Advertisement

Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್‌ ಸಿದ್ಧ: ಡಿಸಿಎಂ ಶಿವಕುಮಾರ್‌

06:26 PM Oct 16, 2024 | Team Udayavani |

ಬೆಂಗಳೂರು: ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳ ಬಹುದಿನಗಳ ಕನಸೊಂದು ನನಸಾಗಿದ್ದು,  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ  (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಜಂಟಿಯಾಗಿ ಚಾಲನೆ ನೀಡಿದರು.

Advertisement

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿನ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದ ಆವರಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ‘ಬಹು ನಿರೀಕ್ಷಿತ ಕಾವೇರಿ 5ನೇ ಹಂತದ ಯೋಜನೆಯಿಂದ ಬೆಂಗಳೂರಿನ ಮೂರನೇ ಒಂದು ಭಾಗದಷ್ಟು ನೀರು ಸಿಗುತ್ತದೆ. ಮುಂದಿನ 10 ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲ. 50 ಲಕ್ಷ ಜನರಿಗೆ ನೀರು ಬರಲಿದೆ. ಈ ಯೋಜನೆಗಾಗಿ ಸುಮಾರು 5,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ನಾನು ಏನು ಭರವಸೆ ನೀಡಿದ್ದೆನೋ ಅದನ್ನು ಬೆಂಗಳೂರಿನ ಜನರಿಗೆ ತಲುಪಿಸಿದ್ದೇನೆ ಎಂದರು.

6ನೇ ಹಂತಕ್ಕೆ ಡಿಪಿಆರ್‌ ಸಿದ್ಧ:
ಈ ಯೋಜನೆಯ ಮುಂದಿನ ಹಂತ ಅಂದರೆ ಕಾವೇರಿ 6ನೇ ಹಂತಕ್ಕೂ ಡಿಪಿಆರ್‌ ಸಿದ್ಧವಾಗಿದೆ. ‘ಕಾವೇರಿ 6ನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಆಧರಿಸಿ ಮುಂದಿನ ಯೋಜನೆ ರೂಪಿಸಲಾಗುವುದು. ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ. ಇದಲ್ಲದೆ ಇಡೀ ರಾಜ್ಯದಲ್ಲಿ ಕೆರೆಗಳ ತುಂಬಿಸುವಂತಹ ಕಾರ್ಯಕ್ರಮಗಳ ರೂಪಿಸುತ್ತಿದ್ದೇವೆ. ಹಂತ ಹಂತವಾಗಿ ರಾಜ್ಯದ ನೀರಿನ ಸಮಸ್ಯೆಗಳ ಬಗೆಹರಿಸಲು ನಮ್ಮ ಸರ್ಕಾರ ದಿಟ್ಟ ಹೆಜ್ಜೆಗಳ ಇಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.

ಭಾರತದಲ್ಲೇ ಬೃಹತ್‌ ಕುಡಿಯುವ ನೀರು ಯೋಜನೆ
ಇನ್ನು ಬುಧವಾರ ಲೋಕಾರ್ಪಣೆಯಾದ ಕಾವೇರಿ 5 ನೇ ಹಂತದ ನೀರು ಸರಬರಾಜು ಯೋಜನೆ ಭಾರತದಲ್ಲೇ ಅತ್ಯಂತ ದೊಡ್ಡದಾಗಿದ್ದು, ಬೆಂಗಳೂರಿನ ಸುಮಾರು 5 ಮಿಲಿಯನ್ ಜನರಿಗೆ ನೀರು ಸರಬರಾಜು ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ. ಈ  ಯೋಜನೆಯು 775 ಎಂಎಲ್‌ಡಿ ಸಾಮರ್ಥ್ಯದ ಭಾರತದ ಅತಿದೊಡ್ಡ ನೀರು ಸಂಸ್ಕರಣಾ ಘಟಕದ ನಿರ್ಮಾಣ ಒಳಗೊಂಡಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ ಜೈಕಾ ಸಂಸ್ಥೆಯ ಸಹಭಾಗಿತ್ವದಲ್ಲಿ 4,336 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ.

ಈ ಯೋಜನೆಯಿಂದ ಯಾರಿಗೆಲ್ಲಾ ಲಾಭ?

ಈ ಯೋಜನೆಯಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ಬ್ಯಾಟರಾಯನಪುರ, ಟಿ.ದಾಸರಹಳ್ಳಿ, ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ ಹಾಗೂ ಬೊಮ್ಮನಹಳ್ಳಿ ವಲಯದ ವಿವಿಧ ಹಳ್ಳಿಗಳ ಮನೆ ಮನೆಗೂ ನೀರು ಸರಬರಾಜು ಆಗಲಿದೆ. ಜಲ ಮಂಡಳಿಯಿಂದ ಬೆಂಗಳೂರು ನಗರದಲ್ಲಿ 10.64 ಲಕ್ಷ ಕಾವೇರಿ ನೀರಿನ ಸಂಪರ್ಕ ನೀಡಲಾಗಿದೆ. ಈ ಯೋಜನೆ ಜಾರಿ ಬಳಿಕ 4 ಲಕ್ಷ ಹೊಸ ಸಂಪರ್ಕ ನೀಡಲಾಗುತ್ತಿದೆ. ಇದುವರೆಗೆ ಪ್ರತಿ ತಿಂಗಳು ಬೆಂಗಳೂರಿನಲ್ಲಿ 1.58 ಟಿಎಂಸಿ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈ ಯೋಜನೆಯಿಂದ ಪ್ರತಿ ತಿಂಗಳು 2.4 ಟಿಎಂಸಿ ನೀರು ಸರಬರಾಜು ಆಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರನ್ನು ಪೂರೈಸುವ ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾದ ಕಾವೇರಿ 5ನೇ ಹಂತದ ಯೋಜನೆಯ ಉದ್ಘಾಟನೆಗೂ ಮುನ್ನ ಶುಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿಸಿ, ಗಂಗಾ ಪೂಜೆ ಸಲ್ಲಿಸಿ, ಸಪ್ತ ನದಿಗಳ ನೀರನ್ನು ತಂದು ಪೂಜೆ ನೆರವೇರಿಸಲಾಯಿತು. #ಮನೆಮನೆಗೂಕಾವೇರಿನೀರುpic.twitter.com/AlPOXH49Ma

— DK Shivakumar (@DKShivakumar) October 16, 2024


ಲೋಕಾರ್ಪಣೆಗೂ ಮುನ್ನ ಶಾಸ್ತ್ರೋಕ್ತ ಹೋಮ, ಗಂಗಾ ಪೂಜೆ
ಇನ್ನು ಯೋಜನೆ ಲೋಕಾರ್ಪಣೆಗೊಳಿಸುವುದಕ್ಕೂ ಮೊದಲು ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ,  ದುರ್ಗಾ ಸಪ್ತ ಸತಿ ಪಾರಾಯಾಣ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಶ ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಹೋಮ ಹವನದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಡಿಸಿಎಂ ಡಿ.ಕೆ ಶಿವಕುಮಾರ್‌ ಪೂಜಾ ಕೈಂಕರ್ಯ ನೆರವೇರಿಸಿದರು. ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಜೊತೆಗಿದ್ದರು. ಇದೇ ವೇಳೆ ಜಾನಪದ ಕಲಾ ತಂಡಗಳ ಮೆರವಣಿಗೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next