ಶ್ರೀನಗರ್: ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಬಿಹಾರದ ವಲಸೆ ಕಾರ್ಮಿಕನೊಬ್ಬನನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಮತ್ತೊಂದು ಘಟನೆ ಶುಕ್ರವಾರ (ಆಗಸ್ಟ್ 12) ಬೆಳಗ್ಗೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಜಪ್ಪಿನಮೊಗರು ಬಳಿ ಹಿಟ್ ಆಂಡ್ ರನ್: ಓರ್ವ ಕಾರ್ಮಿಕ ಸಾವು, ಇನ್ನೋರ್ವನಿಗೆ ಗಾಯ
ಶುಕ್ರವಾರ ನಸುಕಿನ ವೇಳೆ ಉಗ್ರರು ವಲಸೆ ಕಾರ್ಮಿಕ ಮೊಹಮ್ಮದ್ ಅಮ್ರೇಝ್ ಎಂಬಾತನನ್ನು ಗುಂಡಿಟ್ಟು ಕೊಂದಿರುವುದಾಗಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅಮ್ರೇಝ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಗುರುವಾರ ರಜೌರಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಯತ್ನಿಸಿದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸಂದರ್ಭದಲ್ಲಿ ಮೂವರು ಸೇನಾ ಯೋಧರು ಹುತಾತ್ಮರಾದ ಘಟನೆಯ ನಂತರ ಈ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಯೋಧರಾದ ರಾಜೇಂದ್ರ ಪ್ರಸಾದ್, ಮನೋಜ್ ಕುಮಾರ್ ಮತ್ತು ಲಕ್ಷ್ಮಣನ್ ಡಿ ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.