Advertisement

ಒಂದಾಗಲಿ ಶ್ರೇಯಸ್ಸಿನ ಕನಸು ಮತ್ತು ನನಸು

01:11 AM Aug 26, 2020 | Hari Prasad |

ಯಾವುದನ್ನೇ ಆದರೂ ನಮ್ಮ ಮನಸ್ಸು ಗ್ರಹಿಸುವುದು ತನಗೆ ಈಗಾಗಲೇ ಗೊತ್ತಿರುವ ಇನ್ನೊಂದರೊಡನೆ ಹೋಲಿಸಿ; ಇನ್ನೊಂದರ ಆಧಾರದಲ್ಲಿ.

Advertisement

ಬಿಳಿ ಎಂದರೇನು ಎಂಬುದು ತಿಳಿಯುವುದು ಕಪ್ಪಿನ ಆಧಾರದಲ್ಲಿ. ಬಿಸಿ ಎಂಬುದು ಗೊತ್ತಾಗಲಿಕ್ಕೆ ನಮಗೆ ತಣ್ಣಗೆ ಎಂದರೇನು ಎಂಬುದು ಗೊತ್ತಿರಬೇಕು.

ಹೀಗೆ ಇನ್ನೊಂದರೊಡನೆ ಹೋಲಿಕೆಯಾಗುವ, ತದ್ವಿರುದ್ಧವಾಗುವ ಗುಣ ಈ ಸೃಷ್ಟಿಯ ಎಲ್ಲೆಲ್ಲೂ ಇದೆ ; ಕಷ್ಟ ಮತ್ತು ಸುಖ, ದುಃಖ ಮತ್ತು ಸಂತೋಷ, ಭೂಮಿ ಮತ್ತು ಆಕಾಶ, ಹುಟ್ಟು ಮತ್ತು ಸಾವು, ಪ್ರಕೃತಿ ಮತ್ತು ಪುರುಷ… ಹೀಗೆ. ಉಪನಿಷತ್ತು ಕೂಡ ಇದನ್ನು ಹೇಳುತ್ತದೆ.

ಹೀಗೆಯೇ ಒಳ್ಳೆಯದು ಮತ್ತು ಕೆಟ್ಟದು. ಒಳ್ಳೆಯದನ್ನು ಕನಸಿಗೆ ಹೋಲಿಸಿ ಹೇಳುವ ಕ್ರಮವಿದೆ. ‘ಅದೊಂದು ಸುಂದರ ಸ್ವಪ್ನದಂತಿತ್ತು…’ ಹಾಗೆಯೇ ಕೆಟ್ಟದನ್ನೂ; ‘ಆ ಕಾಲ ಒಂದು ಕೆಟ್ಟ ಕನಸಿನಂತೆ ಕಳೆದುಹೋಯಿತು’.
ಕನಸು ಹಾಗೆಯೇ. ನಾವು ಇಂದ್ರಿಯಗಳಿಂದ ಏನನ್ನು ಅನುಭವಿಸಲು ಸಾಧ್ಯವಿಲ್ಲವೋ ಅದನ್ನು ಸ್ವಪ್ನದಲ್ಲಿ ಕಾಣಬಹುದು, ಕೇಳಬಹುದು, ಅನುಭವಿಸಬಹುದು.

ಕನಸು ಕಾಣುವುದು ನಿದ್ದೆಯಲ್ಲಿ. ಅದು ನಮ್ಮ ದೇಹದ ಇಂದ್ರಿಯಗಳು ತಮ್ಮ ಗ್ರಹಣ ಶಕ್ತಿಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿ ವಿಶ್ರಾಂತಿಯನ್ನು ಪಡೆಯುವ ಸಮಯ. ಅದು ಆತ್ಮ ಅಥವಾ ನಮ್ಮೆಲ್ಲರೊಳಗೆ ಇರುವ ಬ್ರಹ್ಮನ ಒಂದಂಶ ಜಾಗೃತಗೊಂಡು ಯಾವುದೇ ಬಂಧನಗಳಿಲ್ಲದೆ ವಿಹರಿಸುವ ಸಮಯ.

