್ಮಿಕೊಂಡರೆ ವಿದ್ಯಾರ್ಥಿಗಳಲ್ಲಿ ಹೊಸ ಕಾಲ ಉದ್ಯೋಗಗಳಿಗೆ ಬೇಕಾದ ಕೌಶಲಗಳನ್ನು ಬೆಳೆಸಲು ಸಹಾಯಕವಾಗಲಿದೆ. ಈ ಕಾರ್ಯಕ್ರಮದಲ್ಲಿ ನಿರಂತರ ನಿಗಾ ವ್ಯವಸ್ಥೆಯನ್ನು ಮಾಡುವುದು ಸೂಕ್ತ. ಇಲ್ಲದಿದ್ದರೆ, ನಿರಾಸಕ್ತಿ ಬೆಳೆದು, ಮಹತ್ವದ ಕಾರ್ಯಕ್ರಮವೂ ನಿರರ್ಥಕವಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಹೆಚ್ಚು ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next