ಬೆಂಗಳೂರು: ಲಗ್ಗೆರೆಯಲ್ಲಿ ಶುಕ್ರವಾರ ನಡೆದ ಸಿಎಂ ಕಾರ್ಯಕ್ರಮದಲ್ಲಿ ಪಾಲಿಕೆಯ ಜೆಡಿಎಸ್ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್, ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಿದೆ. ಅಲ್ಲದೆ, ಶಾಸಕ ಮುನಿರತ್ನ ಮಂಜುಳಾ ಅವರ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದೆ.
ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ನ ಪರಿಷತ್ ಸದಸ್ಯ ಟಿ.ಎ ಶರವಣ, “ಮುಖ್ಯಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ ಮಹಿಳಾ ಕಾರ್ಪೊರೇಟರ್‌ವೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಜನಪ್ರತಿನಿಧಿಗಳಿಗೆ ರಕ್ಷಣೆಯಿಲ್ಲದಿದ್ದರೆ ಜನಸಾಮಾನ್ಯರಿಗೆ ಸರ್ಕಾರ ಇನ್ನೆಂಥ ರಕ್ಷಣೆ ನೀಡುತ್ತದೆ ಎಂಬ ಅನುಮಾನಗಳು ಮೂಡುತ್ತವೆ.
ಈ ಕೂಡಲೇ ಶಾಸಕ ಮುನಿರತ್ನ, ಮಂಜುಳಾ ನಾರಾಯಣಸ್ವಾಮಿ ಅವರಲ್ಲಿ ಕ್ಷಮೆಯಾ ಚಿಸಬೇಕು ಮತ್ತು ತಪ್ಪು ಮಾಡಿದವರಿಗೆ ರಕ್ಷಣೆ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಆದಿಚುಂಚನಗಿರಿ ಮಠದ ನಿರ್ಮಾಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು,’ ಎಂದು ಎಚ್ಚರಿಕೆ ನೀಡಿದ್ದಾರೆ.
“ಬೆಂಗಳೂರು ಅಭಿವೃದ್ಧಿಯ ದೃಷ್ಟಿಯಿಂದ ಜೆಡಿಎಸ್, ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆದರೆ ಕಾಂಗ್ರೆಸ್ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. ಈ ಕುರಿತು ವರಿಷ್ಠರಿಗೆ ಮಾಹಿತಿ ನೀಡಿ ಅವರ ಸಲಹೆಯಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಮಂಜುಳಾ ಅವರಿಗೆ ನ್ಯಾಯ ದೊರಕಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು. ಶಾಸಕರ ವರ್ತನೆಯ ಕುರಿತು ಹೈಕಮಾಂಡ್‌ಗೆ ಪತ್ರ ಬರೆಯಲಾಗುವುದು,’ ಎಂದು ಹೇಳಿದರು.
ಮಂಜುಳಾ ಪತಿ ನಾರಾಯಣಸ್ವಾಮಿ ಮಾತನಾಡಿ, “ಪಾಲಿಕೆ ಸದಸ್ಯ ಜಿ.ಕೆ.ವೆಂಕಟೇಶ್ ಹಾಗೂ ಸುನಂದಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೂಡಲೇ ಅವರನ್ನು ಬಂಧಿಸಬೇಕು. ಶಾಸಕ ಸ್ಥಾನದಿಂದ ಮುನಿರತ್ನ ಅವರನ್ನು ವಜಾಗೊಳಿಸುವಂತೆ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು,’ ಎಂದು ತಿಳಿಸಿದರು.
“ಮುನಿರತ್ನ ಅವರು ವಿಕೃತ ಮನಸ್ಥಿತಿ ಹೊಂದಿದ್ದಾರೆ. ಅವರ ಕ್ಷೇತ್ರಕ್ಕೆ ಒಳಪಟ್ಟ ಮಹಿಳಾ ಕಾರ್ಪೊರೇಟರ್‌ಗಳಾದ ಮಮತಾ ವಾಸುದೇವ್, ಆಶಾ ಸುರೇಶ್ ಹಾಗೂ ಮಂಜುಳಾ ಅವರಿಗೆ ತೊಂದರೆ ನೀಡುತ್ತಿದ್ದಾರೆ. ಕಾನೂನನ್ನು ದುರುಪಯೋಗ ಮಾಡಿಕೊಂಡು ಇಲ್ಲಸಲ್ಲದ ಕೇಸುಗಳನ್ನು ಅವರ ಮೇಲೆ ದಾಖಲು ಮಾಡುತ್ತಿದ್ದಾರೆ. ಅವರು ತಮ್ಮ ವರಸೆಯನ್ನು ಹೀಗೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತದೆ,’ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆಯ ಜೆಡಿಎಸ್ ಗುಂಪಿನ ನಾಯಕಿ ರಮೀಳಾ ಉಮಾಶಂಕರ್, ಉಪಮೇಯರ್ ಎಂ.ಆನಂದ್, ಮಾಜಿ ವಿಪಕ್ಷ ನಾಯಕ ಆರ್. ಪ್ರಕಾಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.