Advertisement

ಆಗ ಸದ್ಯ ನಾವು ಇರುವ ವಾಸ್ತವದಲ್ಲಿ ಯಾವುದನ್ನೆಲ್ಲ ಅನುಭವಿಸಲು ಸಾಧ್ಯವಿಲ್ಲವೋ ಅದನ್ನೆಲ್ಲ ಆತ್ಮ ಅಥವಾ ಬ್ರಹ್ಮನು ಅನುಭವಿಸುತ್ತಾನೆ. ಆತ ಅರಸನಾಗಬಹುದು, ಆಳಾಗಬಹುದು, ಆಕಾಶಕ್ಕೇರಬಹುದು, ಸಿರಿವಂತನಂತೆ ವಿಹರಿಸಬಹುದು, ಮಗುವಾಗಬಹುದು. ಆ ಹೊತ್ತಿನಲ್ಲಿ ಪಂಚೇಂದ್ರಿಯಗಳ ಶಕ್ತಿಗಳೆಲ್ಲವೂ ಆ ಬ್ರಹ್ಮನನ್ನು ಹಿಂಬಾಲಿಸುತ್ತವೆ. ಅದು ಆದಿಯೂ ಅಂತ್ಯವೂ ಇಲ್ಲದ್ದು, ಸೃಷ್ಟಿಗೂ ನಾಶಕ್ಕೂ ಒಳಪಡದ್ದು…

ಬೃಹದರಣ್ಯಕ ಉಪನಿಷತ್ತಿನಲ್ಲಿ ಕ್ಷತ್ರಿಯನಾದ ಅಜಾತಶತ್ರುವು ಬಾಲಾಕಿ ಎಂಬ ಯುವಕನಿಗೆ ಆತ್ಮ ಅಥವಾ ಬ್ರಹ್ಮ ರಹಸ್ಯವನ್ನು ವಿವರಿಸಿದ್ದು ಹೀಗೆ. ಕನಸು ಕಾಣುವುದನ್ನು ಸಂಕಷ್ಟಗಳಲ್ಲಿ ಕಾಣುವ ಹೊಸ ಬೆಳಕಿಗೆ, ಆಶಾಭಾವನೆಗೆ, ಭರವಸೆಯ ಹೊಂಗಿರಣದೊಂದಿಗೆ ಹೋಲಿಸುವುದೂ ಇದೆ. ಅಂದರೆ ಈಗ ಇಲ್ಲದ್ದನ್ನು, ಭವಿಷ್ಯದಲ್ಲಿ ಪರಿಶ್ರಮದಿಂದ ಸಾಧ್ಯವಾಗಬಲ್ಲ ಹೊಸತನ್ನು ಕನಸಿನಲ್ಲಿ ಕಾಣುವ ಸಾಧ್ಯತೆ! ಒಳ್ಳೆಯ ಕನಸು ಕಂಡು, ಅದನ್ನು ಸಾಕಾರಗೊಳಿಸುವುದಕ್ಕಾಗಿ ಶ್ರಮಿಸಿದರೆ ‘ಸಾಧ್ಯತೆ’ಯು ನನಸಾಗುತ್ತದೆ.

ಅದಕ್ಕಾಗಿಯೇ ಇರಬೇಕು, ಮಕ್ಕಳು ಮಲಗುವುದಕ್ಕೆ ಮುನ್ನ ‘ಒಳ್ಳೆಯ ಕನಸು ಕಾಣಿ’ ಎಂದು ಹಿರಿಯರು ಹರಸುವುದು. ‘ಸ್ವೀಟ್‌ ಡ್ರೀಮ್ಸ್‌’ ಎನ್ನುವುದರ ಆಶಯವೂ ಇದೇ. ಹಗಲುಗನಸು ಎಂಬುದನ್ನು ಋಣಾತ್ಮಕವಾಗಿ ಉಪಯೋಗಿಸುವ ಕ್ರಮವಿದೆ.

ನಿಜಕ್ಕೂ ಹಾಗೇನಿಲ್ಲ. ನಿದ್ದೆಯಲ್ಲಿ ಮಾತ್ರವಲ್ಲ, ಎಚ್ಚರವಿದ್ದಾಗಲೂ ಒಳ್ಳೆಯದನ್ನು, ಶ್ರೇಯಸ್ಸನ್ನು ಕನಸೋಣ, ಋಣಾತ್ಮಕ ಆಲೋಚನೆಗಳನ್ನು ಬಿಟ್ಟು ಸುಭಿಕ್ಷೆಯನ್ನು ಚಿಂತಿಸೋಣ. ಆಗ ಒಳಗಿರುವ ಬ್ರಹ್ಮ ಅಥವಾ ಆತ್ಮನೂ ಸದ್ಯ ಅದರ ಆವಾಸ ಸ್ಥಾನವಾಗಿರುವ ಈ ದೇಹವೂ ಒಂದೇ ಶ್ರುತಿಯಲ್ಲಿರುವುದಕ್ಕೆ ಸಾಧ್ಯವಾಗುತ್ತದೆ.
ಆಗ ಶ್ರೇಯಸ್ಸಿನ ಕನಸು ಮತ್ತು ನನಸು ಒಂದಾಗುವುದಕ್ಕೆ ಸಾಧ್ಯ!

(ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next